Advertisement

Dotihala: ಶಿಥಿಲಗೊಂಡ ಶಾಲಾ ಕೊಠಡಿ: ಶಾಲೆಗೆ ಕಳಿಸಲು ಪಾಲಕರ ಹಿಂದೇಟು

02:41 PM May 31, 2024 | Kavyashree |

ದೋಟಿಹಾಳ: ರಾಜ್ಯದಲ್ಲಿ ಶುಕ್ರವಾರ ಶಾಲಾ ಪ್ರಾರಂಭೋತ್ಸವ ನಡೆದರೆ, ಕೊಪ್ಪಳ ಜೆಲ್ಲೆಯ ಕುಷ್ಟಗಿ ತಾಲೂಕಿನ ಈ ಶಾಲೆಯಲ್ಲಿ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿತ್ತು. ಶಾಲಾ ಶಿಕ್ಷಕರು ಶಾಲಾ ಪ್ರಾರಂಭೋತ್ಸವಕ್ಕೆ ಶಾಲೆಯನ್ನು ಸಿಂಗಾರ ಮಾಡಿ ಸಮವಸ್ತ್ರ ವಿತರಣೆಗೆ ಸಿದ್ಧ ಮಾಡಿಕೊಂಡಿದ್ದರು. ಅದರೆ ಶಾಲಾ ಮಕ್ಕಳು ಮಾತ್ರ ಶಾಲೆಯ ಹತ್ತಿರವೂ ಸುಳಿಯಲಿಲ್ಲ.

Advertisement

ಶಾಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ರಕ್ಷಣೆ ಇಲ್ಲದ ಕಾರಣ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಸಮೀಪದ ಮೇಗೂರ ಗ್ರಾಮಸ್ಥರು ಹೇಳುತ್ತಾರೆ.

ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಆಗಮಿಸಿ ನಮ್ಮ ಶಾಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಸುಮಾರು 40-45 ವರ್ಷಗಳ ಹಳೆ ಕಟ್ಟಡಗಳಿವು. ಇಂಹತ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಶಿಕ್ಷಣ ನೀಡಲು ಆಗುವುದಿಲ್ಲ. ಮಕ್ಕಳಿಗೆ ಏನಾದರೂ ಅವಘಡ ಸಂಭವಿಸಿದರೆ ಜವಾಬ್ದಾರಿ ವಹಿಸಿಕೊಳ್ಳುವವರು ಯಾರು? ಇದರ ಬಗ್ಗೆ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪಾಲಕರು ಶಾಲೆಗೆ ಆಗಮಿಸಿದ ಮಕ್ಕಳನ್ನು ಮರಳಿ ಮನೆಗೆ ಕರೆದುಕೊಂಡು ಹೋದರು.

ಈ ವೇಳೆ ಮಾತನಾಡಿದ ಗ್ರಾಮಸ್ಥರು ನಮ್ಮ ಗ್ರಾಮದ ಶಾಲೆಯ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಹೊಸ ಕೊಠಡಿ ಮಂಜೂರು ಮಾಡಿಸಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ನಿಗಮ ಮಂಡಳಿಯಿಂದ ಮೈಕ್ರೋ ಯೋಜನೆಯಲ್ಲಿ ಶಾಲೆಗೆ ಎರಡು ಹೊಸ ಕೊಠಡಿ ನಿರ್ಮಾಣಕ್ಕೆ ಹಣ ಮಂಜೂರಾಗಿದೆ. ಆದರೆ ಸದ್ಯ ಅಧಿಕಾರಿಗಳು ಮಾತ್ರ ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಯಾಕೆ? ಇಲಾಖೆ ಅಧಿಕಾರಿಗಳ ಮಾಹಿತಿಯ ಪ್ರಕಾರ ಹಣ ಮರಳಿ ಹೋಗಿದೆ ಎಂದು ಮಾಹಿತಿ ನೀಡುತ್ತಾರೆ. ಹಾಗಾದರೆ ನಮ್ಮ ಹಳ್ಳಿ ಮಕ್ಕಳ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಹೀಗಾಗಿ ನಮ್ಮ ಮಕ್ಕಳ ರಕ್ಷಣೆ ಹಾಗೂ ಶಿಕ್ಷಣದ ಬಗ್ಗೆ ನಾವೇ ಒಂದು ತೀರ್ಮಾನ  ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Advertisement

ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಶಾಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳಿದ್ದು, ಮೂರು ಕೊಠಡಿಗಳಲ್ಲಿ ಒಂದು ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ಒಂದು ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಕೊಠಡಿಯಲ್ಲಿ ಕಾರ್ಯಾಲಯ ಇದೆ.

ಈ ವೇಳೆ ಯಂಕನ ಗೌಡ ಮಾಲಿಪಾಟೀಲ್, ಮಲ್ಲನಗೌಡ ತೋಟದ, ಆನಂದಪ್ಪ ಮುಲಿನಮನಿ, ಶಂಕರಗೌಡ ಹುಡೇದ, ಸಿದ್ದನಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಇತರರು ಶಾಲೆಗೆ ಭೇಟಿ ನೀಡಿದರು.

ವರ್ಷಗಳಿಂದ ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಹೊಸ ಕೊಠಡಿಗೆ ಅನುದಾನ ಬಂದರೂ ನಿರ್ಮಾಣ ಮಾಡುತ್ತಿಲ್ಲ ಯಾಕೆ? ನಮ್ಮ ಹಳ್ಳಿ ಮಕ್ಕಳ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಕೂಡಲೇ ಹೊಸ ಕೊಠಡಿಗಳ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಆರಂಭ ಆಗುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. – ಪಾಲಕರು ಹಾಗೂ ಗ್ರಾಮಸ್ಥರು. ಮೇಗೂರ

ಹೊಸ ಎರಡು ಕೊಠಡಿ ನಿರ್ಮಾಣಕ್ಕೆ ಕೆಕೆಆರ್‌ಡಿಪಿ ನಿಗಮದಿಂದ ಅನುಮೋದನೆ ಆಗಿದೆ. ಆದರೆ ಇದುವರೆಗೂ ಕಾಮಗಾರಿ ಆರಂಭ ಮಾಡಿಲ್ಲ. ಇದರಲ್ಲಿ ಏನೋ ನಡೆದಿದೆ. ಹಳ್ಳಿ ಮಕ್ಕಳ ಬಗ್ಗೆ ಇವರಿಗೆ ಕಾಳಜಿ ಇಲ್ಲ. – ಪರಸಪ್ಪ ಮೇಗೂರ.

ಶಾಲಾ ಕೊಠಡಿ ಶಿಥಿಲಗೊಂಡ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಶಿಥಿಲಗೊಂಡ ಕಟ್ಟಡ ನೆಲಸಮ ಮಾಡಲು ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. – ಚಂದ್ರಶೇಖರ ಇಂದರಗಿ,  ಶಾಲಾ ಮುಖ್ಯ ಗುರುಗಳು ಮೇಗೂರ.

ಮೇಗೂರ ಶಾಲೆಗೆ ಕೆಕೆಆರ್‌ಡಿಪಿ ನಿಗಮದ ಮೈಕ್ರೋ ಯೋಜನೆಯಲ್ಲಿ ಎರಡು ಕೊಠಡಿಗಳು ಮಂಜೂರಾಗಿದ್ದವು. ಆದರೆ ಬೇರೆ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕೂಡಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಿಥಿಲಗೊಂಡ ಕೊಠಡಿಗಳ ಪರಿಶೀಲನೆ ಮಾಡಿ ವರದಿ ನೀಡುವಂತೆ ತಿಳಿಸುತ್ತೇನೆ. – ಸುರೇಂದ್ರ ಕಾಂಬಳೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ

ಉದಯವಾಣಿ ಸಮಾಚಾರ

ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ

Advertisement

Udayavani is now on Telegram. Click here to join our channel and stay updated with the latest news.

Next