Advertisement

ಸಿಂಪಡಣಾ ದ್ರಾವಣದ ಸಾಮರ್ಥ್ಯ ಬಗ್ಗೆ ಸಂಶಯ

12:38 PM Apr 09, 2020 | Suhan S |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿಂಪಡಣೆ ಮಾಡುತ್ತಿರುವ ದ್ರಾವಣವು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಕೀಟಗಳು ಅದರಲ್ಲೂ  ಕೋವಿಡ್ 19 ವೈರಸ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯದ ಬಗ್ಗೆ ಈಗ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

Advertisement

ವೈರಸ್‌ ಹರಡುವಿಕೆಯನ್ನು ಇದುವರೆಗೆ ಯಶಸ್ವಿಯಾಗಿ ನಿಯಂತ್ರಣ ಮಾಡಿದ ಅತ್ಯಂತ ಹಿಂದುಳಿದ ಜಿಲ್ಲೆ ಕಲಬುರಗಿಯಲ್ಲಿ ನಿತ್ಯ ಆ್ಯಂಟಿಸೆಪ್ಟಿಕ್‌ ಲೋಷನ್‌ ಮತ್ತು ಫೆನಾಯಲ್‌ ಜತೆಗೆ ನೀರು ಮಿಶ್ರಣ ಮಾಡಿ ಸಿಂಪಡಣೆ ಮಾಡಲಾಗುತ್ತಿದೆ. ಸಂಜೆ ಬ್ಲೀಚಿಂಗ್‌ ಪೌಡರ್‌ ಬಳಸಲಾಗುತ್ತಿದೆ. ಆದರೆ, ಮುಂದುವರಿದ ನಗರದಲ್ಲಿ ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಒಳಗೊಂಡ ಬ್ಲೀಚಿಂಗ್‌ ಪೌಡರ್‌ ಮಾತ್ರ ಸಿಂಪಡಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಕ್ರಮ ತೃಪ್ತಿಕರವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಪೋಕ್ಲೋರೈಡ್‌ ದ್ರಾವಣ ಬಳಸಿದ ನಂತರ ಸಂಪೂರ್ಣ ಸ್ವಚ್ಛತೆಗೆ ಆ್ಯಂಟಿಸೆಪ್ಟಿಕ್‌ ಲೋಷನ್‌ ಹಾಕುವುದರಿಂದ ಪೂರ್ಣ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ದ್ರಾವಣ ಸಿಂಪಡಣೆ ಮಾಡಿದ ಮೇಲೆ ಆ ಜಾಗದಲ್ಲಿ ನೀರು ಹಾಕಿ ಸ್ವಚ್ಛಗೊಳಿಸುವುದು ಉತ್ತಮ ಎಂದು ಬಿಎಂಸ್‌ ಇನ್‌ಮಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಸಿ.ಅಬ್ಟಾರ್‌ ತಿಳಿಸಿದರು.

ದರ ವ್ಯತ್ಯಾಸ; ಪರಿಣಾಮ ಒಂದೇ?: ಬ್ಲೀಚಿಂಗ್‌ ಪೌಡರ್‌ ಮತ್ತು ಆ್ಯಂಟಿಸೆಪ್ಟಿಕ್‌ ಲೋಷನ್‌ ಮತ್ತಿತರ ಸ್ಯಾನಿಟೈಸರ್‌ ದ್ರಾವಣದ ನಡುವೆ ದರದ ವ್ಯತ್ಯಾಸವಿದೆ. ಆದರೆ, ಅವುಗಳ ಪರಿಣಾಮ ಹೆಚ್ಚು-  ಕಡಿಮೆ ಒಂದೇ ಆಗಿದೆ. ಸೋಡಿಯಂ ಹೈಪೋಕ್ಲೋರೈಡ್‌ ಸೇರಿದಂತೆ ವಿವಿಧ ದ್ರಾವಣಗಳಿಂದ ನೆಲ ಮತ್ತು ಗೋಡೆಗಳಂತಹ ಪ್ರದೇಶದಲ್ಲಿರುವ ಸಾಂಕ್ರಾಮಿಕ ಸೋಂಕಿನ ಅಂಶಗಳು ಸಾವನ್ನಪ್ಪುತ್ತವೆ. ಗಾಳಿಯಲ್ಲಿ ಕೋವಿಡ್ 19 ಸೋಂಕು ಇರುವ ಸಾಧ್ಯತೆ ಕಡಿಮೆ. ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಬಳಸುತ್ತಿರುವ ಕ್ರಮಗಳು ಸರಿಯಾಗಿವೆ ಎಂದು ಸಾಂಕ್ರಾಮಿಕ ರೋಗಗಳ ಜಂಟಿ ನಿರ್ದೇಶಕ ಡಾ.ಪ್ರಕಾಶ್‌ ಕುಮಾರ್‌ ತಿಳಿಸುತ್ತಾರೆ.

ಅಗ್ನಿಶಾಮಕ ದಳದ 8 ವಾಹನ, ಜಲಮಂಡಳಿಯ 20 ಜಟ್ಟಿಂಗ್‌ ಯಂತ್ರ, ಹ್ಯಾಂಡಲ್‌ ಪವರ್‌ ಸಿಂಪಡಣೆ ಯಂತ್ರ, ಪ್ರತಿ ವಾರ್ಡ್‌ಗೆ ತಲಾ 2, ಡ್ರೋನ್‌ 6, 19 ಮಿಸ್‌ಬ್ಲೋರ್‌ ಯಂತ್ರಗಳನ್ನು ನಗರ ವ್ಯಾಪ್ತಿ ಬ್ಲೀಚಿಂಗ್‌ ಪೌಡರ್‌ ಸಿಂಪಡಣೆ ಮಾಡಲು ಬಳಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ನಗರದ ವಿವಿಧೆಡೆ ಸೋಡಿಯಂ ಹೈಪೋಕ್ಲೋರೈಡ್‌ (ಬ್ಲೀಚಿಂಗ್‌) ಪೌಡರ್‌ಸಿಂಪಡಣೆ ಮಾಡಲಾಗುತ್ತಿದೆ. ಈ ದ್ರಾವಣಕ್ಕೆ ಸಾಂಕ್ರಾಮಿಕ ರೋಗ ತಡೆಯುವ ಶಕ್ತಿ ಇದೆ.ಜನ ಸಂಚಾರ ಇಲ್ಲದೇ ಇರುವುದರಿಂದ ನಗರದ ಪ್ರಮುಖ ಭಾಗಗಳನ್ನು ಆದ್ಯತೆಯ ಮೇಲೆ ಸ್ವಚ್ಛ ಮಾಡಲಾಗುತ್ತಿದೆ.  -ಸರ್ಫರಾಜ್‌ಖಾನ್‌, ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

Advertisement

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next