Advertisement

ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಡಿಪಿಆರ್‌ ಸಿದ್ಧ: ಸಂಸದ ಪ್ರತಾಪ್‌ ಸಿಂಹ

09:27 PM Jun 28, 2023 | Team Udayavani |

ಮೈಸೂರು: ಮೈಸೂರು-ಕುಶಾಲನಗರ ನಡುವಿನ ರೈಲ್ವೆ ಯೋಜನೆಯ ಪ್ರಾಥಮಿಕ ಡಿಪಿಆರ್‌ ತಯಾರಾಗಿದ್ದು, ಮತ್ತೂಂದು ಸುತ್ತಿನಲ್ಲಿ ಪರಿಶೀಲಿಸಿ ಆಗಸ್ಟ್‌ ತಿಂಗಳಲ್ಲಿ ಭಾರತೀಯ ರೈಲ್ವೆ ಮಂಡಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ಪ್ರತಾಪ್‌ ಸಿಂಹ ಹೇಳಿದರು.

Advertisement

ಮೈಸೂರು-ಕುಶಾಲನಗರ ನಡುವೆ 87 ಕಿ.ಮೀ ಇದ್ದು, ಪ್ರಾಥಮಿಕವಾಗಿ 1854.62 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ವೆ ಮಾಡಲಾಗಿದೆ. ಮತ್ತೂಂದು ಸುತ್ತಿನ ಸರ್ವೆ ನಡೆಸಿದ ಬಳಿಕ ಅಂತಿಮ ಡಿಪಿಆರ್‌ನ್ನು ರೈಲ್ವೆ ಮಂಡಳಿಗೆ ಕಳುಹಿಸಲಾಗುವುದು. ಅಂತಿಮ ಹಂತದ ಸರ್ವೆ ಕಾರ್ಯ ಮುಗಿದ ಮೇಲೆ ಎರಡು ಸಾವಿರ ಕೋಟಿ ದಾಟಬಹುದು ಎಂದು ತಿಳಿಸಿದರು.

ಮೈಸೂರಿನಿಂದ ಬೆಳಗೊಳ, ಇಲವಾಲ, ಬಿಳಿಕೆರೆ, ಉದ್ದೂರು, ಹುಣಸೂರು, ಸತ್ಯಗಾಲ, ಪಿರಿಯಾಪಟ್ಟಣ, ದೊಡ್ಡಹೊಸೂರು, ಕುಶಾಲನಗರ ಸೇರಿ 9 ರೈಲ್ವೆ ನಿಲ್ದಾಣಗಳು ಬರಲಿವೆ. ಈಗಾಗಲೇ ಕೇಂದ್ರ ಸರ್ಕಾರ ಅನುದಾನ ಮೀಸಲಿಟ್ಟಿರುವ ಕಾರಣ ಡಿಪಿಆರ್‌ಗೆ ಅನುಮೋದನೆ ದೊರೆಯುತ್ತಿದ್ದಂತೆ ಭೂ ಸ್ವಾಧೀನ ಕಾರ್ಯ ಆರಂಭವಾಗಲಿದೆ ಎಂದರು.

ಈ ಮಾರ್ಗಕ್ಕೆ 558.8 ಹೆಕ್ಟೇರ್‌ ಭೂಮಿ ಸ್ವಾಧೀನವಾಗಬೇಕಿದ್ದು, 522.8 ಹೆಕ್ಟೇರ್‌ ಖಾಸಗಿ, 4.96 ಹೆಕ್ಟೇರ್‌ ಭೂಮಿ ಗುರುತಿಸಲಾಗಿದೆ. ರಾಜ್ಯಸರ್ಕಾರ ಭೂಮಿ ಸ್ವಾಧೀನ ಮಾಡಿಕೊಡಬೇಕಿದೆ ಎಂದರು.

