Advertisement

ಕುಸ್ತಿ ಅಖಾಡದಲ್ಲೀಗ ಉದ್ದೀಪನ ಮದ್ದಿನ ಸದ್ದು

11:46 PM Feb 21, 2020 | Lakshmi GovindaRaj |

ಧಾರವಾಡ: ವಿದ್ಯಾನಗರಿಯ ವಿದ್ಯಾಕೇಂದ್ರ ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲೀಗ ಕೆಮ್ಮಣ್ಣಿನ ಕುಸ್ತಿ ಅಖಾಡ ಸಜ್ಜಾಗಿದೆ. ತೊಡೆ ತಟ್ಟುವ ಎದುರಾಳಿಗಳ ಕುಸ್ತಿಯ ಚಮಕ್‌ ನೋಡಲು ಕುಸ್ತಿ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಸಂಘಟಕರಿಗೆ ಮಾತ್ರ ಪೈಲ್ವಾನರ ಉದ್ದೀಪನ ಮದ್ದು ಸೇವನೆ ಆತಂಕ ಶುರುವಾಗಿದೆ.

Advertisement

ರಾಜ್ಯ ಸರ್ಕಾರ 2019ರಿಂದ ಆರಂಭಿಸಿರುವ ನಾಡಕುಸ್ತಿಯ ಪ್ರೋತ್ಸಾಹದಾಯಕ “ಕುಸ್ತಿ ಹಬ್ಬ’ದ ವೇಳೆ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ದಾಖಲಾಗಿದ್ದು, ಇದೀಗ ಎಲ್ಲಾ ಪೈಲ್ವಾನರನ್ನು ದೈಹಿಕ ಪರೀಕ್ಷೆಗೆ ಒಳಪಡಿಸಿಯೇ ಕುಸ್ತಿಗೆ ಅವಕಾಶ ನೀಡಲು ಧಾರವಾಡ ಕುಸ್ತಿಹಬ್ಬದ ಸಂಘಟಕರು ಸಿದ್ಧತೆ ಮಾಡಿಕೊಂಡಿದ್ದಾರೆ.

ಒಲಿಂಪಿಕ್‌, ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟಗಳಲ್ಲೂ ಅನೇಕರು ಉದ್ದೀಪನ ಮದ್ದು ಸೇವಿಸಿದ ವಿವಾದದಲ್ಲಿ ಸಿಲುಕಿ ಸುದ್ದಿಯಾಗಿದ್ದಾರೆ. ಇದೀಗ ಅಪ್ಪಟ ಹಳ್ಳಿ ಪ್ರತಿಭೆಗಳು ಹೆಚ್ಚಾಗಿ ಪಾಲ್ಗೊಳ್ಳುವ ಕುಸ್ತಿ ಕ್ರೀಡಾಪಟುಗಳು ಸಹ ಮದ್ದಿನ ಬೆನ್ನು ಬಿದ್ದಿರುವುದು ಸದ್ದು ಮಾಡುತ್ತಿದೆ. ಕುಸ್ತಿ ತರಬೇತಿದಾರರ ಮೇಲೂ ಈ ಬಗ್ಗೆ ಸಂಶಯ ಮೂಡುತ್ತಿದ್ದು, ಗುರು-ಶಿಷ್ಯ ಪರಂಪರೆಗೆ ಕಪ್ಪುಚುಕ್ಕೆಯಾಗುತ್ತಿದೆ.

ಈ ಪದ್ಧತಿಗೆ ಕೊನೆ ಹಾಡಲು ಸಂಶಯ ವ್ಯಕ್ತವಾಗುವ ಎಲ್ಲಾ ಕುಸ್ತಿಪಟುಗಳನ್ನು ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಪಡಿಸುವ ತಜ್ಞರ ತಂಡ ಧಾರವಾಡ ಕುಸ್ತಿ ಹಬ್ಬದಲ್ಲಿ ಠಿಕಾಣಿ ಹೂಡಲಿದೆ. ಪೈಲ್ವಾನರು ಎಚ್ಚರಿಕೆಯಿಂದ ಈ ಕುಸ್ತಿ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಕುಸ್ತಿ ಸಂಘಟಕರು ಮೊದಲೇ ಮನವಿ ಮಾಡಿಕೊಂಡಿದ್ದಾರೆ.

