Advertisement

ಮಾರಿಕೊಪ್ಪದಲ್ಲಿ ಶ್ರದ್ಧಾ ಭಕ್ತಿಯ ದೊಡ್ಡ ಬನ್ನಿ ಮಹೋತ್ಸವ

06:14 PM Oct 31, 2020 | Suhan S |

ಹೊನ್ನಾಳಿ: ತಾಲೂಕಿನ ಪ್ರಮುಖ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

Advertisement

ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಇಲ್ಲಿನ ವಿಶೇಷತೆ. ಹೊನ್ನಾಳಿ ಪಟ್ಟಣ, ಮಾರಿಕೊಪ್ಪ, ಮಾದೇನಹಳ್ಳಿ, ಅರಬಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಮುತ್ತೈದೆಯರು, ಜೋಗಮ್ಮನವರು ಶುಕ್ರವಾರ ಮಧ್ಯಾಹ್ನದಿಂದಲೇ ಉಪವಾಸ ವ್ರತ ಮಾಡುತ್ತಾರೆ. ಬನ್ನಿ ಮುಡಿಯುವವರೆಗೂ ದೀಪಗಳನ್ನು ಹಿಡಿದು ಬೆಳಗುತ್ತಾರೆ. ಎತ್ತುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ ಗಾಡಿಗಳಲ್ಲಿ ಭಕ್ತರು ಆಗಮಿಸುವುದನ್ನು ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಹೊನ್ನಾಳಿ, ನ್ಯಾಮತಿ ತಾಲೂಕುಗಳು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭಕ್ತರು ಪ್ರತಿ ವರ್ಷ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್‌-19 ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದು ಬೇಡ ಎಂದು ತಾಲೂಕು ಆಡಳಿತ ಮನವಿ ಮಾಡಿತ್ತು. ಆದರೂ ಭಕ್ತರನ್ನು ತಡೆಯುವುದು ಕಷ್ಟ ಸಾಧ್ಯವಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಭಕ್ತರು ರೊಟ್ಟಿ, ಬುತ್ತಿ ಕಟ್ಟಿಕೊಂಡು ಎತ್ತಿನಗಾಡಿ, ಟ್ರ್ಯಾಕ್ಟರ್‌, ದ್ವಿಚಕ್ರ ವಾಹನ, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಂದು ದೇವಿಯ ಆರಾಧನೆಯಲ್ಲಿ ನಿರತರಾಗಿದ್ದರು. ಹೆಚ್ಚಿನ ಸಂಖ್ಯೆಯ ಭಕ್ತರು ಗುರುವಾರ ರಾತ್ರಿಯೇ ದೇವಸ್ಥಾನಕ್ಕೆ ಆಗಮಿಸಿ ಪ್ರಾಂಗಣದಲ್ಲಿಯೇ ಉಳಿದುಕೊಂಡಿದ್ದರು.

ಮಹಾನವಮಿ ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರ ಮಾಡಿಕೊಳ್ಳಲಾಯಿತು. ಉಪವಾಸ ವ್ರತ ಮಾಡಿದ ಪ್ರಧಾನ ಅರ್ಚಕ ಮಲ್ಲಿಕಾರ್ಜುನ್‌ ಶಮೀ ವೃಕ್ಷದ ಮುಂಭಾಗದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ಬಾಣ (ಅಂಬು)ಹೊಡೆದರು. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ, ರೈತರು ಹಾಗೂ ನಾಡಿನ ಭವಿಷ್ಯವನ್ನು ಲೆಕ್ಕ ಹಾಕುವ ಪದ್ಧತಿ ಇದೆ. ಅಂಬು ಹೊಡೆಯುವ ಸಂಪ್ರದಾಯದ ನಂತರ ಭಕ್ತರು ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಂಡರು. ಒಣ ಕೊಬ್ಬರಿ ಸುಡುವ ಮೂಲಕ ಹರಕೆ ತೀರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next