Advertisement
ನೆಕ್ಕಿಲದ ಡಂಪಿಂಗ್ ಯಾರ್ಡ್‌ನಲ್ಲಿ ದಿನಂಪ್ರತಿ ಸಂಗ್ರಹವಾಗಿರುವ ತ್ಯಾಜ್ಯ ಸಂಸ್ಕರಣೆಯಾಗದೆ ನೇರವಾಗಿ ಮಣ್ಣಿನೊಳಗೆ ಹುದುಗಿ ಪರಿಸರ ಇಡೀ ದುರ್ನಾತ, ರೋಗ ರುಜಿನಗಳ ಭೀತಿಗೆ ಒಳಗಾಗಿದ್ದು ಹೀಗಾಗಿ ಡಂಪಿಂಗ್ ಯಾರ್ಡ್ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಹತ್ತಾರು ವರ್ಷಗಳಿಂದ ಬೇಡಿಕೆ ಇದೆ. ಇದೀಗ ಲ್ಯಾಂಡ್ ಫಿಲ್ ಅನ್ನು ಮುಕ್ತಗೊಳಿಸುವ ನಿರೀಕ್ಷೆ ಮೂಡಿಸಿದೆ.
ಸ್ವಚ್ಛ ಭಾರತ್ ಮಿಶನ್‌ನಡಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ನಗರಸಭೆಗೆ ಬಿಡುಗಡೆಗೊಂಡಿರುವ 1.41 ಕೋ.ರೂ.ಅನುದಾನವನ್ನು ಹಳೆ ತ್ಯಾಜ್ಯ ತೆರವಿಗೆ ಬಳಸುವ ಬಗ್ಗೆ ಡಿಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲು ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಿದೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಹದಿನೈದು ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ಬಳಿಕ ಇದನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿ ಅಲ್ಲಿಂದ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. 4.5 ಕೋ.ರೂ ವೆಚ್ಚ
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿಯ ಪ್ರಕಾರ ಹಳೆ ತ್ಯಾಜ್ಯ ತೆರವಿಗೆ ಡಿಪಿಆರ್ ಸಿದ್ಧಗೊಳಿಸಬೇಕು. 2006 ರಿಂದ ತ್ಯಾಜ್ಯ ಹಾಕಲಾಗುತ್ತಿದ್ದು ದಿನಂಪ್ರತಿ 10 ಟನ್ ಲೆಕ್ಕದಲ್ಲಿ 45 ರಿಂದ 50 ಸಾವಿರ ಟನ್ ತ್ಯಾಜ್ಯ ಮಣ್ಣಿನೊಳಗೆ ಇರಬಹುದು. ಪ್ರಸ್ತುತ ವರ್ಷಗಳಲ್ಲಿ 15 ರಿಂದ 20 ಟನ್ ತ್ಯಾಜ್ಯ ಯಾರ್ಡ್‌ಗೆ ಸೇರುತ್ತಿದೆ. ಈ ಎಲ್ಲ ತ್ಯಾಜ್ಯ ತೆರವಿಗೆ 4.5 ಕೋ.ರೂ.ವೆಚ್ಚ ತಗಲಲಿದ್ದು ಡಿಪಿಆರ್ ಬಳಿಕ ವೆಚ್ಚದ ವಿವರ ಸ್ಪಷ್ಟವಾಗಿ ದೊರೆಯಲಿದೆ. ಈಗಾಗಲೇ ಸ್ವಚ್ಛ ಭಾರತ್ ಮಿಷನ್‌ನಡಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಬಿಡುಗಡೆಗೊಂಡಿರುವ 1.41 ಕೋ.ರೂ.ಅನ್ನು ತ್ಯಾಜ್ಯ ತೆರವಿಗೆ ಬಳಸಲು ನಿರ್ಧರಿಸಿದ್ದು ಉಳಿದ ಮೊತ್ತದ ಕ್ರೋಢೀಕರಣ ಆಗಬೇಕಿದೆ.
