Advertisement

BJP-JDS ದೋಸ್ತಿಗಳ ಹಗರಣ ಮೈಸೂರಲ್ಲಿ ಬಿಚ್ಚಿಡುವೆ: ಸಿಎಂ ಮತ್ತೆ ಗುಡುಗು

01:17 AM Aug 08, 2024 | Team Udayavani |

ಮೈಸೂರು: ಮೈಸೂರಿನಲ್ಲಿ ಆ. 9ರಂದು ನಡೆಯುವ ಜನಾಂದೋಲನ ಸಮಾವೇಶದಲ್ಲಿ ಬಿಜೆಪಿ-ಜೆಡಿಎಸ್‌ ಸರಕಾರದ ಅವ ಧಿಯ  ಎಲ್ಲ ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ಇದೇ ವೇಳೆ ಅವರು ಮೈಸೂರಿನಲ್ಲಿ ನಿಗದಿ ಯಾಗಿದ್ದ ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿ ಬೆಂಗಳೂರಿಗೆ ಮರಳಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌, ಬಿಜೆಪಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ಮಾಡಿ ರುವ ಹಗರಣಗಳನ್ನೆಲ್ಲ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ. ಅವೆಲ್ಲವನ್ನೂ ಹೇಳಲು ಪತ್ರಿಕಾಗೋಷ್ಠಿ ಕರೆದಿದ್ದೆ . ಆದರೆ ಎಲ್ಲವನ್ನೂ ಸಮಾವೇಶದಲ್ಲೇ ಹೇಳಬೇಕೆಂಬ ಕಾರಣಕ್ಕೆ ರದ್ದು ಮಾಡಿದೆ. ಬಿಜೆಪಿ ಸರಕಾರದ ಹಗರಣದ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದರು.

ನಾನು ಪ್ರಭಾವ ಬೀರಿಲ್ಲ
ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ. 2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭ ನನ್ನ ಪತ್ನಿ, ಮುಡಾ ಅಕ್ರಮವಾಗಿ ನಮ್ಮ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಳು. ಆಗ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸರಕಾರ ಅಸ್ಥಿರಕ್ಕೆ ಯತ್ನ
ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ 1 ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರ ಕೆಲಸ ಮಾಡುತ್ತಿರುವುದನ್ನು ಸಹಿಸಲು ಬಿಜೆಪಿ ಮತ್ತು ಜೆಡಿಎಸ್‌ನವ ರಿಗೆ ಸಾಧ್ಯವಾಗುತ್ತಿಲ್ಲ.

ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ. ಆಪರೇಶನ್‌ ಕಮಲ ನಡೆಸಲು ಪ್ರಯತ್ನಿಸಿದರೂ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಾಗದ ಕಾರಣ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದರು. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ ಬಳಿಕ ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು. ಆದರೆ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದರು.

ಯಾವುದೇ ತಪ್ಪು ಮಾಡಿಲ್ಲ
ಮುಡಾ ಹಗರಣ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಪ್ರಭಾವ ಬಳಸಿಲ್ಲ. ಮುಡಾದಿಂದ ಬದಲಿ ಭೂಮಿ ಕೊಡುವುದು ಬೇಡ ಎಂದು ಹೇಳಿದ್ದೆ . ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ . ಸಿಎಂ ಆಗಿರುವ ತನಕ ಬದಲಿ ಭೂಮಿ ಕೊಡಬೇಡಿ ಎಂದು ನಾನು ಹೇಳಿದ್ದೆ . ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆ ಎಂದರು.

ಬದಲಿ ಸೈಟ್‌ಗೆ ಮತ್ತೆ ನನ್ನ ಪತ್ನಿ 2021ರಲ್ಲಿ ಅರ್ಜಿ ಹಾಕಿದಾಗ ಬಿಜೆಪಿ ಸರಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ. ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ ಎಂದ ಅವರು, ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಚೆಕ್‌ ಮೂಲಕ ಹಣ ಪಡೆದಿದ್ದರು. ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ, ಪ್ರಭಾವ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು.

