ಹೊನ್ನಾವರ: ಸೆಕೆಸೆಕೆ ಎನ್ನುವಷ್ಟರಲ್ಲಿ ಕೊರೊನಾ ಮತ್ತು ಕೆಎಫ್‌ಡಿ ವೈರಸ್‌ಗಳು ಜಿಲ್ಲೆಯನ್ನು ಸ್ಥಬ್ಧಗೊಳಿಸಿದೆ. ಜಿಲ್ಲೆಯನ್ನು ಕಾಯಂ ಕಾಡುವ ಮಂಗನ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ನಾಲ್ಕು ದಶಕಗಳಿಂದ ಕಾಡುವ ಮಂಗನ ಕಾಯಿಲೆ ಮತ್ತೆ ವಕ್ಕರಿಸಿದೆ. ಸರ್ಕಾರ ಮಂಗನ ಕಾಯಿಲೆ ಎಂದು ಪ್ರತ್ಯೇಕ ಜಿಲ್ಲಾ ಕಾರ್ಯಾಲಯ ತೆರೆದು ವೈದ್ಯಾಧಿಕಾರಿಗಳಾಗಿ ಡಾ| ಸತೀಶ ಶೇಟ್ ರನ್ನು ನೇಮಿಸಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆ ಮಂಗನ ಕಾಯಿಲೆ ಸಂಭವನೀಯ ಪ್ರದೇಶದ ಜನರಿಗೆ ನೀಡಲು 117089 ಡೋಸ್ ಲಸಿಕೆ ತರಲಾಗಿತ್ತು. ಒಟ್ಟೂ ಗುರಿಯ ಶೇ.28ರಷ್ಟನ್ನು ಮಾತ್ರ ಸಾಧಿಸಲು ಸಾಧ್ಯವಾಯಿತು. 3ಡೋಸ್ ಲಸಿಕೆ ಪಡೆದ ಪ್ರದೇಶದ ಜನರಿಗೆ ಮಂಗನ ಕಾಯಿಲೆ ಬಂದಿಲ್ಲ. ಬಂದರೂ ಕೂಡಲೇ ಗುಣವಾಗಿದೆ. ಕೇವಲ ಒಂದು ಡೋಸ್ ಪಡೆದ, ಪಡೆಯದ ಪ್ರದೇಶದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.
2019ರ ಬೇಸಿಗೆಯಲ್ಲಿ 3ಜನ ಮೃತಪಟ್ಟಿದ್ದರು. ಪ್ರಸಕ್ತ ಸಾಲಿನಲ್ಲಿ 20 ಜನರ ರಕ್ತ ಪರೀಕ್ಷೆ ಮಾಡಿದ್ದು, ಸಿದ್ಧಾಪುರದಲ್ಲಿ 10, ಕುಮಟಾದಲ್ಲಿ 1, ಹೊನ್ನಾವರದಲ್ಲಿ 2 ಜನರಿಗೆ ಖಚಿತ ಪಟ್ಟಿದೆ. ಸಿದ್ಧಾಪುರದ ಒಬ್ಬರು ಮೃತಪಟ್ಟಿದ್ದಾರೆ. ಮಂಗನ ಕಾಯಿಲೆ ಎಂದು ಹೆದರಿ ಆಸ್ಪತ್ರೆಗೆ ಹೋಗದೆ ಕೊನೆಯ ಕ್ಷಣದಲ್ಲಿ ಮಣಿಪಾಲ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
141 ಮಂಗಗಳ ರಕ್ತ ತಪಾಸಣೆ ಮಾಡಿದ್ದ 13 ಮಂಗಗಳಿಗೆ ಕಾಯಿಲೆ ಖಚಿತಪಟ್ಟಿದೆ. ಕುಮಟಾ, ಹೊನ್ನಾವರ, ಸಿದ್ಧಾಪುರ ಮೂರು ತಾಲೂಕುಗಳಲ್ಲಿ ಮಂಗನಕಾಯಿಲೆ ಸವಾಲು ಹಾಕಿದೆ. ಮೂರು ಬಾರಿ ಲಸಿಕೆ ಪಡೆದರೆ ಮಂಗನ ಕಾಯಿಲೆ ನಿರೋಧಕ ಶಕ್ತಿ ಬರಲು ಮೂರು ತಿಂಗಳು ಬೇಕು, ಈಗ ಲಸಿಕೆ ಪಡೆದರೂ ಯಾವ ಪ್ರಯೋಜನವಿಲ್ಲ. ಈಗ ಕಾಳಜಿ ವಹಿಸುವುದೊಂದೇ ಮಾರ್ಗ. ಬೇಸಿಗೆಯಲ್ಲಿ ಅರಣ್ಯಕ್ಕೆ ಹೋಗಿ ಕಟ್ಟಿಗೆ, ತರಗೆಲೆ ತರುವುದನ್ನು ನಿಲ್ಲಿಸಬೇಕು. ಕಾಡಿನಲ್ಲಿ ವಾಸಿಸುವವರು ಡಿಎಂಪಿ ತೈಲವನ್ನು ಹಚ್ಚಿಕೊಂಡು ಓಡಾಡಬೇಕು. ಮನೆಗೆ ಮರಳಿದಾಗ ಬಟ್ಟೆಯನ್ನು, ಕಾಲನ್ನು ಬಿಸಿಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು. ಮಂಗ ಸತ್ತರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕು ಎಂದು ಕೆಎಫ್‌ಡಿ ಜಿಲ್ಲಾ ವೈದ್ಯಾಧಿಕಾರಿ ಡಾ| ಸತೀಶ ಶೇಟ್ ಹೇಳುತ್ತಾರೆ.
ಸರ್ಕಾರ ನೆರವಿಗೆ ಬರದಿದ್ದರೆ ಕಷ್ಟ: ಇನ್ನು ಮೂರು ತಿಂಗಳು ಬೇಸಿಗೆ ಇದೆ. ಬಿಸಿಲು ಜೋರಾದಂತೆ ಮಂಗನಿಂದ ಮಂಗಕ್ಕೆ ಜ್ವರ ಹರಡಿ ಅದು ಊರೆಲ್ಲಾ ಉಣ್ಣಿಗಳನ್ನು ಉದುರಿಸುತ್ತ ಓಡಾಡಿ ಊರು ತುಂಬ ಕಾಯಿಲೆ ಹರಡುವ ಲಕ್ಷಣವಿದೆ. ಜ್ವರ ಬಂದ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿದರೆ ಕಡಿಮೆ ಮಾಡಬಹುದು. ಮಂಗನ ಕಾಯಿಲೆಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿಲ್ಲ. ಬಡ, ಮಧ್ಯಮ ವರ್ಗದ ಜನರನ್ನು ಮಂಗನ ಕಾಯಿಲೆ ಕಾಡತೊಡಗಿದೆ. ಜನ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಾರೆ. ಅಲ್ಲಿಂದ ದೊಡ್ಡ ಆಸ್ಪತ್ರೆಗೆ ಕಳಿಸಿದರೆ ಕನಿಷ್ಠ 2-3 ಲಕ್ಷ ರೂ. ವೆಚ್ಚವಾಗುತ್ತದೆ. ಎಲ್ಲ ಆಸ್ಪತ್ರೆ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಗ್ರಾಪಂ ಒಕ್ಕೂಟದ ಪ್ರಮುಖರಾದ ಮಂಕಿ ವಾಮನ ನಾಯ್ಕ, ಉಪ್ಪೋಣಿ ಯೋಗೇಶ ರಾಯ್ಕರ, ಚಂದ್ರಕಾಂತ ಕೊಚರೇಕರ್, ಮೊದಲಾದವರು ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಾಸಕ, ಮುಖಂಡರಂತೆ ಇಲ್ಲಿ ಮಾತನಾಡುವ ಬದಲು ಬೆಂಗಳೂರಿನಲ್ಲಿ ಮಾತನಾಡಲಿ ಎಂದು ಹೇಳಿದ್ದಾರೆ.
ಶಾಶ್ವತ ಪರಿಹಾರ ಮುಂದಿನ ಮಾತು. ಜಿಲ್ಲೆಯ ಶಾಸಕರು, ಮಂತ್ರಿಗಳು, ಸಂಸದರು ತಮ್ಮ ಪ್ರಭಾವವನ್ನು ಬಳಸಬೇಕು ಎಂಬುದು ಜನರ ಅಪೇಕ್ಷೆಯಾಗಿದೆ.
-ಜೀಯು, ಹೊನ್ನಾವರ