Advertisement

State Govt ಮುಂದಿನ ವರ್ಷವೂ ಏಕರೂಪ ವೇಳಾಪಟ್ಟಿ ಅನುಮಾನ?

11:17 PM Dec 16, 2023 | Team Udayavani |

ಮಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ರೂಪಿಸಲು ಮುಂದಡಿ ಇಟ್ಟಿದ್ದ ರಾಜ್ಯ ಸರಕಾರ ಈಗ ಇಕ್ಕಟ್ಟಿಗೆ ಸಿಲುಕಿದೆ.

Advertisement

ಮಂಗಳೂರು, ಶಿವಮೊಗ್ಗ ಸಹಿತ ಕೆಲವು ವಿ.ವಿ.ಗಳ ವ್ಯಾಪ್ತಿಯಲ್ಲಿ ತರಗತಿಗಳು ಮುಗಿದು ಪರೀಕ್ಷಾ ಹಂತಕ್ಕೆ ಬಂದಿದ್ದರೆ, ಉಳಿದ ಕೆಲವೆಡೆ ಇನ್ನೂ ಹಿಂದಿವೆ. ಈ ವ್ಯತ್ಯಸ್ಥ ವೇಳಾಪಟ್ಟಿಗೆ ಏಕರೂಪ ನೀಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲೂ ಏಕರೂಪದ ವೇಳಾಪಟ್ಟಿ ಬರುವ ಸಾಧ್ಯತೆ ಕ್ಷೀಣಿಸಿದೆ.

ಯಾಕೆ ವಿಳಂಬ?
2023-24ನೇ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಪಾಲಿಸಿ ಜು. 17ರಿಂದ ಮೊದಲ ಸೆಮಿಸ್ಟರ್‌ ಆರಂಭಿಸುವಂತೆ ಸರಕಾರ ಆದೇಶಿಸಿತ್ತು. ಆದರೆ ಕೆಲವು ವಿ.ವಿ.ಗಳ ವ್ಯಾಪ್ತಿಯಲ್ಲಿ ಕಳೆದ ವರ್ಷ (2022-23)ದ ಸೆಮಿಸ್ಟರ್‌ ತರಗತಿಗಳು ಆಗಸ್ಟ್‌ ಕೊನೆಯವರೆಗೂ ಮುಗಿದಿರಲಿಲ್ಲ. ಹೀಗಾಗಿ 2023-24ನೇ ಸಾಲಿನ ಮೊದಲ ಸೆಮಿಸ್ಟರ್‌ ಆರಂಭಿಕ ದಿನಾಂಕವನ್ನು ಸರಕಾರವೇ ಮುಂದೂಡಿತ್ತು.

ಯಾಕೆ ಸವಾಲು?
ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ “ಏಕರೂಪದ ವೇಳಾಪಟ್ಟಿ ಜಾರಿ ಸದ್ಯಕ್ಕೆ ಕಷ್ಟ. ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳು ವೇಳಾಪಟ್ಟಿ ಪ್ರಕಾರ ಇದ್ದರೆ ಇನ್ನು ಕೆಲವೆಡೆ ಒಂದೆರಡು ತಿಂಗಳ ವಿಳಂಬವಾಗಿದೆ. ಹೀಗಾಗಿ ಕೆಲವು ವಿ.ವಿ.ಗಳಲ್ಲಿ ಪರೀಕ್ಷೆ ಆಗುವಾಗ ಇನ್ನೂ ಹಲವೆಡೆ ತರಗತಿಗಳು ಚಾಲ್ತಿಯಲ್ಲಿರುತ್ತವೆ. ಹೀಗಿರುವಾಗ ಎಲ್ಲವನ್ನೂ ಏಕರೂಪ ವೇಳಾಪಟ್ಟಿಗೆ ಹೊಂದಿಸುವುದು ಸವಾಲಿನ ಕೆಲಸ’ವಂತೆ.

