ದೋಟಿಹಾಳ: ಈಗೀನ ಹಳ್ಳಿಗಳು ಸಂಪೂರ್ಣ ಪಟ್ಟಣಗಳಾಗಿಯೂ ಬದಲಾಗಿಲ್ಲ, ಮೊದಲಿನಂತೆ ಹಳ್ಳಿಗಳಾಗಿಯೂ ಉಳಿದಿಲ್ಲ. ನೋಡಲು ಹಳ್ಳಿಯಂತೆ ಕಂಡರೂ ಗ್ರಾಮದ ಮನೆಗಳನ್ನು ಹೊಕ್ಕಾಗ ಅಲ್ಲಿ ಹಳ್ಳಿಯನ್ನು ಬಿಂಬಿಸುವ ಯಾವುದೇ ಕುರುಹು ಕಾಣುವುದಿಲ್ಲ. ಹಂತಿ ಪದ ಹೇಳುತ್ತಾ ಕಣದಲ್ಲಿ ರಾಶಿ ಮಾಡುತ್ತಿದ್ದ ರೈತರು ತಮ್ಮ ರಾಶಿಗಳನ್ನು ರಸ್ತೆಗೆ ತಂದಿದ್ದಾರೆ, ಸೋಬಾನೆ, ಲಾವಣಿ, ಗೀಗೀ ಪದಗಳ ರಾಗ ಈಗ ಹಳ್ಳಿಗಳ ಮನೆಯಿಂದ ಕೇಳುತ್ತಿಲ್ಲ. ಪ್ಯಾಷನ್ ಸಾಮಾನುಗಳೆಲ್ಲ ಹಳ್ಳಿ ಮನೆ ಹೊಕ್ಕು ಗ್ರಾಮೀಣ ಸಂಸ್ಕೃತಿ ಮಾಯವಾಗುತ್ತಿದೆ. ವಾಸ್ತವ ಹೀಗಿರುವಾಗ ಮ್ಯಾಡರಡೊಕ್ಕಿ ಗ್ರಾಮದ ಮಹಿಳೆಯರು ಶ್ಯಾವಿಗೆ ಹೊಸೆಯುವ ಸಂಪ್ರದಾಯವನ್ನು ಇನ್ನೂ ಜೀವಂತವಾಗಿರಿಸಿದ್ದಾರೆ.
ಶ್ಯಾವಿಗೆ ಹೊಸೆಯುವ ನಾರಿಯರು: ಹಿಂದೆ ಹಳ್ಳಿಗಳಲ್ಲಿ ಮಾಘ-ಪಾಲ್ಗುಣ ಮಾಸಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ಮಹಿಳೆಯರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಗೋಧಿ, ಜೋಳ, ಮಡಿಕೆ, ತೊಗರಿ, ಇತ್ಯಾದಿ ಹೊಸ ಧಾನ್ಯಗಳನ್ನು ಯುಗಾದಿಯ ಹಬ್ಬದ ದಿನದಂದು ಬಳಕೆ ಮಾಡುವ ವಾಡಿಕೆ ಕಂಡುಬರುತ್ತವೆ. ಕಾರಣ ಹಿಂದು ಸಂಪ್ರದಾಯದ ಪ್ರಕಾರ ಪುರಾತನ ಕಾಲದಿಂದಲೂ ಈ ಸಂಪ್ರದಾಯ ಚಾಲ್ತಿಯಲ್ಲಿರುತ್ತದೆ ಎಂದು ರೈತ ಮಹಿಳೆಯರು ಶ್ಯಾವಿಗೆ ಹೊಸೆಯುತ್ತಾ ತಮ್ಮ ನಂಬಿಕೆಯನ್ನು ತಿಳಿಸಿದರು.
ಹಳ್ಳಿಗಳಲ್ಲಿ ಮನೆ ಮನೆ ಮುಂದೆ ಅಟ್ಟಿಣಿಗೆಯನ್ನು ಹಾಕಿಕೊಂಡು ಗೆಳತಿಯರು ಸಂಬಂಧಿಕರು ಕೂಡಿ ಶ್ಯಾವಿಗೆ ಹೊಸೆಯುವುದು ವಾರಗಟ್ಟಲೇ ಹಳ್ಳಿಗಳಲ್ಲಿ ಕಂಡುಬರುತ್ತಿತ್ತು. ಆದರೆ ಬದಲಾದ ಆಧುನಿಕ ದಿನದಲ್ಲಿ ಶಾವಿಗೆ ಹೊಸೆಯುವ ಮಹಿಳೆಯರು ಕಣ್ಮರೆಯಾಗುತಿದ್ದಾರೆ. ಕಾರಣ ಶ್ಯಾವಿಗೆ ಹೊಸೆಯುವ ಯಂತ್ರವು ಗ್ರಾಮಗಳನ್ನು ಪ್ರವೇಶಿಸಿದ ಮೇಲೆ ಶ್ಯಾವಿಗೆ ಹೊಸೆಯುವುದನ್ನೆ ಕೈಬಿಟ್ಟು ಯಂತ್ರದ ಮುಖಾಂತರ ಶ್ಯಾವಿಗೆಯನ್ನು ಹಾಕಿಸಿಕೊಂಡು ಬರುತ್ತಾರೆ. ಈಗಾಗಿ ಗ್ರಾಮೀಣ ಸಂಪ್ರದಾಯವೂಂದು ಕಣ್ಮರೆಯಾಗುತ್ತಿದೆ.
