Advertisement

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

11:05 AM Jul 08, 2024 | Team Udayavani |

ಬೆಂಗಳೂರು: “ನಂದಿನಿ ಬ್ರ್ಯಾಂಡ್‌’ ನಡಿ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಕೆಎಂಎಫ್ ಶೀಘ್ರದಲ್ಲೇ ನಂದಿನಿ ದೋಸೆ ಹಿಟ್ಟು ಬಿಡುಗಡೆ ಮಾಡಲಿದೆ. ಪ್ರೋಟಿನ್‌ ಅಂಶಗಳನ್ನು ಒಳಗೊಂಡಂತಹ ನಂದಿನಿ ದೋಸೆ ಹಿಟ್ಟಿನ ಪ್ರಯೋಗ ನಡೆದಿದ್ದು, ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ. ಮಾರುಕಟ್ಟೆಗೆ ಪರಿಚಯಿಸುವ ಕಾರ್ಯ ಕೂಡ ವೇಗವಾಗಿ ನಡೆದಿವೆ.

Advertisement

ಸಾಮಾನ್ಯವಾಗಿ ದೋಸೆ ಹಿಟ್ಟು ತಯಾರಿಕೆಯಲ್ಲಿ ಅಕ್ಕಿ-ಉದ್ದಿನ ಬೆಳೆಯನ್ನು ಹಾಕಿ ಸಿದ್ಧಪಡಿಸಲಾಗುತ್ತದೆ. ಆದರೆ, ನಂದಿನಿ ಬ್ರ್ಯಾಂಡ್‌ನ‌ಲ್ಲಿ ಹಾಲಿನ ಉಪ ಉತ್ಪನ್ನ “ವೇ ಪೌಡರ್‌’ ಸೇರಿದಂತೆ ಮತ್ತಿತತರ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತದೆ. ಈಗಾಗಲೇ ಖಾಸಗಿ ಕಂಪನಿಗಳು ಕೂಡ ಭಿನ್ನ ರೀತಿಯ ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿವೆ. ಆದರೆ, ಅದಕ್ಕಿಂತಲೂ ನಂದಿ ಬ್ರ್ಯಾಂಡ್‌ ದೋಸೆ ಹಿಟ್ಟು ಭಿನ್ನವಾಗಿರಲಿದೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಈಗಾಗಲೇ ನಂದಿನಿ ಬ್ರ್ಯಾಂಡ್‌ನ‌ಡಿ ನಂದಿನಿ ಹಾಲು, ತುಪ್ಪ, ಬೆಣ್ಣೆ, ಮೊಸರು, ಚೀಸ್‌, ಮಜ್ಜಿಗೆ, ಬ್ರೆಡ್‌, ಬನ್‌ ಜತೆಗೆ ಸಿಹಿ ತಿನಿಸುಗಳು, ಕುರುಕಲು ತಿಂಡಿಗಳು, ಬೇಕರಿ ಉತ್ಪನ್ನಗಳು, ಐಸ್‌ಕ್ರೀಂ ಅನ್ನೂ ಕೆಎಂಎಫ್‌ ತಯಾರಿಸಿ ಮಾರಾಟ ಮಾಡುತ್ತಿದೆ. ಇದೀಗ ದೋಸೆ ಹಿಟ್ಟಿನ ಉತ್ಪನ್ನವನ್ನು ಗ್ರಾಹಕರಿಗೆ ಪರಿಚಯಿಸುವ ನಿಟ್ಟಿ ನಲ್ಲಿ ಹೆಜ್ಜೆಯಿರಿಸಿದೆ ಎಂದು ಕೆಎಂಎಫ್ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಸಕಾರಾತ್ಮಕ ಪ್ರತಿ ಕ್ರಿಯೆ: ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ನ‌ಡಿ ಕೇವಲ ಹಾಲು ಹಾಗೂ ಹಾಲಿನ ಉತ್ಪನ್ನಗಳ ಉತ್ಪಾದನೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ದೋಸೆ ಹಿಟ್ಟು ಉತ್ಪಾ ದಿಸಲು ನಿರ್ಧರಿಸಿದೆ. ಮುಖ್ಯವಾಗಿ ಬೆಂಗಳೂರು ಮಹಾನಗರದ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ದೋಸೆ ಹಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದೆ.

