ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ಮಹೇಶ್ ಕುಮಾರ್ ಗುಜರಾತ್ ಟೈಟಾನ್ಸ್ ತಂಡದ ನೆಟ್ ಅಭ್ಯಾಸದಲ್ಲಿ ಖ್ಯಾತ ಕ್ರಿಕೆಟಿಗರಿಗೆ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಗುಜರಾತ್ ಟೈಟಾನ್ಸ್ ಐಪಿಎಲ್ ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಈ ಯಶಸ್ಸಿನ ಹಿಂದೆ ದೊಡ್ಡಬಳ್ಳಾಪುರದ ಆಟಗಾರ ಕೂಡ ಇದ್ದಾರೆ.
ದೊಡ್ಡಬಳ್ಳಾಪುರದ ತ್ಯಾಗರಾಜ ನಗರದ ನಿವಾಸಿ ಶೋಭಾ(ಮಹಾಲಕ್ಷ್ಮೀ) ಪುಟ್ಟಲಿಂಗಪ್ಪ ದಂಪತಿ ಮಗನಾದ ಮಹೇಶ್ ಕುಮಾರ್ ಗುಜರಾತ್ ಟೈಟಾನ್ಸ್‌ನ ಕ್ರಿಕೆಟ್ ಪಟುವಾಗಿದ್ದಾರೆ. ನಗರದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಹೇಶ್ ಕುಮಾರ್, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬ್ರಿಜೇಶ್ ಪಾಟೀಲ್ ಅಕಾಡೆಮಿ ಸೇರಿ ಹಲವು ಅಕಾಡೆಮಿಗಳಲ್ಲಿ ತರಬೇತಿ ಪಡೆದಿದ್ದಾರೆ.
ಬೌಲಿಂಗ್‌ನಲ್ಲಿ ಜಸ್‌ಪ್ರಿತ್ ಬೂಮ್ರಾರಂತೆ ವೇಗ ಹಾಗೂ ನಿಖರ ಯಾರ್ಕರ್ ಹಾಕುವ ಮೂಲಕ ಬೌಲಿಂಗ್ ಶೈಲಿಯನ್ನು ರೂಢಿಸಿಕೊಂಡಿರುವ ಮಹೇಶ್ ಕುಮಾರ್, ಗುಜರಾತ್ ಟೈಟಾನ್ಸ್ ನ ಬ್ಯಾಟ್‌ಮನ್ಸ್‌ಗಳಿಗೆ ಬೌಲಿಂಗ್ ಮಾಡುತ್ತಿದ್ದು, ದೊಡ್ಡಬಳ್ಳಾಪುರದ ಜನರ ಬಾಯಲ್ಲಿ ಜೂನಿಯರ್ ಬೂಮ್ರಾ ಎನಿಸಿಕೊಂಡಿದ್ದಾರೆ.
ಬೂಮ್ರಾರಿಂದ ಬೌಲಿಂಗ್ ಟಿಪ್ಸ್: ನೆಟ್ ಬೌಲರ್ ಆಗಿ ಗುಜರಾತ್ ಟೈಟಾನ್ಸ್ ನಲ್ಲಿರೋ ಮಹೇಶ್‌ಕುಮಾರ್ ಪ್ರತಿಭೆಯನ್ನ ಮೊದಲು ಗುರುತಿಸಿದ್ದು ಆಶಿಶ್ ನೆಹ್ರಾ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ಕೋಚ್ ಆಗಿದ್ದ ನೆಹ್ರಾ, ನೆಟ್ಸ್‌ನಲ್ಲಿ ಮಹೇಶ್ ಬೌಲಿಂಗ್ ನೋಡಿ, ಮೆಚ್ಚಿ ಅದರ ಬೆನ್ನಲ್ಲೇ ನೆಟ್ ಬೌಲರ್ ಆಗಿ, ಆರ್‌ಸಿಬಿ ಕ್ಯಾಂಪ್‌ಗೆ ಸೇರಿಸಿಕೊಂಡಿದ್ದರು. ಆರ್‌ಸಿಬಿ ನೆಟ್ ಬೌಲರ್ ಆಗಿದ್ದ ಮಹೇಶ್ ಅವರು, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ, ಕ್ರಿಸ್‌ಗೇಲ್‌ರಂತಹ ದಿಗ್ಗಜರಿಗೆ ಬೌಲಿಂಗ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬೈ ವಿರುದ್ಧದ ಪಂದ್ಯದ ವೇಳೆ ಜಸ್‌ಪ್ರಿತ್ ಬೂಮ್ರಾರಿಂದ ಟಿಪ್ಸ್ ಕೂಡ ಪಡೆದಿದ್ದರು.
ಅವಕಾಶದ ನಿರೀಕ್ಷೆಯಲಿ: ಮಹೇಶ್ ರಲ್ಲಿದ್ದ ಬೌಲಿಂಗ್ ಗಮನಿಸಿದ ಆಶಿಶ್ ನೆಹ್ರಾ ಗುಜರಾತ್ ಕೋಚ್ ಆದ ನಂತರ ಮಹೇಶ್ ಅವರಿಗೆ ಕರೆ ನೀಡಿದ್ದು, ತನ್ನ ಪ್ರತಿಭೆಯನ್ನು ಮೈದಾನದಲ್ಲಿ ತೋರಲು ಒಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಣಜಿ ಅಥವಾ ಭಾರತ ಕ್ರಿಕೆಟ್ ತಂಡಕ್ಕೆ ಮಹೇಶ್ ಕುಮಾರ್ ಆಯ್ಕೆಯಾಗಲಿ ಎಂದು ದೊಡ್ಡಬಳ್ಳಾಪುರದ ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.