Related Articles
ಹಳೆ ತ್ಯಾಜ್ಯವನ್ನು ತೆರವುಗೊಳಿಸಿದ ಬಳಿಕ ಉಚಿತವಾಗಿ ಸಾಗಾಟ ಮಾಡಲು ಚೆನ್ನೈ ಕಂಪೆನಿ ಜತೆ 2024 ರ ತನಕ ನಗರಸಭೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇದರ ಪ್ರಕಾರ ತಿಂಗಳಿಗೆ 15 ಟನ್ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಿಗೆ ಸಾಗಿಸಬೇಕು. ತ್ಯಾಜ್ಯ ತೆರವು ಮಾಡಿ ಬೇಲ್ ಮಾಡಿಡುವುದು ನಗರಸಭೆಯ ಜವಾಬ್ದಾರಿಯಾದರೆ ಇದನ್ನು ಉಚಿತವಾಗಿ ಸಾಗಾಟ ಮಾಡಿ ಸಿಮೆಂಟ್ ಕಂಪೆನಿಗಳಿಗೆ ಪೂರೈಕೆ ಮಾಡುವುದು ಚೆನ್ನೈ ಕಂಪೆನಿಯ ಕೆಲಸವಾಗಿದೆ. ಬೇಲ್‌ಗೆ ಪೂರಕವಾಗಿ ನಗರಸಭೆಯು 15ನೇ ಹಣಕಾಸಿನ ಯೋಜನೆಯಡಿ ಬೇಲಿಂಗ್ ಯುನಿಟ್‌ಗೆ ಪ್ರಸ್ತಾವನೆ ಸಲ್ಲಿಸಿದೆ. ಹಳೆ ತ್ಯಾಜ್ಯವನ್ನು ಮಣ್ಣಿನೊಳಗಿನಿಂದ ತೆಗೆದು ಬೇಲ್ ಮಾಡಿದರೆ ಅದನ್ನು ಸಿಮೆಂಟ್ ಕಂಪೆನಿಗಳಿಗೆ ಕೊಂಡು ಹೋಗಲು ಸುಲಭವಾಗಲಿದೆ ಎನ್ನುವುದು ಇದರ ಲೆಕ್ಕಚಾರ.
Advertisement
ಇದನ್ನೂ ಓದಿ:ಸೋಮಣ್ಣ, ನನ್ನ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ : ಆರ್. ಅಶೋಕ್ ಸ್ಪಷ್ಟನೆ
ಶೂನ್ಯ ತ್ಯಾಜ್ಯ ವಲಯಮಣ್ಣಿನೊಳಗಿನ ತ್ಯಾಜ್ಯ ತೆರವಾದ ಬಳಿಕ ನಗರವು ಲ್ಯಾಂಡ್ ಫಿಲ್ ಮುಕ್ತ ನಗರವಾಗಿ ಗುರುತಿಸಲಿದೆ. ಸಂಗ್ರಹವಾಗುವ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಿ ಘನತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಿ ಅದನ್ನು ಇಂಧನವಾಗಿ ಬಳಸುವ ಮಹತ್ವದ ಯೋಜನೆಗೆ ರೋಟರಿ ಸಂಸ್ಥೆ ಮುಂದಾಗಿದ್ದು ನಗರಸಭೆ ಈಗಾಗಲೇ ಅನುಮೋದನೆ ನೀಡಿದೆ. ರೋಟರಿ ಕ್ಲಬ್ ಪುತ್ತೂರು ಪೂರ್ವ ನೇತೃತ್ವದಲ್ಲಿ ಬೆಂಗಳೂರಿನ ಸೈನೋಡ್ ಬಯೋಸಯನ್ಸ್ ಕಂಪೆನಿಯ ಸಲಹೆಯಡಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಸುಮಾರು 4.15 ಕೋ.ರೂ. ವೆಚ್ಚದ ಯೋಜನೆ ಇದಾಗಿದ್ದು, ರೋಟರಿ ಸಂಸ್ಥೆ ಪೂರ್ಣ ಬಂಡವಾಳ ಹೂಡಲಿದೆ. ನಗರಸಭೆಯು ಡಂಪಿಂಗ್ ಯಾರ್ಡ್‌ನಲ್ಲಿ 2 ಎಕ್ರೆ ಜಾಗ, ದಿನಂಪ್ರತಿ 20 ಟನ್‌ನಷ್ಟು ಹಸಿ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಲಿದೆ. ಮುಂದಿನ 15 ವರ್ಷಗಳ ಕಾಲ ಯೋಜನೆಗೆ ಜಾಗ ಬಳಸಿಕೊಳ್ಳುವ ಬಗ್ಗೆ ರೋಟರಿ ಸಂಸ್ಥೆಯೊಂದಿಗೆ ನಗರಸಭೆ ಕರಾರು ಒಪ್ಪಂದ ಮಾಡಿಕೊಂಡಿದೆ. ಸಾಮಾನ್ಯ ಸಭೆ ಒಪ್ಪಿಗೆ
ಡಂಪಿಂಗ್ ಯಾರ್ಡ್‌ನ ಮಣ್ಣಿನೊಳಗೆ ಅಂದಾಜು 50 ಸಾವಿರ ಟನ್ ತ್ಯಾಜ್ಯ ಇರಬಹುದು. ಈಗಾಗಲೇ 1.41 ಕೋ.ರೂ.ಅನುದಾನವನ್ನು ಹಳೆ ತ್ಯಾಜ್ಯ ತೆರವಿಗೆ ಬಳಸುವ ಬಗ್ಗೆ ಡಿಪಿಆರ್ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲು ಸಾಮಾನ್ಯ ಸಭೆ ಒಪ್ಪಿಗೆ ನೀಡಿದೆ. ಹದಿನೈದು ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ.
–ಮಧು ಎಸ್. ಮನೋಹರ್,
ಪೌರಾಯುಕ್ತ, ನಗರಸಭೆ -ಕಿರಣ್ ಪ್ರಸಾದ್ ಕುಂಡಡ್ಕ