ಮೊದಲ ಹಬ್ಬಕ್ಕೆ ಮದ್ದಿನ ನಂಟು: 2019ರ ಕುಸ್ತಿಹಬ್ಬದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಭದ್ರಾವತಿ ಮೂಲದ ದಾವಣಗೆರೆ ಗರಡಿಯಲ್ಲಿ ಕುಸ್ತಿ ಅಭ್ಯಾಸ ಮಾಡಿದ ಕಿರಣ ಎನ್‌. ಉದ್ದೀಪನ ಮದ್ದು ಸೇವನೆ ಮಾಡಿದ್ದನ್ನು ರಾಷ್ಟ್ರೀಯ ಉದ್ದೀಪನ ಮದ್ದು ಸೇವನ ಪರೀಕ್ಷೆ ಕೇಂದ್ರ (ನಾಡಾ) 2020ರ ಜ.31ರಂದು ಪತ್ತೆ ಮಾಡಿದೆ. ಬೆಳಗಾವಿಯಲ್ಲಿ ಕಳೆದ ವರ್ಷ ನಡೆದ ಮೊದಲ ಕುಸ್ತಿಹಬ್ಬದ ಚಾಂಪಿಯನ್‌ ಆಗಿದ್ದ ಇವರು ಉದ್ದೀಪನ ಮದ್ದು ಸೇವಿಸಿ ಗೆದ್ದರು ಎನ್ನುವ ಕಪ್ಪು ಚುಕ್ಕೆ ಸಂಘಟಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Advertisement

ಪೈಲ್ವಾನ ಕಿರಣ ಅವರು ಮದ್ದು ಸೇವಿಸಿದ್ದ ಸಂಬಂಧ ಪೊಸಿಟೀವ್‌ ವರದಿ ಬಂದಿದ್ದು, ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ನೀಡಿದ್ದ ಬೆಳ್ಳಿಗದೆ ಮತ್ತು ಸರ್ಕಾರದ ಗೌರವ ಫಲಕ-ಸ್ಮರಣಿಕೆ ಹಾಗೂ ಪ್ರಶಸ್ತಿ ಮೊತ್ತವನ್ನು ಮರಳಿ ಪಡೆದುಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ ಅವರಿಗೆ ಬಿ ಸ್ಯಾಂಪಲ್‌ಗೆ ಹಾಜರಾಗಲು ಸಂಪರ್ಕಿಸಿದರೂ ಅವರು ಬರುತ್ತಿಲ್ಲ. ಅಲ್ಲದೆ ಇದೀಗ ರಾಷ್ಟ್ರಮಟ್ಟದ ಅಂತರ್‌ ವಿಶ್ವವಿದ್ಯಾಲಯಗಳ ಕುಸ್ತಿಯಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿದ್ದು ದೃಢಪಟ್ಟಿದ್ದು, ಅವರನ್ನು ನಾಲ್ಕು ವರ್ಷಗಳ ಕಾಲ ಕುಸ್ತಿಯಿಂದ ಹೊರಕ್ಕೆ ಇಡಲಾಗಿದೆ ಎಂದು ರಾಜ್ಯ ಕುಸ್ತಿಪಟುಗಳ ಸಂಘದ ಅಧ್ಯಕ್ಷ ರತನಕುಮಾರ್‌ ಮಠಪತಿ ಹೇಳಿದ್ದಾರೆ.

