ಕಲಬುರಗಿ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ ಪತಿ ಮತ್ತು ಆತನ ತಮ್ಮನಿಗೆ ಜೈಲು ಶಿಕ್ಷೆ, ದಂಡ ವಿಧಿಸಿ ಇಲ್ಲಿನ ಒಂದನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ತಾಲೂಕಿನ ಕಗ್ಗನಮಡಿ ಗ್ರಾಮದ ರವಿಕುಮಾರ ಮೂಲಗೆ ಹಾಗೂ ಸಹೋದರ ರೇವಣಸಿದ್ಧಪ್ಪ ಜೈಲು ಶಿಕ್ಷೆಗೆ ಗುರಿಯಾದವರು. 2019ರ ಏಪ್ರಿಲ್ 17ರಂದು ಆರೋಪಿ ರವಿಕುಮಾರ ಮೂಲಗೆ ತನ್ನ ಪತ್ನಿ ಅಂಬಿಕಾಳ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದ.
ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮದುವೆಯಾಗಿದ್ದರೂ, ತವರು ಮನೆಯಿಂದ ಒಂದು ತೊಲೆ ಬಂಗಾರ, ಟೇಲರಿಂಗ್ ಮಶೀನ್ ಮತ್ತು 10 ಸಾವಿರ ರೂ. ನಗದು ತರುವಂತೆ ಅಂಬಿಕಾಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಅಂಬಿಕಾಳ ತಂದೆ ನಾಗಣ್ಣ ಅವರು ಅಳಿಯ ರವಿಕುಮಾರ, ಈತನ ತಮ್ಮ ರೇವಣಸಿದ್ಧಪ್ಪ, ಅಕ್ಕ ಶಿವಲೀಲಾ, ಈಕೆಯ ಪತಿ ರಾಜಪ್ಪ ಹಾಗೂ ರಾಜಪ್ಪನ ತಮ್ಮ ಕಲ್ಯಾಣಿ ಎಂಬುವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆಗಿನ ಎಸಿಪಿ ಅಯ್ಯನಗೌಡ ಪಾಟೀಲ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಆರೋಪಿ ರವಿಕುಮಾರ ಮೂಲಗೆ ಹಾಗೂ ಇನ್ನೊಬ್ಬ ಆರೋಪಿ ರೇವಣಸಿದ್ಧಪ್ಪನಿಗೆ ತಲಾ ಐದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ, ಪ್ರಮುಖ ಆರೋಪಿಯಾದ ರವಿಕುಮಾರನಿಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿ ಏಳು ವರ್ಷ ಕಠಿಣ ಶಿಕ್ಷೆ, 15 ಸಾವಿರ ರೂ. ದಂಡ ಹಾಗೂ ಕಲಂ 3 ಮತ್ತು 4ರ ಅಡಿ ತಲಾ ಒಂದು ವರ್ಷ ಜೈಲು, 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ ನಾಗಣ್ಣನಿಗೆ 25 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಲು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಉಳಿದ ಆರೋಪಿತರಾದ ಶಿವಲೀಲಾ, ರಾಜಪ್ಪ, ಕಲ್ಯಾಣಿ ವಿರುದ್ಧ ಆರೋಪ ಸಾಬೀತಾಗಿಲ್ಲ. ಸರ್ಕಾರದ ಪರ ಒಂದನೇ ಅಪರ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.