Advertisement

4-5 ತಿಂಗಳು ತರಗತಿಗಳಿಲ್ಲ
ಪಿಯುಸಿ ಫಲಿತಾಂಶ ಎಪ್ರಿಲ್‌ನಲ್ಲಿ ಬಂದಿದ್ದರೂ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಆಗಸ್ಟ್‌ 23 ಕ್ಕೆ ಕಾಲೇಜು ಆರಂಭವಾದವು. ಉಳಿದ ಕೆಲವೆಡೆ ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ತರಗತಿಗಳು ನಡೆದವು. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಯಿತು. ಪದವಿ ತರಗತಿ ಸಮಯಕ್ಕೆ ಸರಿಯಾಗಿ ಆರಂಭವಾಗದಿದ್ದರೆ ವಿದ್ಯಾರ್ಥಿಗಳು ಪದವಿಯ ಬದಲು ಉದ್ಯೋಗದತ್ತ ಗಮನಹರಿಸುತ್ತಾರೆ ಎಂಬ ಅಭಿಪ್ರಾಯವೂ ಇದೆ. ವಿವಿಧ ವಿ.ವಿ.ಗಳ ವ್ಯಾಪ್ತಿಯಲ್ಲಿ ಶೈಕ್ಷಣಿಕ ವೇಳಾಪಟ್ಟಿ ವ್ಯತ್ಯಾಸ ಇರುವುದರಿಂದ ಬೇಗ ಪದವಿ ಮುಗಿಸಿದವರು ಸ್ನಾತಕೋತ್ತರ ತರಗತಿಗೆ ಸೇರಬಹುದಾದರೆ, ಪರೀಕ್ಷೆ ಬಾಕಿ ಇರುವವರು ಸ್ನಾತಕ ಪದವಿಗೆ ಸೇರಲು ಕಷ್ಟ. ಕೆಲವೊಮ್ಮೆ ಒಂದೆರಡು ತಿಂಗಳ ತರಗತಿ ನಷ್ಟವೂ ಆಗುತ್ತಿದೆ.

ವಿದ್ಯಾರ್ಥಿಗಳಿಗೆ ತರಗತಿ ನಷ್ಟ!
ಸರಕಾರವು ಪದವಿ ತರಗತಿಗೆ ಅತಿಥಿ ಉಪನ್ಯಾಸಕರ ನೇಮಕವನ್ನು ಬೆಂಗಳೂರು ವಿ.ವಿ. ಸಹಿತ ಒಂದೆರಡು ವಿ.ವಿ.ಗಳ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ನಡೆಸುತ್ತದೆ. ಇದರ ಪ್ರಕಾರ ರಾಜ್ಯದಲ್ಲಿ ಅ. 7ಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ. ಆದರೆ ಮಂಗಳೂರು ವಿ.ವಿ. ತರಗತಿಗಳು ಆ. 23ಕ್ಕೆ ಪ್ರಾರಂಭವಾಗಿದ್ದವು. ಇದರಿಂದಾಗಿ ಇಲ್ಲಿನ ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ 45 ದಿನ ಉಪನ್ಯಾಸಕರಿಲ್ಲದೆ ತರಗತಿ ನಷ್ಟವಾಗಿದೆ.

ಕಾಲೇಜು ಬದಲಾದರೂ ಕಷ್ಟ!
ಪ್ರಸ್ತುತ ವಿದ್ಯಾರ್ಥಿಗೆ ಕಾಲೇಜು ಬದಲಾವಣೆ ಅವಕಾಶವಿದೆ. ಪೋಷಕರು ವರ್ಗಾವಣೆ ಆದಲ್ಲಿ ಆ ವೇಳೆ ವಿದ್ಯಾರ್ಥಿಯು ಒಂದು ವಿ.ವಿ. ವ್ಯಾಪ್ತಿಯ ಕಾಲೇಜನ್ನು ಬಿಟ್ಟು ಮತ್ತೂಂದು ಕಾಲೇಜಿಗೆ ಸೇರ್ಪಡೆಯಾಗಬಹುದು. ಆದರೆ ಈಗ ರಾಜ್ಯಾದ್ಯಂತ ಒಂದೊಂದು ವಿ.ವಿ. ವ್ಯಾಪ್ತಿಯ ಕಾಲೇಜುಗಳು ಒಂದೊಂದು ವೇಳಾಪಟ್ಟಿ ಅನುಸರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಒಂದೆರಡು ತಿಂಗಳ ತರಗತಿ ನಷ್ಟ ಆಗುತ್ತಿದೆ!

ರಾಜ್ಯಾದ್ಯಂತ ಪದವಿ
ಕಾಲೇಜುಗಳಲ್ಲಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಅನುಷ್ಠಾನದ ಅಗತ್ಯ ಇದೆ. ಸರಕಾರದ ಮಾರ್ಗದರ್ಶನದ ಪ್ರಕಾರ ಮಂಗಳೂರು ವಿ.ವಿ.ಯು ಈಗಾಗಲೇ
ಇದನ್ನು ಅನುಷ್ಠಾನಿಸಲು ಮುಂದಾಗಿದೆ. ಆದರೆ ಉಳಿದ ಕೆಲವು ವಿ.ವಿ.ಗಳಲ್ಲಿ ವೇಳಾಪಟ್ಟಿ ವ್ಯತ್ಯಾಸ ಇದೆ.
-ಪ್ರೊ| ಜಯರಾಜ್‌ ಅಮೀನ್‌,
ಕುಲಪತಿ, ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next