Advertisement
ಉಭಯ ಜಿಲ್ಲೆಯ 612 ಹಳ್ಳಿಗಳಲ್ಲಿ 177 ಹಳ್ಳಿಗೆ ಶೇ. 100ರಷ್ಟು ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು 438 ಹಳ್ಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಶೇ. 100ರಷ್ಟು ನಲ್ಲಿ ಸಂಪರ್ಕ ಪೂರ್ಣಗೊಂಡಿರುವ ಹಳ್ಳಿಯಲ್ಲೂ ನಲ್ಲಿ ಮೂಲಕ ನೀರು ಬರುತ್ತಿಲ್ಲ. ಕಾರಣ, ಓವರ್‌ಹೆಡ್ ಟ್ಯಾಂಕ್ ಕಾಮಗಾರಿ, ಓವರ್ ಹೆಡ್ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವುದು ಅಥವಾ ನೀರಿನ ಮೂಲಗಳಿಂದ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಪೂರೈಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಜಲಜೀವನ್ ಮಿಷನ್ ಅಡಿಯಲ್ಲಿ ಈ ಬೇಸಗೆಯಲ್ಲಿ ಉಭಯ ಜಿಲ್ಲೆಯ ಮನೆ ಮನೆಗೆ ನೀರು ಪೂರೈಕೆಗೆ ಅಂದಾಜಿಸಲಾಗಿತ್ತು. ಅದರೆ, ಸರಕಾರ ಬದಲಾದ ಅನಂತರದಲ್ಲಿ ಕಾಮಗಾರಿ ಸ್ವಲ್ಪ ವಿಳಂಬವಾಗಿದ್ದರಿಂದ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಬೇಸಗೆಯಲ್ಲಿ ಎಲ್ಲ ಮನೆಗೂ ನಲ್ಲಿ ಮೂಲಕ ನೀರು ಪೂರೈಕೆ ಅಸಾಧ್ಯ ಎಂದು ಹೇಳಲಾಗುತ್ತಿದೆ. 2019-20ನೇ ಸಾಲಿನಲ್ಲಿ ಕಾಮಗಾರಿ ಆರಂಭವಾಗಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಕಾಮಗಾರಿ ಸರಿಯಾಗಿ ನಡೆದಿರಲಿಲ್ಲ. 2022-23ನೇ ಸಾಲಿನಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ 2,47,190 ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ನೀರು ಪೂರೈಕೆಯ ಗುರಿ ಹೊಂದಲಾಗಿದೆ. ಈಗಾಗಲೇ ಜಿಲ್ಲೆಯ 1,98,763 ಮನೆಗಳಿಗೆ ನಲ್ಲಿ ಸಂಪರ್ಕ ನೀಡುವ ಕಾರ್ಯ ಪೂರ್ಣಗೊಂಡಿದೆ. ಶೇ. 80.41ರಷ್ಟು ಗುರಿ ಸಾಧನೆಯಾಗಿದೆ. ಇನ್ನು ಶೇ.20ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ/ಪೈಪ್‌ಲೈನ್ ಕಾಮಗಾರಿ ಆಗಬೇಕಿದೆ. 48,427 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ಬಾಕಿಯಿದೆ. ಜಿಲ್ಲೆಯ 246 ಹಳ್ಳಿಗಳಲ್ಲಿ 66 ಹಳ್ಳಿಗಳಿಗೆ ಶೇ.100ರಷ್ಟು ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 185 ಹಳ್ಳಿಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ದ.ಕ. ಜಿಲ್ಲೆಯ 3,34,185 ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸುವ ಗುರಿ ಹೊಂದಲಾಗಿತ್ತು. ಈಗಾಗಲೇ 2,93,456 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದು ಶೇ.87.81ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ 366 ಹಳ್ಳಿಗಳಲ್ಲಿ 111 ಹಳ್ಳಿಗೆ ಶೇ.100ರಷ್ಟು ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. 255 ಹಳ್ಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.
Related Articles
ಜಲ ಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿ ಪುತ್ತೂರು ತಾಲೂಕು ಶೇ.97.11ರಷ್ಟು ಸಾಧನೆಯ ಮೂಲಕ ಉಭಯ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬಂಟ್ವಾಳ 94.24ರಷ್ಟು ಸಾಧನೆ ಮಾಡಿದೆ. ಕಾಪು ಶೇ.70.80ರಷ್ಟು ಗುರಿ ಸಾಧಿಸಿದ್ದರೆ ಬೈಂದೂರು ತಾಲೂಕಿನಲ್ಲಿ ಶೇ.67.22ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.
Advertisement
ಜಲ ಜೀವನ್ ಮಿಷನ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಬೇಸಗೆಯಲ್ಲಿ ಎಲ್ಲ ಮನೆಗೂ ನಲ್ಲಿ ಮೂಲಕ ನೀರು ಸಿಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಬಹುತೇಕ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನೀರು ಪೂರೈಸಲು ಬೇಕಾದ ಕ್ರಮ ವಹಿಸುತ್ತಿದ್ದೇವೆ.-ಪ್ರಸನ್ನ ಎಚ್. ಜಿ.ಪಂ. ಸಿಇಒ ಉಡುಪಿ -ರಾಜು ಖಾರ್ವಿ