ದಾಖಲೆ ಸಲ್ಲಿಸಿದ್ದೇನೆ
ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲರು ನೀಡಿರುವ ನೋಟಿಸ್‌ಗೆ ಸಮರ್ಪಕ ದಾಖಲೆ ಸಲ್ಲಿಸಿದ್ದೇನೆ. ಆದರೆ ಇದು ರಾಜ್ಯಪಾಲರ ನೋಟಿಸ್‌ಗೆ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯವನ್ನು ಒಳಗೊಂಡಿಲ್ಲ. ಪ್ರತ್ಯೇಕವಾಗಿ ವೈಯಕ್ತಿಕವಾಗಿ ದಾಖಲೆಗಳ ಸಮೇತ ವಿವರ ನೀಡಿದ್ದೇನೆ. ರಾಜ್ಯಪಾಲರು ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳು ನಿರಾಧಾರ ಎಂದರು.

ಮುಡಾ: ಸಿಎಂ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಅಶೋಕ್‌
ಮಂಡ್ಯ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ವಿಪಕ್ಷದ ನಾಯಕ ಆರ್‌. ಅಶೋಕ್‌ ದಾಖಲೆಗಳನ್ನು ಬಿಡುಗಡೆ ಮಾಡಿದರು. ಬುಧವಾರ ಮಂಡ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡ ಗೊತ್ತಾಗುತ್ತದೆ. ಕೂಡಲೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಸಿದ್ದು ಅವಧಿಯಲ್ಲಿ ದಲಿತ ಅಧಿಕಾರಿಗಳ ಆತ್ಮಹತ್ಯೆ ಹೆಚ್ಚಳ: ವಿಜಯೇಂದ್ರ
ಮಂಡ್ಯ: ಅಹಿಂದ ಹೆಸರು ಹೇಳಿ ರಾಜ್ಯದಲ್ಲಿ ಅ ಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಹಗರಣಗಳ ಜತೆಗೆ ದಲಿತ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು. 5ನೇ ದಿನವಾದ ಬುಧವಾರ ಪಾದಯಾತ್ರೆಯು ಮಂಡ್ಯಕ್ಕೆ ಆಗಮಿಸಿದಾಗ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣ, ಮೈಸೂರಿನ ಸಾವಿರಾರು ಕೋಟಿಯ ಮುಡಾ ನಿವೇಶನ ಹಗರಣ ನಡೆದಿದ್ದು, ಇಂಥ ಭ್ರಷ್ಟ, ದುಷ್ಟ ಕಾಂಗ್ರೆಸ್‌ ಸರಕಾರ ಹಾಗೂ ಭ್ರಷ್ಟ ಮುಖ್ಯಮಂತ್ರಿಗಳಿಂದ ನಾಡಿನ ಜನತೆಗೆ ನ್ಯಾಯ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಎಸ್‌ವೈ ನಿವೃತ್ತರಾಗಲಿ
82ರ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ, ನ್ಯಾಯಾಲಯದ ದಯೆಯಿಂದ ಜೈಲು ಪಾಲಾಗದೆ ಬಚಾವಾಗಿದ್ದಾರೆ. ಇಂತಹ ಪ್ರಕರಣ ದಲ್ಲಿ ದೋಷಾ ರೋಪ ಪಟ್ಟಿ ಹಾಕಿಸಿ ಕೊಂಡಿರುವ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ತಪ್ಪು ಮುಚ್ಚಿಕೊಳ್ಳಲು ಜನಾಂದೋಲನ ವಿಪಕ್ಷದವರಾದ ನಾವು ಆಡಳಿತ ಪಕ್ಷವನ್ನು ಪ್ರಶ್ನಿಸಬೇಕು. ಆದರೆ ಆಡಳಿತ ನಡೆಸುತ್ತಿರುವ ನೀವೇನಮ್ಮನ್ನು ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವ ದಲ್ಲಿ ತಪ್ಪು ಇತಿಹಾಸಕ್ಕೆ ನಾಂದಿ ಹಾಡುತ್ತಿದ್ದೀರಿ. ನಿಮ್ಮ ತಪ್ಪು ಮುಚ್ಚಿ ಕೊಳ್ಳಲು ಜನಾಂದೋಲನ ಮಾಡುತ್ತಿದ್ದೀರಾ?
-ಎಚ್‌.ಡಿ. ಕುಮಾರಸ್ವಾಮಿ,
ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next