Advertisement

ಡೌಜರ್ ಹಂಪ್‌; ಕಾರಣಗಳು, ಲಕ್ಷಣಗಳು ಮತ್ತು ಅಪಾಯಾಂಶಗಳು

03:19 PM Jul 02, 2023 | Team Udayavani |

ಸ್ಕೋಲಿಯೋಸಿಸ್‌ ಮತ್ತು ಕೈಫೋಸಿಸ್‌ನಂತಹ ಬೆನ್ನುಮೂಳೆಯ ಅಸಹಜ ರಚನೆ ಸಮಸ್ಯೆಗಳ ನಡುವೆಯೇ ಈಗಲೂ ಕಂಡುಬರುವ ಇದೇ ತರಹದ ಇನ್ನೊಂದು ಸಮಸ್ಯೆ ಡೌಜರ್ ಹಂಪ್‌. ವೈದ್ಯಕೀಯವಾಗಿ ಹೈಪರ್‌ಕೈಫೋಸಿಸ್‌ ಅಥವಾ ಕೈಫೋಸಿಸ್‌ ಎಂದು ಕರೆಯಲ್ಪಡುವ ಡೌಜರ್ ಹಂಪ್‌ನ ಪ್ರಧಾನ ಲಕ್ಷಣ ಎಂದರೆ ಬೆನ್ನಿನ ಮೇಲ್ಭಾಗ ಬಾಗುವುದಕ್ಕೆ ಕಾರಣವಾಗುವ ಬೆನ್ನುಮೂಳೆಯು ಮುಂದಕ್ಕೆ ಬಾಗಿರುವುದು. ಈ ಸ್ಥಿತಿಯು ಸಾಮಾನ್ಯವಾಗಿ ಹಿರಿಯ ವಯಸ್ಸಿನವರಲ್ಲಿ, ಅದರಲ್ಲೂ ಋತುಚಕ್ರಬಂಧ ಆಗಿರುವ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

Advertisement

ಡೌಜರ್ ಹಂಪ್‌ ಉಂಟಾಗುವುದಕ್ಕೆ ಕೆಲವಾರು ಅಂತರ್ಗತ ಕಾರಣಗಳು ಒಳಗೊಂಡಂತೆ ಹಲವು ಕಾರಣಗಳು ಇರುತ್ತವೆ. ವಯಸ್ಸು ಹೆಚ್ಚಿದಂತೆ ಬೆನ್ನಿನಲ್ಲಿ ಉಂಟಾಗುವ ಬದಲಾವಣೆಗಳು ಬೆನ್ನುಮೂಳೆಯು ಮುಂದಕ್ಕೆ ಬಾಗುವುದಕ್ಕೆ ಗಮನಾರ್ಹ ಕೊಡುಗೆ ನೀಡುತ್ತವೆ. ಡಿಸ್ಕ್ನ ಎತ್ತರ ಕಡಿಮೆಯಾಗುವುದು ಮತ್ತು ಬೆನ್ನುಮೂಳೆಯ ಸಂಧಿಗಳಲ್ಲಿ ಪೆಡಸುತನ ಉಂಟಾಗುವುದು ಇತ್ಯಾದಿ ಸಂರಚನಾತ್ಮಕ ಬದಲಾವಣೆಗಳು ಅಸಹಜ ಬಾಗುವಿಕೆಗೆ ಕಾರಣವಾಗಬಹುದು. ಜತೆಗೆ, ಡೌಜರ್ ಹಂಪ್‌ ರೂಪುಗೊಳ್ಳುವುದರಲ್ಲಿ ಆಸ್ಟಿಯೋಪೊರೋಸಿಸ್‌ ಗಮನಾರ್ಹ ಪಾತ್ರ ವಹಿಸುತ್ತದೆ. ಹೈಪರ್‌ಕೈಫೋಸಿಸ್‌ನ ಸಹಜ ಇತಿಹಾಸಕ್ಕೆ ಬಲವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಸ್ನಾಯು ದೌರ್ಬಲ್ಯ ಮತ್ತು ಡಿಸ್ಕ್ಗಳು ನಶಿಸುವ ಕಾಯಿಲೆಯಿಂದ ಹೈಪರ್‌ಕೈಫೋಸಿಸ್‌ ಬೆಳವಣಿಗೆಯಾಗಬಹುದು; ಇದರಿಂದಾಗಿ ಕಶೇರುಕಗಳ ಮುರಿತ ಮತ್ತು ಹೈಪರ್‌ಕೈಫೋಸಿಸ್‌ ತೀವ್ರಗೊಳ್ಳಬಹುದು. ಹೈಪರ್‌ಕೈಫೋಸಿಸ್‌ಗೆ ಮುನ್ನುಡಿಯಾಗಿ ಕಶೇರುಕಗಳ ಮುರಿತಗಳು ಕೂಡ ಉಂಟಾಗಬಹುದು.