ಈಗಾಗಲೇ ಟೆಂಡರ್‌ ಕೂಡ ಪೂರ್ಣ ಗೊಂಡಿದೆ. “ರೆಡಿ ಟು ಕುಕ್‌’ ಪರಿಕಲ್ಪನೆಯಡಿ ಜನರು ಸುಲಭ ವಾಗಿ ಮನೆಯಲ್ಲೇ ರುಚಿಕರ ದೋಸೆ ಸವಿಯುವ ಅವಕಾಶ ಕಲ್ಪಿಸಲಾಗುತ್ತದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಹಿಟ್ಟಿನಲ್ಲಿ ಹಾಲಿನ ಉಪ ಉತ್ಪನ್ನ ಬಳಕೆ :

ನಂದಿನಿ ಬ್ರ್ಯಾಂಡ್‌ ಹಿಟ್ಟಿನಲ್ಲಿ ಪ್ರೋಟಿನ್‌ ಅಂಶಗಳು ಅಧಿಕವಿರಲಿದೆ. ಹಾಲಿನ ಉಪ ಉತ್ಪನ್ನ “ವೇ ಪೌಡರ್‌’ ಮತ್ತು ಗೋಧಿ ಬೆರೆಸಿ ತಯಾರಿಸಲಾಗುತ್ತದೆ.”ರೆಡಿ ಟು ಕುಕ್‌’ ಮಾದರಿಯಲ್ಲಿ ಗ್ರಾಹಕರಿಗೆ ನೇರವಾಗಿ 1 ಅಥವಾ 2 ಕೇಜಿ ಪಾಕೇಟ್‌ನಲ್ಲಿ ಪೂರೈಕೆ ಮಾಡಲಾಗುತ್ತದೆ. ಇತರೆ ದೋಸೆ ಹಿಟ್ಟಿಗಿಂತ ಹೆಚ್ಚು ಗುಣಮಟ್ಟದಿಂದ ಕೂಡಿರಲಿದೆ. ಇದರ ಬೆಲೆ ಕೂಡ ಕೈಗೆಟಕುವಂತೆ ಇರಲಿದೆ. ಹಿಟ್ಟಿನ ಪ್ಯಾಕಿಂಗ್‌ ಸೇರಿದಂತೆ ಮತ್ತತಿರರ ಪ್ರಯೋಗ ಕೂಡ ಪೂರ್ಣಗೊಂಡಿದೆ. ಶೀಘ್ರದಲ್ಲೇ ಗ್ರಾಹಕರ ಕೈಗೆ ತಲುಪಿಸಲಾಗುತ್ತದೆ ಎಂದು ಕೆಎಂಎಫ್ನ ನಿರ್ದೇಶಕ ಎಂ.ಕೆ.ಜಗದೀಶ್‌ ಮಾಹಿತಿ ನೀಡಿದ್ದಾರೆ.

ಕೆಎಂಎಫ್ ಈಗಾಗಲೇ 150ಕ್ಕೂ ಅಧಿಕ ನಂದಿನಿ ಬ್ರ್ಯಾಂಡ್‌ನ‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಪೂರೈಕೆ ಮಾಡು ತ್ತಿದೆ. ಇದೀಗ ದೋಸೆ ಹಿಟ್ಟು ಮಾರಾಟಕ್ಕೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅತಿ ಶೀಘ್ರದಲ್ಲೇ ಗ್ರಾಹಕರ ಕೈಗೆ ನಂದಿನಿ ಬ್ರ್ಯಾಂಡ್‌ನ‌ ದೋಸೆ ಹಿಟ್ಟು ಕೈ ಸೇರಲಿದೆ.-ಎಂ.ಕೆ.ಜಗದೀಶ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್‌. 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next