Advertisement

ಡಬಲ್‌ ರೋಲ್‌ ಸೂಟ್!‌

04:44 AM Jun 03, 2020 | Lakshmi GovindaRaj |

ವರ್ಕ್‌ ಫ್ರಮ್‌ ಹೋಂ ಮಾಡುವಾಗಲೂ ಫ್ಯಾಷನ್‌ ಟ್ರೆಂಡ್‌ ಬಗ್ಗೆ ಚಿಂತಿಸುವವರು ಇರುತ್ತಾರಾ ಅನ್ನಬೇಡಿ. ವರ್ಕ್‌ ಫ್ರಮ್‌ ಹೋಂ ಎಂದ ಮಾತ್ರಕ್ಕೆ, ಸ್ಟೈಲಿಶ್‌ ಆಗಿ ಕಾಣಬಾರದು ಅಂತಿದೆಯಾ? ಮನೆಯಲ್ಲಿ ತೊಡುವ ಉಡುಗೆಯಲ್ಲೂ  ಸ್ಟೈಲಿಶ್‌ ಆಗಿ ಕಾಣಬಹುದು.

Advertisement

ರಾತ್ರಿ ಮಲಗುವ ಮುನ್ನ ತೊಡುತ್ತಿದ್ದ ನೈಟ್‌ ಸೂಟ್‌, ಇದೀಗ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗುತ್ತಿದೆ. ಕಾರಣ, ಬಹಳಷ್ಟು ಜನರು ಮನೆಯಿಂದಲೇ ಕೆಲಸ ಮಾಡಬೇಕಾಗಿರುವುದು. ಆಫೀಸ್‌ಗೆ ತೊಡುವ ಉಡುಗೆ ತೊಟ್ಟು, ಮನೆಗೆಲಸ ಮಾಡುವುದು ಕಷ್ಟ. ಹಾಗೆಯೇ, ನೈಟಿ, ನೈಟ್‌ ಡ್ರೆಸ್‌, ಪೈಜಾಮ, ಲುಂಗಿ ಮತ್ತಿತರ ಉಡುಗೆ ತೊಟ್ಟು ಆಫೀಸ್‌ ವೆಬ್‌ (ವಿಡಿಯೋ) ಮೀಟಿಂಗ್‌ನಲ್ಲಿ ಕಾಣಿಸಿಕೊಳ್ಳುವುದೂ ಮುಜುಗರದ ಸಂಗತಿ.

ಅಲ್ಲವೆ? ಹಾಗಾಗಿ ಮನೆಯಲ್ಲೂ,  ಆಫೀಸ್‌ನಲ್ಲೂ  ಧರಿಸಬಹುದಾದ ಸ್ಟೈಲಿಶ್‌ ಮತ್ತು ಆರಾಮದಾಯಕ ಸೂಟ್‌ಗಳು ಟ್ರೆಂಡ್‌ ಆಗುತ್ತಿವೆ. ಪೈಜಾಮ ಸೂಟ್‌ ಕೂಡ ಹೌದು, ಫಾರ್ಮಲ್ಸ… ಕೂಡ ಹೌದು ಎನ್ನುವಷ್ಟರ ಮಟ್ಟಿಗೆ ಅಂದವಾಗಿ ಕಾಣುವ ಈ ಡಬಲ್‌ ರೋಲ್‌  ಸೂಟ್‌ ಸದ್ಯಕ್ಕೆ ಎಲ್ಲರ ಫೇವರಿಟ್‌!

ಕಲರ್‌ಫ‌ುಲ್‌ ಆಗಿ ಕಾಣಿಸಿ: ಕಾಲರ್‌ ಇರುವ, ಜೇಬುಗಳೂ ಇರುವ, ಫ‌ುಲ್‌ ಸ್ಲಿವ್‌ನ ಪ್ಲೆನ್‌ ಅಥವಾ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ನೈಟ್‌ ಸೂಟ್‌ ತೊಡುತ್ತಿರುವ ಮಹಿಳೆಯರು, ಫ್ಯಾಷನ್‌ ಲೋಕದಲ್ಲಿ ಹೊಸ ಅಲೆ ಆರಂಭಿಸಿದ್ದಾರೆ.  ಚೆಕ್ಸ್‌, ಪೋಲ್ಕಾ ಡಾಟ್ಸ್‌, ಅನಿಮಲ್‌ ಪ್ರಿಂಟ್‌, ಫ್ರೊರಲ್‌ ಪ್ರಿಂಟ್‌, ಕಾಲಂಕಾರಿ, ವಾರ್ಲಿ ಚಿತ್ರಕಲೆ, ಪೇಸ್ಟಲ್‌ ಶೇಡ್ಸ್‌, ಕಸೂತಿ, ಮತ್ತಿತರ ಆಯ್ಕೆಗಳುಳ್ಳ ಸೂಟ್‌ಗಳನ್ನು ತೊಡಲು ಇದೇ ಉತ್ತಮ ಸಮಯ.