ಮ್ಯಾಡರಡೊಕ್ಕಿ ಗ್ರಾಮದ ರೈತಮಹಿಳೆ ಅಟ್ಟಣಕಿ ಹಾಕಿಕೊಂಡು ಮೂರು ನಾಲ್ಕು ಜನ ಶ್ಯಾವಿಗೆ ಹೊಸೆಯುವುದನ್ನು ಕಂಡ ನಮಗೆ ಇಂದಿನ ದಿನಗಳಲ್ಲಿ ಇನ್ನೂ ಹಳ್ಳಿಗಳಲ್ಲಿ ಶ್ಯಾವಿಗೆ ಹೊಸೆಯುವ ನಾರಿಯರು ಇರುತ್ತಾರೆ ಎಂಬುವುದಕ್ಕೆ ಇವರೇ ಉದಾಹರಣೆ.
ಶ್ಯಾವಿಗೆ ಹೊಸೆಯುವ ನಾರಿಯನ್ನು ಇದರ ಬಗ್ಗೆ ವಿಚಾರಿಸಿದಾಗ “ಏನು ಮಾಡ್ಬೇಕ್ರಿ ಈಗಿನ ಹೆಣ್ಮಕ್ಕಳಿಗೆ ಶ್ಯಾವಿಗೆ ಹೊಸಿಯಾಕ ಬರಂಗಿಲ್ರಿ ಬಂದ್ರೂ ಅವರು ಇಂತ ತ್ರಾಸ್ ಎದಕ ಬೇಕು ಅಂತ ಪಟ್ಟಣದಾಗ ರೊಕ್ ಕೊಟ್ರ ಮಷೀನೊಳಗ ಹಾಕಿಕೊಡತಾರಂತ್ರಿ. ಆದರ, ಕೈ ಶ್ಯಾವಿಗೆ ರುಚಿನ ಬೇರೆ ಮಷೀನಿನ ಶ್ಯಾವಿಗೆಯ ರುಚೀನಾ ಬೇರೆ ಇರುತ್ತೈಂತ್ರಿ ನಮಗ ಕೈಲಿಂದ ಮಾಡಿದ್ದ, ರುಚಿ ಅನುಸೈತ್ರಿ ಹಾಗಾಗಿ ನಾವು ಶ್ಯಾವಿಗೆ ಹೊಸದೇ ಶ್ಯಾವಿಗೆ ಮಾಡಿಕೊಂಡು ಉಣ್ಣ ಸಂಪ್ರದಾಯ ನಮ್ಮದಾಗೈತ್ರಿ” ಎಂದು ನಾರಿಯರು ನುಡಿಯುತ್ತಾರೆ.
ಈ ಮೂಲಕ ಶ್ಯಾವಿಗೆ ಹೊಸೆಯುವದು ಇನ್ನೂ ಪೂರ್ತಿ ಕಣರೆಯಾಗದೆ ಕೆಲವು ಹಳ್ಳಿಗಳಲ್ಲಿ ಜೀವಂತವಾಗಿರುವುದು ಕಂಡು ಬರುತ್ತಿದೆ. ಆಧುನಿಕ ಪ್ರಪಂಚದ ಸೋಗಲಾಡಿ ಬದುಕಿನ ನಡವೆ ಸಂಪ್ರದಾಯ ಮರೆಯದೆ, ಅದನ್ನು ಉಳಿಸಿ ಬೆಳೆಸುತ್ತಿರುವ ಈ ಹಳ್ಳಿ ಮಹಿಳೆಯರ ಕಾರ್ಯ ಶ್ಲಾಘನೀಯವಾಗಿದೆ.
ಯಂತ್ರಗಳು ಬಂದ ಮೇಲೆ ಶ್ಯಾವಿಗೆ ಹೊಸೆಯುವ ಸಂಪ್ರದಾಯ ಕಮ್ಮಿಯಾಗಿದ್ದಾರೆ. ಕೇವಲ ಮದುವೆ ಸಮಾರಂಭಗಳಲ್ಲಿ ಶ್ಯಾವಿಗೆ ಮಣಿಗೆ ಪೂಜೆ ಮಾಡಿ ಶ್ಯಾವಿಗೆ ಹೊಸೆಯುವುದು ಕೆಲವು ಮದುವೆ ಮನೆಗಳಲ್ಲಿ ಕಂಡುಬರುತ್ತದೆ.
-ವರದಿ: ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ.