ಆಗ್ರಾ : “ನಾನು ಶಾಸಕ ಅನ್ನೋದು ನಿಮಗೆ ಗೊತ್ತಿಲ್ವಾ ? ರಾಜಕಾರಣಿಯಾಗಿ ನನ್ನ ಪವರ್ ಏನೆಂಬುದು ನಿಮಗೆ ಗೊತ್ತಿಲ್ವಾ ? ನೀವು ಓರ್ವ ಯಃಕಶ್ಚಿತ್ ಎಸ್‌ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಎಂಬುದನ್ನು ನಾನು ನಿಮಗೆ ತೋರಿಸಿಕೊಡಬೇಕಾ ? ನೀವು ಒಬ್ಬ ಸರಕಾರಿ ಸೇವಕ ಎನ್ನುವುದು ಕೂಡ ನಿಮಗೆ ಗೊತ್ತಿಲ್ವಾ ?”
ಫತೇಪುರ ಸಿಕ್ರಿಯ ಬಿಜೆಪಿ ಶಾಸಕ ಉದಯಭಾನ್ ಚೌಧರಿ ಅವರು ಹೀಗೆ ಸಿಟ್ಟಿನ ಆವೇಶದಲ್ಲಿ ಯದ್ವಾತದ್ವಾ ಗುಡುಗಿ, ‘ರಾಜಕಾರಣಿ ದರ್ಪ’ವನ್ನು ಪ್ರದರ್ಶಿಸಿದ್ದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗರೀಮಾ ಸಿಂಗ್ ಎಂಬ ಕರ್ತವ್ಯನಿಷ್ಠ ಮಹಿಳಾ ಅಧಿಕಾರಿಯ ವಿರುದ್ಧ.
ರೈತರ ಸಮಸ್ಯೆಯನ್ನು ಅರಿಯಲು ಕ್ಷೇತ್ರಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಉದಯಭಾನ್ ಚೌಧರಿ ಉದುರಿಸಿದ ಈ ದರ್ಪದ ಮಾತುಗಳು ದಾಖಲಾಗಿರುವ ವಿಡಿಯೋ ಈಗ ವೈರಲ್ ಆಗಿದೆ.
ಶಾಸಕ ಉದಯಭಾನ್ ಅವರು ಈ ದರ್ಪದ ಮಾತುಗಳನ್ನು ಆಡುವ ಸಂದರ್ಭದಲ್ಲಿ ನೆರೆದಿದ್ದ ಜನರ ನಡುವಿನಿಂದ ‘ಎಸ್‌ಡಿಎಂ ಜಿಂದಾಬಾದ್’ ಎಂಬ ಘೋಷಣೆ ಕೇಳಿ ಬಂತು. ಇದರಿಂದ ಕೊಂಚ ವಿಚಲಿತರಾದವರಂತೆ ಕಂಡು ಬಂದ ಶಾಸಕ ಚೌಧರಿ ಅನಂತರ ಅಲ್ಲಿಂದ ಸದ್ದಿಲ್ಲದೆ ನಿರ್ಗಮಿಸಿದರು.
Related Articles
ನಿನ್ನೆ ಸೋಮವಾರ ನಡೆದಿದ್ದ ಈ ಒಟ್ಟು ಘಟನೆಯ ಸಂಬಂಧ ಪೊಲೀಸರಲ್ಲಿ ಈ ವರೆಗೆ ಯಾರಿಂದಲೂ ದೂರು ದಾಖಲಾಗಿಲ್ಲ.