ಹಲವು ಬಾರಿ ಕಶೇರುಕಗಳ ಮುರಿತದಿಂದ ಕೈಫೋಸಿಸ್‌ ಹೆಚ್ಚುತ್ತದೆ ಮತ್ತು ಇದು ಕೆಳಬೆನ್ನಿನ ಮೂಳೆಗಳ ಮುರಿತಕ್ಕಿಂತ ಹೆಚ್ಚಾಗಿ ಮೇಲೆºನ್ನಿನ ಮೂಳೆಗಳ ಮುರಿತಕ್ಕೆ ಸಂಬಂಧಿಸಿದೆ. ಹಿರಿಯ ವಯಸ್ಕರಲ್ಲಿ ಹೈಪರ್‌ಕೈಫೋಸಿಸ್‌ಗೆ ಸಂಬಂಧಿಸಿ ಕಂಡುಬರುವ ಇನ್ನೊಂದು ರೇಡಿಯೋಗ್ರಾಫಿಕ್‌ ಅಂಶವೆಂದರೆ ಸ್ಪಾಂಡಿಲೋಸಿಸ್‌ ಎಂದು ಕರೆಯಲ್ಪಡುವ ಡಿಸ್ಕ್ಗಳು ಕ್ಷಯಿಸುವ ಸಮಸ್ಯೆ. ಹೈಪರ್‌ಕೈಫೋಸಿಸ್‌ಗೂ ಬೆನ್ನಿನ ಸ್ನಾಯುಗಳು ದುರ್ಬಲವಾಗುವುದಕ್ಕೂ ಸಂಬಂಧ ಇರುವುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ.
ಡೌಜರ್ ಹಂಪ್‌ ತಲೆದೋರುವ ಅಪಾಯ ಹೆಚ್ಚುವುದಕ್ಕೆ ಹಲವು ಅಂಶಗಳು ಕೊಡುಗೆ ನೀಡುತ್ತವೆ. ವಯಸ್ಸು ಹೆಚ್ಚುತ್ತಿದ್ದಂತೆ ಹೈಪರ್‌ಕೈಫೋಸಿಸ್‌ ಉಂಟಾಗುವ ಸಾಧ್ಯತೆ ಹೆಚ್ಚುವುದರಿಂದ ವೃದ್ಧಾಪ್ಯ ಒಂದು ಪ್ರಾಥಮಿಕ ಅಪಾಯಾಂಶ ಆಗಿದೆ. ಜತೆಗೆ ಋತುಚಕ್ರಬಂಧ ಆಗಿರುವ ಮಹಿಳೆಯರಲ್ಲಿ ಇದು ಉಂಟಾಗುವ ಸಾಧ್ಯತೆ ಇನ್ನಷ್ಟು ಹೆಚ್ಚು. ಏಕೆಂದರೆ ಇವರಲ್ಲಿ ಈಸ್ಟ್ರೋಜನ್‌ ಮಟ್ಟ ಕುಸಿದಿದ್ದು, ಇದರಿಂದಾಗಿ ಹಾರ್ಮೋನ್‌ ಅಸಮತೋಲನ ಉಂಟಾಗುವ ಮೂಲಕ ಆಸ್ಟಿಯೊಪೊರೋಸಿಸ್‌ ಸಂಬಂಧಿ ಮೂಳೆ ಮುರಿತಗಳಾಗುವ ಅಪಾಯ ಹೆಚ್ಚಿರುತ್ತದೆ. ಕಶೇರುಕಗಳ ಮತ್ತು ಸೊಂಟಕ್ಕಿಂತ ಮೇಲ್ಭಾಗದ ಎಲುಬುಗಳ ಭವಿಷ್ಯದ ಮುರಿತಕ್ಕೆ ಹೈಪರ್‌ಕೈಫೋಸಿಸ್‌ ಒಂದು ಗಮನಾರ್ಹ ಅಪಾಯಾಂಶವಾಗಿರುತ್ತದೆ. ಹೈಪರ್‌ಕೈಫೋಸಿಸ್‌ ಹೊಂದಿರುವ ವಯೋವೃದ್ಧ ಮಹಿಳೆಯರು ಭವಿಷ್ಯದಲ್ಲಿ ಮೂಳೆ ಮುರಿತಕ್ಕೆ ಒಳಗಾಗುವ ಅಪಾಯ ಶೇ. 70ರಷ್ಟು ಹೆಚ್ಚಿರುತ್ತದೆ. ಹೈಪರ್‌ಕೈಫೋಸಿಸ್‌ ಹೆಚ್ಚಿದಂತೆಯೇ ಮೂಳೆ ಮುರಿತಗಳ ಅಪಾಯವೂ ಅಧಿಕವಾಗುತ್ತದೆ.