5 ವರ್ಷದಲ್ಲಿ 17 ಸಾವು?: ಕೆಲ ಕುಸ್ತಿಪಟುಗಳು ಉದ್ದೀಪನ ಮದ್ದು ಸೇವಿಸಿ ಅಕಾಲಿಕವಾಗಿ ಸಾವನ್ನಪ್ಪುತ್ತಿರುವ ಕುರಿತು ಕೂಡ ಹಿರಿಯ ಪೈಲ್ವಾನರು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ ಬರೋಬ್ಬರಿ 17 ಜನ ಪೈಲ್ವಾನರು ಉದ್ದೀಪನ ಮದ್ದಿನ ವ್ಯತಿರಿಕ್ತ ಪರಿಣಾಮದಿಂದ ಕರ್ನಾಟಕದ ವಿವಿಧ ಗರಡಿಗಳಲ್ಲಿ ಸಾವನ್ನಪ್ಪಿದ್ದು ದಾಖಲಾಗಿದೆ.

ಹಿಂದ ಕೇಸರಿ ಬಹುಮಾನ ಗೆಲ್ಲಲು ತಯಾರಿ ನಡೆಸಿದ ಬೆಳಗಾವಿ ಮೂಲದ ಪೈಲ್ವಾನರೊಬ್ಬರು ಎರಡು ವರ್ಷಗಳ ಹಿಂದೆ ವಿಪರೀತ ಉದ್ದೀಪನ ಮದ್ದು ಸೇವನೆಯಿಂದ ಸಾವನ್ನಪ್ಪಿದರು ಎನ್ನಲಾಗಿದೆ. ಹೀಗಾಗಿ ಬರೀ ಕುಸ್ತಿ ಗೆಲ್ಲುವುದು ಮಾತ್ರವಲ್ಲ, ಗೆಲುವಿನ ದಾರಿ ಕಡ್ಡಾಯವಾಗಿ ಪ್ರಾಮಾಣಿಕವಾಗಿ ಇರಲೇಬೇಕು ಎಂದು ಕುಸ್ತಿ ಸಂಘಟಕರು ಈ ವರ್ಷದ ಕುಸ್ತಿ ಹಬ್ಬದಲ್ಲಿ ಪೈಲ್ವಾನರ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ.

ಸರ್ಕಾರದ ಮೊದಲ ಕುಸ್ತಿಹಬ್ಬದಲ್ಲಿ ಕರ್ನಾಟಕ ಕೇಸರಿಯಾದ ಕಿರಣ್‌ ಎನ್‌. ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದೆ. ಧಾರವಾಡ ಕುಸ್ತಿ ಹಬ್ಬಕ್ಕೆ ಬರುವ ಪೈಲ್ವಾನರು ಪ್ರಾಮಾಣಿಕವಾಗಿ ಬರಬೇಕು. ಇಂತಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.
-ರತನಕುಮಾರ್‌ ಮಠಪತಿ, ಕುಸ್ತಿಪಟುಗಳ ಸಂಘದ ರಾಜ್ಯಾಧ್ಯಕ್ಷ

ಮದ್ದು ಸೇವಿಸಿ ಸಿಕ್ಕಿ ಬೀಳುವವರು ತಮ್ಮ ತಂದೆ-ತಾಯಿ, ಗರಡಿ, ಗುರು, ರಾಜ್ಯ, ರಾಷ್ಟ್ರದ ಹೆಸರಿಗೆ ಕಳಂಕ ಹಚ್ಚುತ್ತಾರೆ. ಉದ್ದೀಪನ ಮದ್ದು ಸೇವನೆ ಮಾಡಿ ಕುಸ್ತಿ ಆಡುವ ಪೈಲ್ವಾನರನ್ನು ನಾಲ್ಕು ವರ್ಷ ಮಾತ್ರವಲ್ಲ ಜೀವಿತಾವ ಧಿವರೆಗೂ ಕುಸ್ತಿಯಿಂದ ಹೊರಗಿಡುವ ಕಾನೂನು ಬಂದರೆ ಸೂಕ್ತ.
-ಶೇಖರ ಕುಂದಗೋಳ, ಮಾಜಿ ಪೈಲ್ವಾನ್‌

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next