ಇಸ್ತಾಂಬುಲ್: ನೈಟ್ ಕ್ಲಬ್ ವೊಂದರ ನವೀಕರಣ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 29 ಮಂದಿ ಸಾವಿಗೀಡಾಗಿರುವ ಘಟನೆ ಟರ್ಕಿಯಲ್ಲಿ(
Istanbul) ನಡೆದಿರುವುದಾಗಿ ಸಿಎನ್ ಎನ್ ಸ್ಟೇಟ್ ಮೀಡಿಯಾ ವರದಿ ಮಾಡಿದೆ.
ಅಗ್ನಿ ಅನಾಹುತದಲ್ಲಿ ಎಂಟು ಜನರು ಗಾಯಗೊಂಡಿದ್ದು, ಇದರಲ್ಲಿ ಏಳು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಇಸ್ತಾಂಬುಲ್ ಗವರ್ನರ್ ಕಚೇರಿ ಮೂಲಗಳು ತಿಳಿಸಿವೆ.
ಈ ನೈಟ್ ಕ್ಲಬ್
(Night Club) ಅನ್ನು ಮಾಸ್ಕ್ಯುರೇಡ್ ಕ್ಲಬ್ ಎಂದು ಗುರುತಿಸಲಾಗಿದೆ. ಗೇರೆಟ್ಟೆಪೇಯ ಜನನಿಬಿಡ ಗೋನೆನೊಗ್ಲು ಸ್ಟ್ರೀಟ್ ನಲ್ಲಿರುವ 16 ಅಂತಸ್ತಿನ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅನಾಹುತ ಸಂಭವಿಸಿರುವುದಾಗಿ ವರದಿ ವಿವರಿಸಿದೆ.
ದುರ್ಘಟನೆ ನಡೆದ ಸಂದರ್ಭದಲ್ಲಿ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು, ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಹೊತ್ತುಕೊಂಡಿರುವುದಾಗಿ ಟರ್ಕಿ ಸ್ಟೇಟ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಶೀಘ್ರ ಕ್ರಮ:
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಟರ್ಕಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ನೈಟ್ ಕ್ಲಬ್ ನ ಮ್ಯಾನೇಜರ್, ಅಕೌಂಟೆಂಟ್, ಪಾಲುದಾರರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.