ಈ ಸಮಸ್ಯೆಯನ್ನು ನಿರ್ವಹಿಸುವ ವೇಳೆ ವೈದ್ಯರು ಬೆನ್ನು ಬಾಗಿರುವುದಕ್ಕೆ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ವ್ಯಕ್ತಿಯ ಎಲುಬುಗಳ ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯದ ವಿಶ್ಲೇಷಣೆಯೂ ಮುಖ್ಯವಾಗುತ್ತದೆ. ಕಾರಣಗಳ ಬಗ್ಗೆ ಅತ್ಯುಚ್ಚ ಮಟ್ಟದ ಸಂದೇಹ ಹೊಂದಿರುವುದು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಶೀಘ್ರ ಪತ್ತೆ ಹಚ್ಚುವುದು ಉತ್ತಮ ಪಲಿತಾಂಶ ಲಭಿಸುವುದಕ್ಕೆ ಮುಖ್ಯವಾಗಿರುತ್ತದೆ. ವೈಕಲ್ಯ ಉಂಟಾಗುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಒದಗಿಸಲಾಗುತ್ತದೆ. ಇದರಲ್ಲಿ ಆಸ್ಟಿಯೊಪೊರೋಸಿಸ್‌ಗೆ ಅಥವಾ ನರಶಾಸ್ತ್ರೀಯ ತೊಂದರೆಗೆ ಚಿಕಿತ್ಸೆಯ ಜತೆಗೆ ವ್ಯಕ್ತಿಯ ಸಮಗ್ರ ಆರೈಕೆಯೂ ಮುಖ್ಯವಾಗಿರುತ್ತದೆ. ಇಂತಹ ರೋಗಿಗಳು ಬೀಳದಂತೆ ನೋಡಿಕೊಳ್ಳುವುದು ಕೂಡ ಒಂದು ಪ್ರಾಮುಖ್ಯ ಕಾರ್ಯತಂತ್ರ.

ಒಟ್ಟಾರೆಯಾಗಿ ಹೇಳುವುದಾದರೆ ಡೌಜರ್ ಹಂಪ್‌ ಬೆನ್ನಿನ ಮೇಲ್ಭಾಗದ ಮೂಳೆಯು ಅತಿಯಾಗಿ ಮುಂದಕ್ಕೆ ಬಾಗಿರುವ ಲಕ್ಷಣವೇ ಪ್ರಧಾನವಾಗಿರುವ ಒಂದು ಸಮಸ್ಯೆ. ವಯೋವೃದ್ಧರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾಗುವುದು, ಆಸ್ಟಿಯೊಪೊರೋಸಿಸ್‌ ಮತ್ತು ಕಳಪೆ ದೇಹಭಂಗಿಗಳು ಡೌಜರ್ ಹಂಪ್‌ ಉಂಟಾಗುವುದಕ್ಕೆ ಕೊಡುಗೆ ನೀಡುವ ಅಂಶಗಳು. ಸರಿಯಾದ ಪೌಷ್ಟಿಕಾಂಶ ಪೂರೈಕೆ, ವ್ಯಾಯಾಮ ಮತ್ತು
ಜೀವನಶೈಲಿ ಬದಲಾವಣೆಯಂತಹ ಪ್ರತಿಬಂಧಕ ಕ್ರಮಗಳಿಂದ ಈ ಆರೋಗ್ಯ ಸಮಸ್ಯೆ ತಲೆದೋರದಂತೆ ತಡೆಯಬಹುದಾಗಿದೆ.