ಟೋಲ್‌ ಸಂಗ್ರಹ ಚರ್ಚೆ: ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆಯು ಸಂಚಾರಕ್ಕಿರುವ ರಸ್ತೆಯೇ ಹೊರತು ರೇಸ್‌ ಮಾಡಲು ಅಲ್ಲ. ಯಾವ ಜಾಗದಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಿಕೊಳ್ಳುವುದಕ್ಕೆ ಗಮನಹರಿಸಲಾಗುವುದು ಎಂದರು.

Advertisement

ಹೈವೆ ರಸ್ತೆಯಲ್ಲಿ ಅಪಘಾತ ಸಂಭವಿಸಿ ಸಾವಿನ ರಸ್ತೆಯಾಗಿ ಮಾರ್ಪಟ್ಟಾಗಿದೆ ಎನ್ನುವ ಮಾತನ್ನು ಹೇಳುತ್ತಾರೆ. ಅವೈಜ್ಞಾನಿಕವಾಗಿ ರಸ್ತೆ ಇಲ್ಲ. ಈಗ ಅಪಘಾತದಿಂದ ಮೃತಪಟ್ಟಿರುವ ಶೇ.90ರಷ್ಟು ಪ್ರಕರಣಗಳು ಚಾಲಕರ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಉಂಟಾಗಿದೆ. ಯಾರಾದರೂ ಈ ರಸ್ತೆಯಲ್ಲಿ ಇಂತಹ ಕಡೆ ಅವೈಜ್ಞಾನಿಕವಾಗಿ ಇದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಮಂಡ್ಯದಿಂದ ಬೆಂಗಳೂರು ತನಕ ಇರುವ ರಸ್ತೆಯಲ್ಲಿ ಪ್ರಯಾಣ ಮಾಡುವ ರೀತಿಯಲ್ಲಿ ಸಂಚಾರ ಮಾಡಬೇಕು. ಕೆಲವು ವಾಹನಗಳು ಈ ರಸ್ತೆಯಲ್ಲಿ 120ರಿಂದ 150 ಕಿಲೋ ಮೀಟರ್‌ ವೇಗದಲ್ಲಿ ಓಡಿಸುತ್ತಾರೆ. ಕನಿಷ್ಠ 80 ಕಿಲೋ ಮೀಟರ್‌ ವೇಗದಲ್ಲಿ ಓಡಿಸುವ ಮಾರುತಿ, ಇಂಡಿಕೋ ಇನ್ನಿತರ ಕಾರುಗಳು 120 ಕಿಲೋ ಮೀಟರ್‌ ವೇಗದಲ್ಲಿ ಓಡಿಸುತ್ತಿರುವುದರಿಂದ ಅಪಘಾತ ಸಂಭವಿಸಲು ಕಾರಣವಾಗಿದೆ ಎಂದರು.

ಮೈಸೂರು ಭಾಗದಿಂದ ಹೊರಡುವ ಮಾರ್ಗದಲ್ಲಿ ಟೋಲ್‌ ಸಂಗ್ರಹಕ್ಕೆ ನಿರ್ಧರಿಸಿರುವುದು ಗೊತ್ತಿಲ್ಲ. ಈಗಾಗಲೇ ಟೋಲ್‌ ಸಂಗ್ರಹ ಆರಂಭವಾಗಬೇಕಿತ್ತು. ಸಿದ್ದಲಿಂಗಪುರ ಬಳಿ ಫ್ಲೈಓವರ್‌ ಸೇರಿ ಇನ್ನಿತರ ಕಾಮಗಾರಿ ಮುಗಿದ ಮೇಲೆ ಶುರು ಮಾಡುವಂತೆ ಹೇಳಿದ್ದರಿಂದ ಮುಂದೂಡಲಾಗಿತ್ತು. ಈಗ ಏನಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತೇನೆ. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಲು ಏಳೆಂಟು ತಿಂಗಳು ಸಮಯ ಬೇಕಾಗಬಹುದು.
– ಪ್ರತಾಪ್‌ಸಿಂಹ, ಸಂಸದ.

Advertisement

Udayavani is now on Telegram. Click here to join our channel and stay updated with the latest news.

Next