ನವದೆಹಲಿ: ಡಿಜಿಟಲೀಕರಣದ ಜೊತೆ ಸಾಗುತ್ತಿರುವ ಭಾರತ ಇದೀಗ ಆ ಹಾದಿಯಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಪರಿಚಯಿಸಲು ಮುಂದಾಗಿದ್ದು, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಡಿಜಿಟಲ್ ಆವೃತ್ತಿಯ ಮತದಾರರ ಗುರುತಿನ ಚೀಟಿಯನ್ನು ಸೋಮವಾರ ಬಿಡುಗಡೆಗೊಳಿಸಲಿದ್ದಾರೆ.
ಇದು ಮೊಬೈಲ್ ಅಥವಾ ವೈಯಕ್ತಿಕ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಲ್ಲ ಕಾರ್ಡ್ ಆಗಿದ್ದು, ಎಡಿಟ್ ಮಾಡಲಾಗದ ಮತದಾರರ ಗುರುತಿನ ಚೀಟಿ ಆಗಿದೆ. ಇದನ್ನು ಪಿಡಿಎಫ್ ರೂಪದಲ್ಲಿ ಹಾಗೂ ಡಿಜಿಟಲ್ ಲಾಕರ್ ನಂತಹ ಸೌಲಭ್ಯಗಳ ಮೂಲಕ ಸಂಗ್ರಹಿಸಿಡಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಐದು ಹೊಸ ಮತದಾರರಿಗೆ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ನೀಡುವ ಮೂಲಕ ‘e-EPIC’ ಗೆ ಚಾಲನೆ ನೀಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ತೆರೆ: ಇನ್ ಟು ದಿ ಡಾರ್ಕ್‌ನೆಸ್ ಚಿತ್ರಕ್ಕೆ ಪ್ರಶಸ್ತಿ
ಸಾಮಾನ್ಯ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲು ಬಹಳ ಸಮಯದ ಅವಶ್ಯಕತೆ ಇರುತ್ತದೆ. ಈ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಬಳಸುವುದರಿಂದ ಸಮಯದ ಉಳಿತಾಯವಾಗುವುದರೊಂದಿಗೆ ಬಹುಬೇಗ ಮತದಾರರಿಗೆ ಗುರುತಿನ ಚೀಟಿ ಲಭ್ಯವಾಗಲಿದೆ.
ಮತದಾನದ ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ಪತ್ತೆಹಚ್ಚುವಲ್ಲಿಯೂ 1993 ರಲ್ಲಿ ಪರಿಚಯಿಸಲಾಗಿರುವ ಮತದಾರರ ಗುರುತಿನ ಚೀಟಿ ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ:ಭಾರತೀಯ ಮಾರುಕಟ್ಟೆಗೆ ಒಪ್ಪೋ ರೆನೋ 5 ಪ್ರೋ 5G ಎಂಟ್ರಿ. ವಿಶೇಷತೆಗಳೇನು?