ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ, ಹಿಮಾಚಲ ಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಲ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ದಿಲ್ಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟಕ್ಕೇರುತ್ತಿದ್ದು, ಭಾಕ್ರಾ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಹೊರಬಿಡಲಾಗುತ್ತಿರುವ ಕಾರಣ ಪಂಜಾಬ್‌ನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ರಾಜಸ್ಥಾನದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಚಂಬಲ್ ನದಿಯು ಅಪಾಯದ ಮಟ್ಟ ಮೀರಿ ಹರಿಯ ಲಾರಂಭಿಸಿದೆ.
ದಿಢೀರ್ ಪ್ರವಾಹ: ಹಿಮಾಚಲ ಪ್ರದೇಶದಲ್ಲಿ ಶನಿವಾರ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿದೆ. ಕಾಂಗ್ರಾ ಜಿಲ್ಲೆಯಲ್ಲಿ ಶನಿವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಿಢೀರ್ ಪ್ರವಾಹದಿಂದಾಗಿ ಪಲಾಂಪುರ್‌ನಲ್ಲಿ ಸಿಲುಕಿಕೊಂಡಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಮೆಹ್ರಾ ಗ್ರಾಮದಲ್ಲಿ ಭೂಕುಸಿತ ಉಂಟಾಗಿ ಅನೇಕ ಮನೆಗಳಿಗೆ ಹಾನಿಯಾಗಿವೆ.
85 ಗ್ರಾಮಗಳು ಸಂಕಷ್ಟದಲ್ಲಿ: ಆಂಧ್ರಪ್ರದೇಶದ ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಅನೇಕ ಗ್ರಾಮಗಳು ಹಾಗೂ ನೂರಾರು ಎಕರೆ ಕೃಷಿ ಭೂಮಿ ಎಲ್ಲ ವೃತವಾಗಿವೆ. ಕೃಷ್ಣಾ ನದಿಯ ಪ್ರವಾಹದಿಂದಾಗಿ 85 ಗ್ರಾಮಗಳು ಸಂಕಷ್ಟದಲ್ಲಿವೆ. ಶನಿವಾರ ಪ್ರವಾಹ ಸಂಬಂಧಿ ಘಟನೆಯಿಂದ 11 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತ ಪಟ್ಟಿದ್ದಾರೆ. ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಅವರ ಅಮರಾವತಿಯಲ್ಲಿನ ಬಂಗಲೆಯು ಎಲ್ಲವೃತಗೊಂಡಿದೆ. ನಾಯ್ಡು ಸಹಿತ 38 ಮಂದಿಗೆ ಸ್ಥಳೀಯ ಜಿಲ್ಲಾಡಳಿತ ನೋಟಿಸ್ ನೀಡಿದ್ದು, ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದೆ. ಆದರೆ, ನಾಯ್ಡು ಅವರು ಆ ನಿವಾಸದಲ್ಲಿ ವಾಸಿಸುತ್ತಿಲ್ಲ. ಹಲವು ದಿನಗಳಿಂದ ಈ ಬಂಗಲೆ ಖಾಲಿಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಗೋವಾದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯಾಗು ವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಲದಲ್ಲಿ ಸಿಡಿಲಿಗೆ 4 ಬಲಿ
ಪಶ್ಚಿಮ ಬಂಗಾಲದಲ್ಲಿ ಶನಿವಾರ ಸಿಡಿಲಿನಿಂದ ನಾಲ್ವರು ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ. ಇನ್ನು ಪ್ರವಾಹ ಪೀಡಿತ ಕೇರಳದಲ್ಲಿ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಮೃತರ ಸಂಖ್ಯೆ ಶನಿವಾರ 113ಕ್ಕೇರಿಕೆಯಾಗಿದೆ.