ತಾಳಿಕೋಟೆ: ನಾನು ನನ್ನದು ನನ್ನ ಜಾತಿ ಎಂದು ಬಾಯಲ್ಲಿ ಬರುವುದು ಬೇಡ. ಎಲುಬಿಲ್ಲದ ನಾಲಿಗೆಯನ್ನು ಸುಧಾರಿಸಿಕೊಂಡು ಮಾತನಾಡುವ ಕಾರ್ಯವಾಗಬೇಕು ಎಂದು ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲಶಿವಯೋಗಿ ಸಿದ್ದಲಿಂಗ ದೇವರು ನುಡಿದರು.
ಡಾ| ಎಪಿಜೆ ಅಬ್ದುಲ್ ಕಲಾಂ ಸೋಷಿಯಲ್ ವೇಲ್ ಫೇರ್ ಫೌಂಡೇಶನ್ ವತಿಯಿಂದ ವಿಠ್ಠಲ ಮಂದಿರ ಸಬಾಭವನದಲ್ಲಿ ಏರ್ಪಡಿಸಲಾದ ಮೂರನೇ ವರ್ಷದ ಸೌಹಾರ್ದ ಭಾರತ ಸಮಾರಂಭದಲ್ಲಿ ರಾಜ್ಯಮಟ್ಟದ ಸಿರತ್ ಅಭಿಯಾನದ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ನಿಜವಾದ ಶ್ರೇಷ್ಠ ಧರ್ಮವೆಂದರೆ ಉಪಾಸಿಕರಿಗೆ ಅನ್ನ ಹಾಕಿ ನೀರು ಕೊಡಿ, ಅದುವೇ ಶ್ರೇಷ್ಠ ಧರ್ಮ. ಜಗತ್ತಿನಲ್ಲಿ ಸಾಕಷ್ಟು ದೇಶಗಳಿವೆ ಅವುಗಳು ತಮ್ಮ ತಮ್ಮ ಜಾತಿ ಧರ್ಮಗಳಿಗೆ ಬಡಿದಾಡುತ್ತಿವೆ. ಆದರೆ ಎಲ್ಲವನ್ನು ಒಗ್ಗೂಡಿಸಿಕೊಂಡು ಹೊರಟಿರುವ ದೇಶ ಭಾರತ. ಯಾವ ಕಾಲ ಗ್ರಂಥಗಳು ಕೆಟ್ಟಿಲ್ಲ, ಮಾನವರಾದವರ ಮನಸ್ಸುಗಳು ಕೆಟ್ಟ ಕಾರಣದಿಂದಲೇ ಬೇಧ ಭಾವವೆಂಬುದು ಹೊರ ಹೊಮ್ಮುತ್ತಲಿದೆ. ಅದು ಹೋದರೆ ಭವ್ಯಭಾರತ ನಿರ್ಮಾಣವಾಗಿ ಡಾ| ಅಬ್ದುಲ್ ಕಲಾಂ ಅವರ ಕನಸು ನನಸಾಗಲಿದೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ಡಾ| ಅಬ್ದುಲ್ ಕಲಾಂ ಅವರ ಹೆಸರು ಹೇಳಿದರೆ ಸಾಕು ಭಾವೈಕ್ಯತೆ ಬರುತ್ತದೆ. ಹಿಂದೂ-ಮುಸ್ಲಿಂ ಎಂಬ ಭಾವೈಕ್ಯತೆ ಎಂಬುದು ನಶಿಸಿ ಹೋಗಬಾರದೆಂಬುದು ಆಸೆ ಅವರದ್ದಾಗಿತ್ತು. ಭಾರತದ ಶ್ರೇಷ್ಠತೆ ಎಂಬುದನ್ನು ಧಿಕ್ಕರಿಸುವ ಕಾರ್ಯವಾಗಬಾರದು. ಮಹ್ಮದ್ ಪೈಗಂಬರ್, ಮಹಾತ್ಮ ಗಾಂಧೀ ಜಿ ಅವರು ಪ್ರತಿಪಾದಿಸಿದಂತಹ ಧರ್ಮ ಇಂದು ಬೇಕಾಗಿದೆ ಎಂದರು.
