ಮುಂಡರಗಿ: ಶಿಥಿಲಾವಸ್ಥೆಗೊಂಡ ಕಟ್ಟಡದಲ್ಲಿ ನೂರಾರು ಪುಸ್ತಗಳನ್ನು ಹೊಂದಿರುವ ಗ್ರಂಥಾಲಯ ಜ್ಞಾನ ನೀಡುತ್ತಿದೆಯಾದರೂ ಓದುಗರಲ್ಲಿ ಹುಟ್ಟಿದ ಭಯ ಮಾತ್ರ ಸ್ಮೃತಿ ಪಟಲದಿಂದ ದೂರವಾಗಿಲ್ಲ.
ಹೌದು, ಇದು ಡೋಣಿ ಗ್ರಾಮದ ಗ್ರಂಥಾಲಯದ ದುಸ್ಥಿತಿ. ಪಂಚಾಯತಿ ಕಟ್ಟಡದಲ್ಲಿದ್ದ ಗ್ರಂಥಾಲಯ ಈ ಮೊದಲು ಗ್ರಾಮದ ಮಧ್ಯಭಾಗದಲ್ಲಿತ್ತು. ಜತೆಗೆ ಅಪಾರ ಓದುಗ ವರ್ಗ ಹೊಂದಿ ನೂರಾರು ಜನರಿಗೆ ಜ್ಞಾನ ದೀವಿಗೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಗೊಂಡಿತು. ಈಗಿರುವ ಗ್ರಂಥಾಲಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು,ಯಾವ ಸಂದರ್ಭದಲ್ಲಿ ಕಟ್ಟಡದ ಗೋಡೆ ಬೀಳುತ್ತವೆಯೋ ಏನೋ? ಎನ್ನುವ ಆತಂಕ ಓದುಗರಲ್ಲಿ ಮನೆ ಮಾಡಿದೆ. ಹೀಗಾಗಿ ಇಲ್ಲಿ ಬರುವ ಓದುಗರು ಭಯದಲ್ಲೇ ಓದಿನಲ್ಲಿ ತೊಡಗುವಂತಾಗಿದೆ.
ತಗಡಿನ ಮೇಲ್ಛಾವಣಿ: ಈಗಿರುವ ಗ್ರಂಥಾಲಯ ಪಂಚಾಯತಿ ಕಟ್ಟಡದಲ್ಲಿದ್ದು, ತಗಡಿನ ಮೇಲ್ಛಾವಣಿ ಹೊಂದಿದೆ. ತಗಡಿನ ಮೇಲ್ಛಾವಣಿಯಿಂದ ಬೇಸಿಗೆಯಲ್ಲಿ ಹೆಚ್ಚು ತಾಪವಾಗುವುದರಿಂದ ಓದುಗರು ಪ್ರಯಾಸದಿಂದಲೇ ದಿನಪತ್ರಿಕೆ, ಪುಸ್ತಕ ಓದಬೇಕಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ಗೋಡೆಗುಂಟ ಇಳಿಯುವುದರಿಂದಾಗಿ, ಗೋಡೆಗಳು ಹೆಚ್ಚು ತೇವಾಂಶ ಹಿಡಿದಿಟ್ಟುಕೊಂಡು ಶಿಥಿಲಗೊಂಡಿವೆ. ತೇವಾಂಶದಿಂದ ಕೂಡಿರುವ ಗೋಡೆಗಳು ಯಾವ ಸಂದರ್ಭದಲ್ಲಾದರೂ ಬೀಳುವ ಅಪಾಯವಿದೆ.
ಇದರಿಂದಾಗಿ ಪ್ರತಿದಿನ ಗ್ರಂಥಾಲಯಕ್ಕೆ ಹೋಗಲು ಓದುಗರು ಹಿಂಜರಿಯುತ್ತಿದ್ದಾರೆ. ಗ್ರಂಥಾಲಯದ ಸುತ್ತಲೂ ತಿಪ್ಪೆಗಳು ಇದ್ದು, ಕಲುಷಿತ ವಾತಾವರಣವಿದೆ. ಗ್ರಂಥಾಲಯ ಸುತ್ತ ಹಂದಿ-ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಗ್ರಂಥಾಲಯದ ಪಕ್ಕದಲ್ಲಿರುವ ತಿಪ್ಪೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಓದುಗರು ನೆಮ್ಮದಿಯಾಗಿ ಗ್ರಂಥಾಲಯದ ಒಳಗೆ ಕುಳಿತು ಓದಲು ಭಯಪಡುವ ವಾತಾವರಣ ಸೃಷ್ಟಿಯಾಗಿದೆ ಎಂದು ಓದಗರು ತಿಳಿಸುತ್ತಾರೆ. ಇಂತಹ ಕಲುಷಿತ ವಾತಾವರಣ, ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿರುವ ಗ್ರಂಥಾಲಯಕ್ಕೆ ಉತ್ತಮ ಮತ್ತು ಸುಸಜ್ಜಿತ ಕಟ್ಟಡ ಅವಶ್ಯವಿದೆ ಎನ್ನುವುದು ಪ್ರಜ್ಞಾವಂತರ ಒತ್ತಾಸೆ.
-ಹು.ಬಾ. ವಡ್ಡಟ್ಟಿ