ಮಾನ್ವಿ: ಪಟ್ಟಣದ ಸಂಗಪೂರ ರಸ್ತೆಯಲ್ಲಿನ ರಾಜಲಬಂಡಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಆಹಾರದಲ್ಲಿನ ವ್ಯತ್ಯಾಯದಿಂದಾಗಿ 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ರಾಜಲಬಂಡ ಗ್ರಾಮಕ್ಕೆ ಮಂಜೂರಾದ ಮೊರಾರ್ಜಿ ದೇಸಾಯಿ ವಸತಿ ನಿಲಯವು ಕಟ್ಟಡದ ಕೊರತೆಯಿಂದಾಗಿ ಪಟ್ಟಣದಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ199 ಕ್ಕೂ ಹೆಚ್ಚು ಬಾಲಕ, ಬಾಲಕಿಯರು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಇಲ್ಲಿನ ನೀರನ್ನು ಶುದ್ದೀಕರಿಸುವುದಕ್ಕಾಗಿ ನೀರಿನ ಟ್ಯಾಂಕಿನಲ್ಲಿ ಹೆಚ್ಚಿನ ಪ್ರಾಮಾಣದಲ್ಲಿ ಕ್ಲೋರಿನ್ ಪುಡಿಯನ್ನು ಬೆರೆಸಿದ್ದು,ಈ ನೀರನ್ನು ಉಪಯೋಗಿಸಿ ಶುಕ್ರವಾರ ರಾತ್ರಿ ಅನ್ನವನ್ನು ಅಡುಗೆಯವರು ಮಾಡಿರುವುದರಿಂದ ವಿದ್ಯಾರ್ಥಿಗಳಲ್ಲಿ ವಾಂತಿ ಮತ್ತು ಹೊಟ್ಟೆ ನೋವಿನ ಲಕ್ಷಣಗಳು ಕಂಡುಬಂದಿದೆ. ಕೂಡಲೇ ಅವರನ್ನು ವಸತಿ ನಿಲಯದ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜ ಮಾತನಾಡಿ, ಪಟ್ಟಣದಲ್ಲಿನ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಸತಿ ನಿಲಯದ 29 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ದಾಖಲಿಸಿಕೊಂಡು ಅಗತ್ಯವಾದ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳ ಅರೋಗ್ಯ ಪರೀಕ್ಷೆಯನ್ನು ವೈದ್ಯರ ತಂಡದಿಂದ ನಡೆಸಲಾಗುತ್ತಿದ್ದು ಅಗತ್ಯವಿದವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹಾಗೂ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಅಹಾರದ ಮಾದರಿಯನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ವಸತಿ ನಿಲಯದಲ್ಲಿ ವೈದ್ಯರಾದ ಡಾ.ಅಂಬಿಕಾ ಮಧುಸೂದನ್ ವಿದ್ಯಾರ್ಥಿಗಳ ಅರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದರು.
ಸ್ಥಳಕ್ಕೆ ತಹಶೀಲ್ದಾರರ ರಾಜು ಫಿರಂಗಿ ಹಾಗೂ ಪಿ ಐ ಹಿರೇಮಠ್ ಭೇಟಿ ನೀಡಿದರು.