Advertisement

ಡಾ|ಚಿತ್ತರಂಜನ್‌ ಹತ್ಯೆಗೆ ಕಾಲುಶತಮಾನ

07:29 PM Apr 11, 2021 | Team Udayavani |

ಹೊನ್ನಾವರ: 10-04-1996 ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಹಾಲ್‌ ನಲ್ಲಿ ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಾಗ ಊಟಕ್ಕೆ ಕರೆ ಬಂತೆಂದು ಟಿವಿ ಆಫ್‌ ಮಾಡಿ ಒಳಗೆ ಹೋಗಲು ಎದ್ದು ನಿಂತ ಶಾಸಕ ಡಾ| ಚಿತ್ತರಂಜನರ ತಲೆಯನ್ನು ಸೀಳಿಕೊಂಡು ದಾಟಿ ಹೊದ ಗುಂಡಿನಿಂದಾಗಿ ಅವರು ಅಲ್ಲಿಯೇ ಕುಸಿದರು. ಇದಕ್ಕೆ ಇದೀಗ 25 ವರ್ಷಗಳಾಗಿ ಹೋದವು. ಅವರ ಹೆಸರಿನಲ್ಲಿ ಕರಾವಳಿಯಲ್ಲಿ ಗೆಲ್ಲಲು ಆರಂಭಿಸಿದ್ದ ಬಿಜೆಪಿ ಈಗಲೂ ಗೆಲ್ಲುತ್ತಲೇ ಇದೆ.

Advertisement

ಎಲ್ಲ ಧರ್ಮೀಯರಿಗೆ, ಜಾತಿಯವರಿಗೆ ಸಮಾನವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದ ಡಾ| ಚಿತ್ತರಂಜನ್‌ ಶ್ರೀನಿವಾಸ ಭಟ್‌ ದಕ್ಷಿಣ ಕನ್ನಡದ ಉಪ್ಪೂರಿನಿಂದ ಬಂದು ನೆಲೆಸಿ ಡಾ| ಯು. ಚಿತ್ತರಂಜನ್‌ ಎಂದು ಪ್ರಸಿದ್ಧರಾದರು. ಕಾಲುಶತಮಾನಕ್ಕೂ ಹೆಚ್ಚುಕಾಲ ತನಗಿಂತ ಹೆಚ್ಚು ಕಲಿತ ವೈದ್ಯರನ್ನೂ ನೇಮಿಸಿಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಿ ಪ್ರಸಿದ್ಧರಾದರು.

ಸದಾ ನಗುಮುಖದ ಡಾ| ಚಿತ್ತರಂಜನ್‌ ಭಟ್ಕಳಕ್ಕೆ ರಂಜನ್‌ ಡಾಕ್ಟರ್‌ ರಾದರು. ಸರ್ವರ ಹಿತ ಬಯಸುವ, ಮೃದು ಹಿಂದುತ್ವದ ಪ್ರತಿಪಾದಕ ಡಾ| ಚಿತ್ತರಂಜನ್‌ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು. ಭಟ್ಕಳದಲ್ಲಿ ಡಾ| ಚಿತ್ತರಂಜನ್‌, ಹೊನ್ನಾವರದಲ್ಲಿ ಡಾ| ಎಂ.ಪಿ. ಕರ್ಕಿ, ಕುಮಟಾದಲ್ಲಿ ಡಾ| ಟಿ.ಟಿ. ಹೆಗಡೆ, ಕಾರವಾರದಲ್ಲಿ ಡಾ| ಎಸ್‌.ವಿ. ಪಿಕಳೆ ಬಿಜೆಪಿಯ ದೀಪ ಹಚ್ಚಿದವರು. ಹಲವು ದೇವಸ್ಥಾನಗಳ ಜೀರ್ಣೋದ್ಧಾರ, ಹಿಂದುಗಳಲ್ಲಿ ಸ್ವಾಭಿಮಾನ ಬೆಳೆಸಿದ್ದರ ಹೊರತಾಗಿ ಚಿತ್ತರಂಜನ್‌ ಅಪರಾಧ ಅನ್ನಿಸುವ, ಪ್ರಜಾಪ್ರಭುತ್ವಕ್ಕೆ ಹೊರತಾದ ಯಾವುದನ್ನೂ ಮಾಡಿರಲಿಲ್ಲ.

