ಬೆಂಗಳೂರು: ಶಿಕ್ಷಕರ ಸಂಬಳವನ್ನು ಡಬಲ್ ಮಾಡಬೇಕು, ಪ್ರತಿ ತರಗತಿಗೊಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು, ವಾರದಲ್ಲಿ ಐದು ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸಬೇಕು, ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಮುಂತಾದ ಬೇಡಿಕೆಗಳನ್ನು ಏಳನೇ ವೇತನ ಆಯೋಗದ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಡಿಸಿದೆ.
ಏಳನೇ ವೇತನ ಆಯೋಗ ನಿಗದಿಗೊಳಿಸಿದ್ದ ಪ್ರಶ್ನಾವಳಿಗಳಿಗೆ ಪ್ರಾಥಮಿಕ ಶಿಕ್ಷಕರ ಸಂಘ ಶುಕ್ರವಾರ 135 ಪುಟಗಳ ಪ್ರತಿಕ್ರಿಯೆನ್ನು ಸಲ್ಲಿಸಿದ್ದು 25 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಸ್ತುತ ಪಡೆಯುತ್ತಿರುವ ವೇತನ ಶ್ರೇಣಿ 25,800 – 51,400 ರೂ ಅನ್ನು ದ್ವಿಗುಣಗೊಳಿಸಿ 51,600 – 1,02,800 ರೂ.ಗಳ ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಪಡಿಸಬೇಕು. 15 ವರ್ಷ ಸೇವೆ ಸಲ್ಲಿಸಿದವರಿಗೆ ನೀಡುವ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿಯನ್ನು ಎರಡು ಪಟ್ಟು ಹೆಚ್ಚಿಸಿ ಪ್ರತ್ಯೇಕ ವೇತನ ಶ್ರೇಣಿ ಮತ್ತು ಪದವೀಧರ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನವನ್ನು ದ್ವಿಗುಣಗೊಳಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಗೊಳಿಸುವಂತೆ ಮನವಿ ಮಾಡಲಾಗಿದೆ.
ಸೇವಾ ಹಿರಿತನದ ಮೇಲೆ ವೇತನ ಶ್ರೇಣಿ ನಿಗದಿ ಪಡಿಸಬೇಕು, ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಮುಂಬಡ್ತಿ ನೀಡಬೇಕು, ಮನೆ ಬಾಡಿಗೆ ಭತ್ಯೆ ಹೆಚ್ಚಿಸಬೇಕು, ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏಕ ರೂಪದ ವೇತನ ನಿಗದಿ ಮಾಡಬೇಕು, ಪ್ರತಿ ಶಾಲೆಗೆ ಒಬ್ಬ ‘ಡಿ’ ಗ್ರೂಪ್ ಸಿಬ್ಬಂದಿಯನ್ನು ಮಂಜೂರು ಮಾಡಬೇಕು ಎಂದು ಕೋರಲಾಗಿದೆ.