ದೋಟಿಹಾಳ: ಸರಕಾರ ಪ್ರತಿಯೊಬ್ಬರಿಗೂ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಿ. ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆಯನ್ನು ಬಯಲು ಮುಕ್ತ ಗ್ರಾಮವನ್ನಾಗಿ ಮಾಡೋಣ. ಇದಕ್ಕಾಗಿ ಸರಕಾರ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಅದರೆ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸುವ ಅಗತ್ಯವಿದೆ.
ತಾಲೂಕಿನಲ್ಲಿ ಮುದೇನೂರ ಗ್ರಾ.ಪಂ. ವ್ಯಾಪ್ತಿಗೆ ಬರುವ ಮಾದಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ಬಯಲೇ ಶೌಚಾಲಯವಾಗಿದೆ.
ಈ ಶಾಲೆಯಲ್ಲಿ 1-7ನೇ ತರಗತಿಯವರೆಗೆ ಒಟ್ಟು 152 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಖಾಯಂ ಶಿಕ್ಷಕರೂ ಹಾಗೂ ಇನ್ನಿಬ್ಬರು ಅತಿಥಿ ಶಿಕ್ಷಕರಿದ್ದಾರೆ. ಇದರಲ್ಲಿ ಮೂರು ಮಹಿಳಾ ಶಿಕ್ಷಕಿಯರು ಇದ್ದಾರೆ. 80ಕ್ಕೂ ಹೆಚ್ಚು ವಿದ್ಯಾರ್ಥಿನಿರು ಇದ್ದಾರೆ. ಆದರೆ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲಿಗೆ ಹೋಗಬೇಕಾಗಿದೆ. ಆದರೆ ಈ ಶಾಲೆಯ ವಿದ್ಯಾರ್ಥಿನಿಯರ ಪಾಡು ಹೇಳತೀರದು.
ಶಾಲೆಯಲ್ಲಿ 1-7 ನೇ ತರಗತಿಯವರೆಗೆ ಒಟ್ಟು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿನಿಯರಿಗೆ ಶೌಚಾಲಯಗಳ ಸಮಸ್ಯೆ ಇದೆ. ಇವರು ಶೌಚಾಲಯಕ್ಕೆ ಹೋಗಬೇಕೆಂದರೆ ಮನೆಗೆ ಹೋಗಿ ಬರುತ್ತಾರೆ. ಇದೊಂದು ದುರದೃಷ್ಟಕರ ಸಂಗತಿ.
ಈ ಶಾಲೆಗೆ ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೇಳುತ್ತಿದೆ. ಈ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕಿಯರ ತೊಂದರೆಗಳು ಅನುಭವಿಸುತ್ತಿದ್ದು, ಇದು ಒಂದು ಗೌರವದ ಪ್ರಶ್ನೆಯಾಗಿದೆ. ಶಾಲೆಗೆ ಒಂದು ಶೌಚಾಲಯ ಕಟ್ಟಿಸಿ ಕೊಡಲು ಶಾಲೆಯ ಮುಖ್ಯೋಪಾದ್ಯರು ಗ್ರಾ.ಪಂ.ಗೆ ಈಗಾಗಲೇ ಸುಮಾರು 4-5 ಪತ್ರಗಳು ಬರೆದು, ಅಲೆದಾಡುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಸದ್ಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಇದೆ. ತಾಲೂಕಿನ ಅನೇಕ ಶಾಲೆಗಳಲ್ಲಿ ಶೌಚಾಲಯಗಳು ಇದ್ದರೂ ನರೇಗಾ ಯೋಜನೆಗಲ್ಲಿ ಇನ್ನೊಂದು ಶೌಚಾಲಯ ಕಟ್ಟಿಸಿರುವುದು ಕಂಡುಬರುತ್ತದೆ. ಆದರೆ ಈ ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಏಕೆ? ಗ್ರಾ.ಪಂ.ನವರು ಶೌಚಾಲಯ ಕಟ್ಟಿಸಲು ಮುಂದಾಗುತ್ತಿಲ್ಲ ಯಾಕೆ? ಎಂಬುದು ಪ್ರಶ್ವೆಯಾಗಿದೆ.
ಜಿಲ್ಲಾ ಪಂಚಾಯಿತಿಯ ಸಿಇಓ ಅವರಿಗೆ ಶಾಲಾ ಮಕ್ಕಳ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ ಈ ಶಾಲೆಯ ವಿದ್ಯಾರ್ಥಿಗಳ ಕಷ್ಟವನ್ನು ಕೇಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಇನ್ನಾದರೂ ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಶಾಲೆಗೆ ಒಂದು ಹೈಟೆಕ್ ಶೌಚಾಲಯ ಕಟ್ಟಿಸಿಕೊಡಬೇಕು ಎಂಬುವುದು ಪ್ರಜ್ಞಾವಂತರ ಕಳಕಳಿಯಾಗಿದೆ.
ಶಾಲೆಯಲ್ಲಿ ಶೌಚಾಲಯದ ಸಮಸ್ಯೆ ಇದೆ. ಇದರ ಬಗ್ಗೆ ಮುದೇನೂರ ಗ್ರಾ.ಪಂ.ಗೆ 4-5 ಬಾರಿ ಮನವಿ ಪತ್ರ ಸಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. –
ಬಸವರಾಜ ಅಂಬಳನೂರ, ಮುಖ್ಯೋಪಾಧ್ಯಾರು (ಪ್ರ) ಪ್ರಾಥಮಿಕ ಶಾಲೆ, ಮಾದಾಪೂರ.
ಸರಕಾರಿ ಶಾಲೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡುವುದು ಗ್ರಾ.ಪಂ.ನ ಕರ್ತವ್ಯವಾಗಿದೆ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಕೂಡಲೇ ಶಾಲೆಗೆ ಒಂದು ಶೌಚಾಲಯ ನಿರ್ಮಿಸಿ ಕೊಡಲು ತಾ.ಪಂ.ಗೆ ಪತ್ರ ಬರೆಯುತ್ತೇವೆ. –
ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಷ್ಟಗಿ
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶ ಇದೆ. ಮುದೇನೂರು ಗ್ರಾ.ಪಂ. ಪಿಡಿಒ ಜೊತೆ ಮಾತನಾಡಿ, ಒಂದು ವಾರದಲ್ಲಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳುತ್ತೇನೆ.
-ಶಿವಪ್ಪ ಸುಬೇದಾರ, ತಾಪಂ ಇಒ ಕುಷ್ಟಗಿ
-ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