ಶಿಕ್ಷಕ ಲಾಲ್‌ಹುಸೇನ್ ಕಂದಗಲ್ಲ ಮಾತನಾಡಿ, ಸೌಹಾರ್ದತೆ ಎಂಬುದು ಬರಬೇಕೆಂದರೆ ಸಂಶಯ ಬೀಜ ಬಿತ್ತುವ ಕಾರ್ಯವಾಗಬಾರದು. ಪರಸ್ಪರ ಪ್ರೇಮ, ಸೌಹಾರ್ದತೆ ಭಾವನೆಯಿಂದ ಬದುಕಬೇಕಾದರೆ ಸಂಶಯದಿಂದ ಮುಕ್ತರಾಗಬೇಕು. ಕೊರೊನಾದಂತೆ ಕೋಮು ವೈರಸ್ ಎಂಬುದು ಆತ್ಮ ಪ್ರವೇಶಿಸಬಾರದು. ಇದರಿಂದ ಎಚ್ಚರದಿಂದ ಇರಬೇಕು. ದೇವರಿಗೆ ಶರಣಾಗದಿದ್ದರೂ ಮರಣಕ್ಕೆ ಶರಣಾಗಲೇ ಬೇಕಾಗಿದೆ. ಅಸೂಹೆ ಪಡಬಾರದು. ಜಾತಿ ಪಂಗಡ, ಕುಲ-ಗೋತ್ರ ಹೆಸರಿನ ಮೇಲೆ ಕಾದಾಟ ಮಾಡಬಾರದೆಂದು ಪ್ರವಾದಿಗಳು ಹೇಳಿದ್ದಾರೆ ಎಂದರು.
ಪತ್ರಕರ್ತ ಅಬ್ದುಲ್‌ಗನಿ ಮಕಾಂದಾರ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಮಯದಲ್ಲಿ ಕೋಮು ಸೌಹಾರ್ದತೆ ಭಾವನೆ ಮೂಡಿಸಿದ ದಿ| ಸುಬ್ಬಯ್ಯ ಹೆಬಸೂರ, ಸೈಯದಸೀರಾಜುದ್ದೀನ ಖಾಜಿ, ಮಂಡಿಪೀರಾ ಅವರ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತು. ಸಮಾಜ ಸೇವಕ ಡಾ| ಬಾಪುಗೌಡ ಪಾಟೀಲ, ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ಎಸ್.ಎಸ್. ಗಡೇದ, ಜೈಸಿಂಗ್ ಮೂಲಿಮನಿ, ಪರಶುರಾಮ ತಂಗಡಗಿ, ಪ್ರಭುಗೌಡ ಮದರಕಲ್ಲ, ಶಫಿಕ್ ಮುರಾಳ, ಮಾನಸಿಂಗ್ ಕೊಕಟನೂರ, ಶಫಿಕ್ ಇನಾಮದಾರ, ಇಬ್ರಾಹಿಂ ಮನ್ಸೂರ, ಮಹಾಂತೇಶ ಮುರಾಳ, ಎ.ಎಸ್ .ನಮಾಜಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಸೈಯದಶಕೀಲಹ್ಮದ ಖಾಜಿ, ಕೆ.ರಹೇಮಾನ ಚಿತ್ತರಗಿ, ವಿ.ಸಿ. ಹಿರೇಮಠ (ಹಂಪಿಮುತ್ಯಾ), ಚಿದಂಬರ ಕರಮರಕರ, ಕಾಶೀನಾಥ ಸಜ್ಜನ, ಗುಂಡುರಾವ್ ಧನಪಾಲ, ಮೋದಿನಸಾಬ ನಗಾರ್ಚಿ, ಮಹ್ಮದ ರಫಿಕ್ ಇನಾಮದಾರ ಇದ್ದರು. ಮಹ್ಮದ ರಫಿಕ್‌ಸಾಬ ನಾಶಿ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ನಿರೂಪಿಸಿದರು. ಅಬ್ದುಲ್ ಗನಿ ಮಕಾಂದಾರ ವಂದಿಸಿದರು.