Advertisement

ಆಸ್ಟಿಯೊಪೊರೋಸಿಸ್‌ ಅಥವಾ ಡೌಜರ್ ಹಂಪ್‌ನ ಕೌಟುಂಬಿಕ ಇತಿಹಾಸವುಳ್ಳ ವ್ಯಕ್ತಿಗಳು ಈ ಸಮಸ್ಯೆಗೆ ತುತ್ತಾಗುವ ವಂಶವಾಹೀಯ ಸಾಧ್ಯತೆಗಳಿರುತ್ತವೆ. ಅಲ್ಲದೆ ಸೋಮಾರಿತನ, ಅಪೌಷ್ಟಿಕತೆ, ಧೂಮಪಾನ ಹಾಗೂ ಸ್ಕೋಲಿಯೋಸಿಸ್‌ ಅಥವಾ ಅಂತರ್‌ಸಂಬಂಧಿ ಅಂಗಾಂಶಗಳ ಕಾಯಿಲೆಗಳಂತಹ ವೈದ್ಯಕೀಯ ಸಮಸ್ಯೆಗಳು ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಡೌಜರ್ ಹಂಪ್‌ನ ಎದ್ದುಕಾಣುವ ಲಕ್ಷಣವೆಂದರೆ ಬೆನ್ನಿನ ಮೇಲ್ಭಾಗದಲ್ಲಿ ಬಾಗುವಿಕೆ. ಆದರೆ ಇದರ ಜತೆಗೆ ಇನ್ನೂ ಹಲವಾರು ತೊಂದರೆಗಳು ಒಳಗೊಂಡಿರುತ್ತವೆ. ಈ ಸಮಸ್ಯೆಗೆ ತುತ್ತಾಗಿರುವವರು ಆಗಾಗ ಬೆನ್ನುನೋವು, ಪೆಡಸುತನ ಮತ್ತು ಚಲನೆಯಲ್ಲಿ ಕುಸಿತವನ್ನು ಅನುಭವಿಸುತ್ತಾರೆ. ಈ ಕೈಫೋಸಿಸ್‌ ತೀವ್ರತೆಯು ದೈಹಿಕ ಚಟುವಟಿಕೆಗಳ ಮೇಲೆ, ದೈನಿಕ ಕೆಲಸಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಮತ್ತು ಒಟ್ಟಾರೆಯಾಗಿ ಜೀವನ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹೈಪರ್‌ಕೈಫೋಸಿಸ್‌ಗೆ ತುತ್ತಾಗಿರುವ ಮಹಿಳೆಯರು ಭಾರೀ ಮನೆಗೆಲಸವನ್ನು ನಿಭಾಯಿಸಲು ಕಷ್ಟಪಡುತ್ತಾರೆ. ಬೆನ್ನು ಮುಂದಕ್ಕೆ ಬಾಗಿರುವುದರಿಂದ ಸಮತೋಲನದಲ್ಲಿ ಕೊರತೆಯಾಗಿ ಆಗಾಗ ಬೀಳುವ ಸಾಧ್ಯತೆಗಳಿರುತ್ತವೆ. ಹೀಗೆ ಬೀಳುವುದರಿಂದ ಮೂಳೆ ಮುರಿತಗಳು ಉಂಟಾಗಿ ಬೆನ್ನು ಇನ್ನಷ್ಟು ಬಾಗುವ ಮತ್ತು ಮೂಳೆ ಮುರಿತಕ್ಕೆ ಸಂಬಂಧಿಸಿದ ಇನ್ನಿತರ ಸಂಕೀರ್ಣ ಸಮಸ್ಯೆಗಳು ತಲೆದೋರುವ ಅಪಾಯ ಇದ್ದೇ ಇದೆ.

-ಡಾ| ಈಶ್ವರಕೀರ್ತಿ ಸಿ.
ಕನ್ಸಲ್ಟಂಟ್‌ ಸ್ಟೆ „ನ್‌ ಸರ್ಜನ್‌
ಕೆಎಂಸಿ ಆಸ್ಪತ್ರೆ, ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next