ಸರಳತೆಯ ಸೂತ್ರ: ನೈಟ್‌ ಸೂಟ್‌ಗಳು ಬೋರಿಂಗ್‌ ಅಲ್ಲ. ವಿಶಿಷ್ಟ ಕೇಶ ವಿನ್ಯಾಸ, ಸೂಕ್ತವಾದ ಆಕ್ಸೆಸರೀಸ್‌, ಮಿನಿಮಲ್‌ ಮೇಕ್‌ಅಪ್‌ (ಅಂದರೆ ಸಾಧ್ಯವಾದಷ್ಟೂ ಕಡಿಮೆ ಮೇಕಪ್‌) ಜೊತೆ ಧರಿಸಿದಾಗ ಈ ಡಬಲ್‌ ರೋಲ್‌ ಸೂಟ್‌ನ  ಅಂದ, ಇನ್ನಷ್ಟು ಹೆಚ್ಚಾಗುತ್ತದೆ. ಉಟ್ಟ ಬಟ್ಟೆ ಎದ್ದು ಕಾಣಬೇಕು ಎಂದಾಗ, ಮೇಕಪ್‌ ಸರಳ ಹಾಗೂ ಮಿತವಾಗಿ ಇರಬೇಕು.

Advertisement

ಫಾರ್ಮಲ್ಸ್‌ ಕೂಡಾ ಆಗಬಹುದು: ಬೇಸಿಗೆಯಲ್ಲಿಯೂ ಆರಾಮ ದಾಯಕ ಅನ್ನಿಸುವ ಈ ವಸ್ತ್ರ, ಬೆವರಿನಿಂದ ಮೈಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಇದನ್ನು ಕ್ಯಾಶುವಲ್‌ ಉಡುಗೆ ಎಂದು ಪರಿಗಣಿಸದೆ, ಫಾರ್ಮಲ್ಸ್‌ನಂತೆಯೂ  ತೊಡಬಹುದು. ನೆನಪಿರಲಿ, ನೈಟ್‌ಸೂಟ್‌ ಸಡಿಲವಿದ್ದರಷ್ಟೇ ಚೆನ್ನ. ಬಿಗಿಯಾಗಿದ್ದರೆ, ಇದನ್ನು ಆರಾಮಕ್ಕಾಗಿ ತೊಡುವ ಉದ್ದೇಶವೇ ವ್ಯರ್ಥವಾಗುತ್ತದೆ.

ಟ್ರೆಂಡ್‌ ಸೃಷ್ಟಿಸಿ: ಈಗ ಸೆಲೆಬ್ರಿಟಿಗಳು, ಲಾಕ್‌ಡೌನ್‌ ಸಮಯದಲ್ಲಿ ತಾವು ಏನೇನು  ಮಾಡುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಳ್ಳು ತ್ತಿದ್ದಾರೆ. ಹಲವರು, ಸ್ಟೈಲಿಶ್‌ ನೈಟ್‌  ಸೂಟ್‌ಗಳನ್ನು ತೊಟ್ಟು, ಈ ಸ್ಟೈಲ್‌ ಅನ್ನು ಜನಪ್ರಿಯಗೊಳಿಸಿ ದ್ದಾರೆ. ಇನ್ನೇಕೆ ತಡ, ನಿಮ್ಮ ಬಳಿಯೂ ಡಬಲ್‌  ರೋಲ್‌ ಸೂಟ್‌ ಇದ್ದರೆ, ಅದನ್ನು ತೊಟ್ಟು, ಚಿತ್ರ ಕ್ಲಿಕ್ಕಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ.  ‌

* ಅದಿತಿಮಾನಸ ಟಿ.ಎಸ್.

Advertisement

Udayavani is now on Telegram. Click here to join our channel and stay updated with the latest news.

Next