Advertisement

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

06:03 PM Nov 26, 2024 | Team Udayavani |

ಉದಯವಾಣಿ ಸಮಾಚಾರ
ದೋಟಿಹಾಳ: ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯೋ ಇಲ್ಲವೋ ಎಂದು ಮಾತ್ರ ಗಮನ ಹರಿಸುವುದಿಲ್ಲ. ಇದಕೊಂದು ತಾಜಾ ಉದಾಹರಣೆ ಇಲ್ಲಿದೆ. ಅಂಗನವಾಡಿ ಕಟ್ಟಡ ನಿರ್ಮಾಣಗೊಂಡು ಎರಡ್ಮೂರು ವರ್ಷಗಳೇ ಕಳೆದಿದೆ. ಆದರೆ ಇದುವರೆಗೂ ಉದ್ಘಾಟನೆಯಾಗಿಲ್ಲ.

Advertisement

ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ಕಿಡದೂರು ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಗೊಂಡು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಬೇಕಾಗಿದ್ದ ಕಟ್ಟಡ ಅಧಿಕಾರಿಗಳು-ಗುತ್ತಿಗೆದಾರರ ಸಮನ್ವಯ ಕೊರತೆಯಿಂದ ಅನಾಥವಾಗಿದೆ. ಸದ್ಯ ಕಟ್ಟಡದ ಸುತ್ತಮುತ್ತಲು ಜಾಲಿ ಮುಳ್ಳು ಕಂಠಿ ಬೆಳೆದು ನಿಂತಿದೆ. ಸರಕಾರದ ಲಕ್ಷಾಂತರ ರೂಪಾಯಿ ಯೋಜನೆ ಹಾದಿ ತಪ್ಪುತ್ತಿದೆ.

ಸದ್ಯ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಹಳೇ ಕಟ್ಟಡ ಚಿಕ್ಕದಿದ್ದುು ಮಕ್ಕಳು ಕುಳಿತುಕೊಳ್ಳಲು ಸಮಸ್ಯೆಯಾಗುತ್ತಿದೆ. ಕೇಂದ್ರಕ್ಕೆ ಆಗಮಿಸುವ ಗರ್ಭಿಣಿ-ಬಾಣಂತಿಯರಿಗೆ ತೊಂದರೆಯಾಗುತ್ತಿದೆ. ಕಿಟಕಿಗಳು ಕಿತ್ತುಹೋಗಿವೆ. ಬಾಗಿಲು ದುರಸ್ತಿಗೊಳಿಸಬೇಕಿದೆ. ಮಳೆ ಬಂದರೆ ಕಟ್ಟಡ ತೊಟ್ಟಿಕ್ಕುತ್ತಿದೆ. ವಿಷ ಜಂತುಗಳ ಕಾಟ ಹೆಚ್ಚಾಗಿ ಕಾಡುತ್ತಿದೆ. ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಮಾದೇವಿ ಹೇಳಿದರು.

2021-22ನೇ ಸಾಲಿನ ನರೇಗಾ ಯೋಜನೆಯಲ್ಲಿ 14 ಲಕ್ಷ ರೂ. ಅನುದಾನದಲ್ಲಿ ಅಂಗನವಾಡಿ ಕಟ್ಟಡ, ಕಾಮನ್‌ ವರ್ಕ್‌ ಶೆಡ್‌ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅಂಗನವಾಡಿ ಕಟ್ಟಡ ಮಾತ್ರ ನಿರ್ಮಾಣ ಮಾಡಿದ ಕಾರಣ 6 ಲಕ್ಷ ರೂ. ಮಾತ್ರ ನೀಡಿದ್ದಾರೆ. ಉಳಿದ ಹಣ ನೀಡಿಲ್ಲ. ಹೀಗಾಗಿ ಗುತ್ತಿಗೆದಾರ ಪೂರ್ಣ ಅನುದಾನ ನೀಡಿದ ಮೇಲೆ ಕಟ್ಟಡ ಉದ್ಘಾಟನೆ ಎಂದು ಹೇಳುತ್ತಿದಾನೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಪಿಡಿಒ ಶಂಕ್ರಪ್ಪ ಹೇಳಿದರು.

ಇನ್ನಾದರೂ ಇದರ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಸರ್ಕಾರದ ಯೋಜನೆ ಸದುಪಯೋಗ ಆಗುವಂತೆ ನೋಡಿಕೊಳ್ಳುತ್ತಾರೋ ಇಲ್ಲವೋ ಎಂಬುವುದು ಕಾದುನೋಡಬೇಕು.

Advertisement

2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಅಂಗನವಾಡಿ ಕಟ್ಟಡಕ್ಕೆ 8 ಲಕ್ಷ ರೂ. ನೀಡಲಾಗಿತ್ತು. ಒಂದು ವೇಳೆ 14 ಲಕ್ಷ ರೂ.ಗೆ ಅಂಗನವಾಡಿ ಕಟ್ಟಡ ಕಾಮನ್‌ ವರ್ಕ್‌ ಶೆಡ್‌ ನಿರ್ಮಾಣ ಅನುಮೋದನೆ ನೀಡಿದ್ದರೆ ಕಿಲ್ಲಾರಹಟ್ಟಿ ಗ್ರಾಪಂ ಅಂದಿನ ಕ್ರಿಯಾಯೋಜನೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಪ್ರಕಾಶ, ಜಿಪಂ ಯೋಜನಾ ನಿರ್ದೇಶಕ, ಕೊಪ್ಪಳ

ಕಿಡದೂರು ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ. ಅನುದಾನ ನೀಡದ ಕಾರಣ
ಗುತ್ತಿಗೆದಾರರು ಕಟ್ಟಡವನ್ನು ಇನ್ನೂ ಹಸ್ತಾಂತರ ಮಾಡಿಲ್ಲ. ಹೀಗಾಗಿ ಹೊಸ ಕಟ್ಟಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗದೆ ಹಾಳುಗುತ್ತಿದೆ.
*ಯಲ್ಲಮ್ಮ ಹಂಡಿ, ಸಿಡಿಪಿಒ, ಕುಷ್ಟಗಿ

ಕಿಡದೂರು ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಗೊಂಡು 2-3 ವರ್ಷ ಕಳೆದಿದ್ದೆ. ಇದರ ಬಗ್ಗೆ ಈಗಾಗಲೇ
ಚರ್ಚೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
*ಪಂಪಾಪತಿ ಹಿರೇಮಠ,
ತಾಪಂ ಇಒ, ಕುಷ್ಟಗಿ

*ಮಲ್ಲಿಕಾರ್ಜುನ ಮದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next