Advertisement
ಹೌದು ಈ ರೀತಿಯ ಹೊಸ ಸ್ನ್ಯಾಕ್ಸ್ ಅನ್ನು ಈಗಿನ ಮಾಡ ರ್ನ್ ಅಮ್ಮಂದಿರು ಪ್ರಯೋಗ ಮಾಡಿದ್ದಾರೆ. ಬೆಳಗ್ಗಿನ ಬ್ರೇಕ್ ಫಾಸ್ಟ್‌ಗೆ ಮಾಡಿದ ನೀರು ದೋಸೆ, ಉದ್ದಿನ ದೋಸೆ, ಕೆಂಪು (ಸಾಂಬರು) ದೋಸೆ, ಅಕ್ಕಿ ದೋಸೆ ಬಾಕಿಯಾದರೆ ಮತ್ಯಾರು ಅದರ ಗೋಜಿಗೆ ಹೋಗುವವರಿಲ್ಲ.
ಅದಕ್ಕೆ ಉಳಿದ ದೋಸೆಯನ್ನು ಸ್ನ್ಯಾಕ್ಸ್ ರೂಪದಲ್ಲಿ ಒಗ್ಗರೆ ಹಾಕಿ ಮತ್ತಷ್ಟು ಅದರ ರುಚಿ ಹೆಚ್ಚಿಸಬಹುದು. ಬೆಳಗ್ಗೆ ಉಳಿದ ಅಕ್ಕಿ ದೋಸೆಯನ್ನು ಸಣ್ಣ ಸಣ್ಣದಾಗಿ ತುಂಡರಿಸಿಕೊಂಡು ಇಟ್ಟುಕೊಳ್ಳಬೇಕು. ಅನಂತರ ಒಂದು ಬಾಣಲೆಯನ್ನು ಇಟ್ಟು ಬೆಂಕಿ ಹಚ್ಚಿ ನಾಲ್ಕು ಚಮಚ ಎಣ್ಣೆ, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಪುಟಾಣಿ, ಒಣ ಮೆಣಸು ಹಾಕಿ ಅನಂತರ ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಹಾಕಿ, ಎರಡು ಅಥವಾ ಮೂರು ಹಸಿ ಮೆಣಸನ್ನು ತುಂಡರಿಸಿ ಅದನ್ನು ಈ ಒಗ್ಗರಣೆಗೆ ಹಾಕಿ. ಬಳಿಕ ಹೆಚ್ಚಿಕೊಂಡ 2 ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ಇದರ ಪರಿಮಳ ಹೆಚ್ಚುತ್ತದೆ. ಹುಳಿ ಬೇಕಿದ್ದಲ್ಲಿ ಟೊಮೇಟೊ ಸಣ್ಣದಾಗಿ ಹೆಚ್ಚಿಕೊಂಡು ಅದನ್ನು ಈ ಒಗ್ಗರಣೆಗೆ ಹಾಕಿಕೊಳ್ಳಬಹುದು. ಅಥವಾ ಹುಣಸೆ ಹುಳಿಯನ್ನು ಇದಕ್ಕೆ ಸೇರಿಸಬಹುದು. ಅವರವರ ಇಷ್ಟಕ್ಕೆ ತಕ್ಕಂತೆ ಖಾರ, ಹುಳಿ, ಸಿಹಿ ಮಾಡಿಕೊಳ್ಳಬಹುದು. ಬಳಿಕ ಈ ಬಾಣಲೆಗೆ ದೋಸೆ ತುಂಡನ್ನು ಹಾಕಿ ಚೆನ್ನಾಗಿ ತಿರುವಿ. ಈ ಒಗ್ಗರಣೆಯ ಘಮ ಘಮ ಪರಿಮಳದ ಜತೆಗೆ ಬಿಸಿ ಬಿಸಿ ದೋಸೆ ಒಗ್ಗರಣೆ ಸವಿಯಲು ಬಲು ರುಚಿ.