Advertisement

ದೋಟಿಹಾಳ: ಫೋಟೋಶೂಟ್‌ ಸ್ಪಾಟ್‌-ರಸ್ತೆ ಬದಿಯಲ್ಲಿ ಗುಲ್‌ ಮೊಹರ್‌ ಸೊಬಗು

05:55 PM Jun 10, 2023 | Team Udayavani |

ದೋಟಿಹಾಳ: ಬೇಸಿಗೆ ಬಿಸಿಲ ಝಳದ ದಿನಗಳಲ್ಲೂ ಗುಲ್‌ ಮೊಹರ್‌ ಗಿಡಗಳ ಹೂವಿನ ಅಂದ ಮಾತ್ರ ಕಮರಿಲ್ಲ. ದಾರಿಹೋಕರು, ವಾಹನ ಸವಾರರನ್ನು ಹೂಗಳ ಸೊಬಗು ಕೈ ಬೀಸಿ ಕರೆಯುವಂತಿದ್ದು, ಹೂಗಳು ಉದುರಿ ಬಿದ್ದರಂತೂ ರಸ್ತೆಯುದ್ದಕ್ಕೂ ಹೂವಿನ ಹಾಸಿಗೆಯೇ ಸರಿ.

Advertisement

ಇದು ದೋಟಿಹಾಳ ಸಮೀಪದ ಅಡವಿಭಾವಿ, ಕಡೆಕೊಪ್ಪ, ಚಳಗೇರಿ, ತೋಪಲಕಟ್ಟಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯ ಎರಡೂ ಬದಿಯ ಅಲ್ಲಲ್ಲಿ ಗುಲ್‌ ಮೊಹರ್‌ ಗಿಡಗಳಲ್ಲಿ ಕೆಂಪು ಹೂಗಳನ್ನು ಬಿಟ್ಟಿದ್ದು ಇವುಗಳನ್ನು ನೋಡಿದ ಜನರ ಮುಖದಲ್ಲಿ ಮಂದಹಾಸ ಮೂಡಿಸುತ್ತಿವೆ.

ಕಣ್ಮನ ಸೂರೆ: ಬೇಸಿಗೆ ಬಿಸಿಲ ತಾಪದಿಂದ ಉರಿಯುವ ಕಣ್ಣುಗಳನ್ನು ಬಿಡಲಾರದೇ ಕೆಲಕಾಲ ಮನಸ್ಸಿನ ಆಹ್ಲಾದಕ್ಕಾಗಿ ಕಣ್ಣು ಮುಚ್ಚುವ ಜನರನ್ನು ಮತ್ತೆ ಕಣ್ತೆರೆಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಈ ಗುಲ್‌ ಮೊಹರ್‌ ಹೂಗಳು ಅರಳಿ ನಿಂತಿದ್ದು, ಮನಸ್ಸು-ಕಂಗಳನ್ನು ಸೂರೆಗೊಳಿಸುತ್ತಿವೆ. ರಸ್ತೆಗೆ ಮೆರಗು: ಬಯಲು ನಾಡಿನ ಬಿಸಿಲು ಪ್ರದೇಶದ ಗ್ರಾಮೀಣ ಭಾಗದ ರಸ್ತೆಯ ಬದಿಯಲ್ಲಿ ಈ ಗಿಡಗಳಲ್ಲಿ ಹೂ ಬಿಟ್ಟು ಪ್ರಕೃತಿಯ ಸೌಂದರ್ಯ ಹೆಚ್ಚಿಸುವ ಜತೆಗೆ ರಸ್ತೆಗೆ ಮೆರಗು ತಂದಿದೆ. ಗುಲ್‌ ಮೊಹರ್‌
ಗಿಡಗಳು ನಾಲ್ಕಾರು ವರ್ಷಗಳಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಲ್ಲುತ್ತವೆ.