ಅದಾಗಲೇ ದೇಶದಲ್ಲಿ ಕೋಮುದ್ವೇಷ ಚಿಗುರಿತ್ತು. ಸಹಜವಾಗಿ ಭಟ್ಕಳದಲ್ಲಿ ಅದು ಮೊಳಕೆ ಒಡೆದಿತ್ತು. ಹೊಸ ಯುವಕರು ಹಲವು ಬಾರಿ ಘರ್ಷಣೆಗೆ ಇಳಿದಿದ್ದರು. 1993ರಲ್ಲಿ 10 ತಿಂಗಳು ಭಟ್ಕಳದಲ್ಲಿ ಕೋಮುಗಲಭೆ ನಡೆದು ಹೋಯಿತು. ಆ ಕಾಲದಲ್ಲೂ ಡಾ| ಚಿತ್ತರಂಜನ್‌ ತಮ್ಮ ಮೃದು ಹಿಂದುತ್ವದ ಧೋರಣೆ ಬಿಟ್ಟಿರಲಿಲ್ಲ. ಆದರೆ ಭಟ್ಕಳದ ವಾತಾವರಣ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೂ ಚಿತ್ತರಂಜನ್‌ ರಂತಹ ಸಜ್ಜನರನ್ನು ಕಳೆದುಕೊಳ್ಳಬೇಕಾಯಿತು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಧಿಕಾರದಲ್ಲಿದ್ದಾಗ ಶಾಸಕರ ಹತ್ಯೆಯೆಂದು ಪ್ರಥಮ ದಾಖಲಾಯಿತು. ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಪಾಲ್ಗೊಂಡಿದ್ದರು.

ಭಟ್ಕಳದಲ್ಲಿ ಮೌನ ಹೆಪ್ಪುಗಟ್ಟಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಡಾ| ಚಿತ್ತರಂಜನ್‌ ಶವದ ಫೋಟೋ ನಂತರದ ಚುನಾವಣೆಯಲ್ಲಿ ಬಳಕೆಯಾಯಿತು. ದಕ್ಷಿಣೋತ್ತರ ಕನ್ನಡ ಜಿಲ್ಲೆಯನ್ನು ತಲ್ಲಣಗೊಳಿಸಿದ ಚಿತ್ತರಂಜನ್‌ ಹತ್ಯೆಯ ತನಿಖೆಯನ್ನು ಪೊಲೀಸರು ಆರಂಭಿಸಿ ಅದು ಸಿಐಡಿಗೆ ಹೋಗಿ ರಾಜ್ಯ ಸರ್ಕಾರದ ಮೇಲೆ ವಿಶ್ವಾಸವಿಲ್ಲವೆಂದು ಬಿಜೆಪಿ ಅಭಿಪ್ರಾಯಪಟ್ಟ ಕಾರಣ ಸಿಬಿಐಗೆ ಹೋಯಿತು. ತನಿಖೆ ನಡೆಸುತ್ತ ಹಲವು ವರ್ಷ ಕಳೆದ ಸಿಬಿಐ “ಸಿ’ ರಿಪೋರ್ಟ್‌ ಹಾಕಿ ಕೈ ಚೆಲ್ಲಿತು. ರಾಮಚಂದ್ರ ಹೆಗಡೆ ಇದಕ್ಕೆ ಆಕ್ಷೇಪವೆತ್ತಿ ತನಿಖೆ ಆಗಲೇಬೇಕು ಎಂದ ಕಾರಣ ಪುನಃ ತನಿಖೆ ನಡೆದಿದೆ.

Advertisement

ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದರೂ ಈವರೆಗೂ ತನಿಖೆಯೇ ಮುಗಿದಿಲ್ಲ! ಚಿತ್ತರಂಜನ್‌ ಶಿಷ್ಯರು, ಅವರ ಸಿದ್ಧಾಂತವನ್ನು ಪ್ರತಿಪಾದಿಸುವವರು ಅನ್ನುತ್ತ 25 ವರ್ಷಗಳಲ್ಲಿ ಹಲವರು ಅಧಿಕಾರ ಅನುಭವಿಸಿದರು. ಅನುಭವಿಸುತ್ತಲೇ ಇದ್ದಾರೆ. ಚಿತ್ತರಂಜನ್‌ ಹೆಸರನ್ನು ಉಳಿಸುವ ಒಂದು ಸಂಸ್ಥೆ ಅಥವಾ ಯೋಜನೆ, ಒಂದು ಪುಸ್ತಕ ಯಾವುದನ್ನೂ ಈವರೆಗೆ ಫಲಾನುಭವಿಗಳು ಪ್ರಕಟಿಸಲಿಲ್ಲ. ಅಳಿದರೇನು ದೇಹವಿಂದು ಧ್ಯೇಯದೀಪ ಉರಿವುದು, ನವ ಜನಾಂಗ ನೆಗೆದು ಬಂದು ತೈಲವದಕೆ ಸುರಿವುದು ಎಂದು ಪಂಡಿತ ದೀನದಯಾಳ್‌ ಉಪಾಧ್ಯಾಯರು ಹತ್ಯೆಯಾದಾಗ ಹೇಳಲಾಗಿತ್ತು. ಅಂದು ಅಡ್ವಾಣಿಜೀ ಅವರು ಇದನ್ನೇ ಪುನರುಚ್ಚರಿಸಿದ್ದರು. ಚಿತ್ತರಂಜನ್‌ ಧ್ಯೇಯ ದೀಪ ಉರಿಯುತ್ತಿದೆಯೇ ಎಂಬುದನ್ನು ಸಂಬಂಧಿಸಿದವರೇ ಹೇಳಬೇಕು.

ಚಿತ್ತರಂಜನ್‌ ಕುರಿತಾಗಿ ಅಜಾತಶತ್ರು ಎಂಬ ಪುಸ್ತಕವನ್ನು ಅವರ ಸಹೋದರಿ ಇತ್ತೀಚೆ ಪ್ರಕಟಿಸಿದ್ದಾರೆ. ಮಗ ರಾಜೇಶ ಮಂಗಳೂರು ಕೆಎಂಸಿಯಲ್ಲಿ ಹೃದಯತಜ್ಞ ವೈದ್ಯರಾಗಿದ್ದಾರೆ. ಕಾಲ ಕಳೆದು ಹೋಗಿದೆ. ಗಾಂಧಿ ನಾಡಿನಲ್ಲಿ ತ್ಯಾಗಿಗಳ, ದೇಶಭಕ್ತರ ಹೆಸರನ್ನು ಅಗತ್ಯವಿದ್ದಾಗ ಬಳಸುವುದು, ಮತ್ತೆ ಮರೆಯುವುದು ಸಹಜ ಎಂಬಂತಾಗಿದೆ. ಚಿತ್ತರಂಜನ್‌ ಅವರಲ್ಲೊಬ್ಬರು. ಸದಾ ಪತ್ರಕರ್ತರನ್ನು ಪ್ರೀತಿಸುತ್ತ, ಒಡನಾಡುತ್ತಿದ್ದ ಅವರ ನೆನಪು ಅವರ ಕಾಲದಲ್ಲಿ ಬರೆಯುತ್ತಿದ್ದ ಎಲ್ಲರಿಗೂ ಹಸಿರಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next