ಫೋಟೋ ಶೂಟ್‌
ಕುಷ್ಟಗಿ ತಾಲೂಕಿನ ಗ್ರಾಮೀಣ ಪ್ರದೇಶದ ಕೆಲವು ಯುವಕರು ತಮ್ಮ ಮೊಬೈಲ್‌ ಮತ್ತು ಕ್ಯಾಮೆರಾಗಳಲ್ಲಿ ಈ ಗಿಡದ ಕೆಳಗೆ-ಮೇಲೆ
ಹತ್ತಿ ಫೋಟೋ ಶೂಟ್‌ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಗುಲ್‌ ಮೊಹರ ಗಿಡಗಳು ಫೋಟೋ ಶೂಟಿಗೆ ಹೇಳಿ ಮಾಡಿಸಿದಂತಿವೆ ಎಂದು ಫೋಟೋ ಪ್ರಿಯರು ಹೇಳುತ್ತಾರೆ.

ಶುಭ ಸಮಾರಂಭಕ್ಕೂ ಬೇಕು
ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕಲ್ಯಾಣ ಮಂಟಪ ಹಾಗೂ ಮನೆ ಆವರಣದಲ್ಲಿ ನಿರ್ಮಿಸಲಾಗುವ ಚಪ್ಪರವನ್ನು ಈ ಮರದ ಹೂಗಳನ್ನು ಬಳಸಿ ಸಿಂಗರಿಸುವುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಖರ್ಚಿಲ್ಲದೇ, ದಾರಿ ಮಧ್ಯೆ ಅರಳಿ ನಿಂತ ಸುಂದರ ಹೂವನ್ನು ಶುಭ- ಸಮಾರಂಭಗಳಲ್ಲಿ ಬಳಸುವುದು ಕಂಡುಬರುತ್ತದೆ.

Advertisement

ನಮ್ಮ ಮನೆದೈವ ಚಳಗೇರಿ ವೀರಣ್ಣ
ದೇವರಿಗೆ ಈ ಮಾರ್ಗವಾಗಿ ಸಂಚರಿಸುತ್ತೇವೆ. ಈ ಗುಲ್‌ ಮೊಹರ್‌ ಗಿಡಗಳಲ್ಲಿ ಬಿಡುವ ಹೂಗಳು ದಾರಿಹೋಕರ ಮನ ಸೆಳೆಯುತ್ತಿವೆ. ಗ್ರಾಮೀಣ ಯುವಕರು ಈ ರಸ್ತೆಯಲ್ಲಿ ಫೋಟೋ ಶೂಟ್‌ಗೆ ಬರುತ್ತಿರುವುದು ಕಂಡು ಬರುತ್ತಿರುವುದು ಈ ಹೂಗಳ ಆಕರ್ಷಣೆಗೆ ಸಾಕ್ಷಿ.
*ಪುಲಕೇಶ ಕೊಳ್ಳಿ, ವಾಹನ ಸವಾರ

ಕೇಸರಿ ಬಣ್ಣಕ್ಕೆ
ಗುಲ್‌ ಮೊಹರ ಗಿಡಗಳು ಮೊದಲ ಬಾರಿ ಹೂ ಬಿಟ್ಟಾಗ ದಟ್ಟ ಕೆಂಪು ಬಣ್ಣದಿಂದ ಕೂಡಿರುತ್ತದೆ. ಮೂರ್‍ನಾಲ್ಕು ವರ್ಷ ಇದೇ ರೀತಿ ಕೆಂಪು ಬಣ್ಣದ ಹೂಗಳ ನಂತರ ಕ್ರಮೇಣ ಕೇಸರಿ ಬಣ್ಣದ ಹೂಗಳಾಗಿ ಪರಿವರ್ತಿಸುತ್ತವೆ.

*ಮಲ್ಲಿಕಾರ್ಜುನ ಮೆದಕೇರಿ

Advertisement

Udayavani is now on Telegram. Click here to join our channel and stay updated with the latest news.

Next