ಡೆಹ್ರಾಡೂನ್: “ಅಪ್ಪ ಚಿಂತೆ ಮಾಡಬೇಡ. ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ರಕ್ಷಣಾ ತಂಡದವರು ನಮ್ಮನ್ನು ಇಲ್ಲಿಂದ ಬೇಗನೇ ಪಾರು ಮಾಡುತ್ತಾರೆ…’ ಹೀಗೆಂದು ಏಳು ದಿನಗಳಿಂದ ಮಗನ ಬರುವಿಕೆಗಾಗಿ ಕಾಯುತ್ತಿರುವ ಅಪ್ಪನಿಗೆ ಉತ್ತರಾಖಂಡದ ಸಿಲ್ಕ್ಯಾರಾದ ನಿರ್ಮಾಣ ಹಂತದ ಟನಲ್‌ನಲ್ಲಿ ಸಿಲುಕಿರುವ ಕಾರ್ಮಿಕನ ಭರವಸೆಯ ಮಾತು.
22 ವರ್ಷದ ಮಂಜಿತ್ ಲಾಲ್ ಸಿಲುಕಿರುವ 41 ಮಂದಿ ಕಾರ್ಮಿಕರ ಪೈಕಿ ಒಬ್ಬರಾಗಿದ್ದಾರೆ. 7 ದಿನಗಳಾದರೂ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಗನ ಸುರಕ್ಷಿತ ಬರುವಿಕೆಗಾಗಿ ದೇವರಲ್ಲಿ ಕ್ಷಣ ಕ್ಷಣಕ್ಕೂ ಪ್ರಾರ್ಥನೆ ಸಲ್ಲಿಸುತ್ತಾ ಅವರ ತಂದೆ ಚೌಧರಿ ಲಾಲ್ ಸ್ಥಳದಲ್ಲೇ ಕಾಯುತ್ತಿದ್ದಾರೆ.
“ನನಗೆ ಇಬ್ಬರು ಗಂಡು ಮಕ್ಕಳು. ಆದರೆ ಈ ಪೈಕಿ ನನ್ನ 36 ವರ್ಷದ ಹಿರಿಯ ಮಗ ಕೆಲವು ತಿಂಗಳ ಹಿಂದೆ ಮುಂಬೈನ ನಿರ್ಮಾಣ ಹಂತದ ಎತ್ತರ ಕಟ್ಟಡದಲ್ಲಿ ವಿದ್ಯುತ್ ಆಘಾತದಿಂದ ಅಸುನೀಗಿದ. ಈಗ ನನ್ನ ಎರಡನೇ ಮಗನ ಸ್ಥಿತಿ ಹೀಗಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಆತ ಈ ಕೆಲಸಕ್ಕೆ ಸೇರಿದ್ದ. ಇರುವ ಒಬ್ಬನ ಸುರಕ್ಷಿತ ಬರುವಿಕೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ’ ಎಂದು ಚೌಧರಿ ಲಾಲ್ ದುಃಖ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಪರಿಸ್ಥಿತಿ ಟನೆಲ್‌ನಲ್ಲಿ ಸಿಲುಕಿರುವ ಇತರೆ 40 ಕಾರ್ಮಿಕರ ಕುಟುಂಬದವರದ್ದಾಗಿದೆ. ಉತ್ತರ ಕಾಶಿ ಜಿಲ್ಲೆಯ ಯುಮುನೋತ್ರಿ ಹೆದ್ದಾರಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದ ಟನಲ್ ಕಳೆದ ಭಾನುವಾರ ಮುಂಜಾನೆ ಕುಸಿದಿತ್ತು.
ಪರ್ಯಾಯ ಟನಲ್ ಕೊರೆಯಲು ಚಿಂತನೆ
41 ಕಾರ್ಮಿಕರ ರಕ್ಷಣೆಗಾಗಿ ಅಧಿಕಾರಿಗಳು ಹಾಗೂ ರಕ್ಷಣಾ ತಂಡ ಅನೇಕ ಸಾಧ್ಯತೆಗಳ ಕುರಿತು ಯೋಚಿಸುತ್ತಿದೆ. ಸಿಲುಕಿರುವವರ ರಕ್ಷಣೆಗಾಗಿ ಪರ್ಯಾಯವಾಗಿ ಪರ್ವತದ ಮೇಲಿನಿಂದ ಲಂಬವಾದ ಸುರಂಗ ಕೊರೆಯುವುದರ ಕುರಿತು ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ನವದೆಹಲಿಯಿಂದ ಅತ್ಯಾಧುನಿಕ ಕೊರೆಯುವ ಯಂತ್ರವನ್ನು ತರಿಸಿಕೊಳ್ಳಲು ಯೋಜಿಸಲಾಗಿದೆ. ಅದಕ್ಕೆ ಪೂರಕವಾಗಿ ಅಗೆತವನ್ನೂ ಶುರು ಮಾಡಲಾಗಿದೆ. ಇನ್ನೊಂದೆಡೆ, ಅಮೆರಿಕದ ಆಗರ್ ಯಂತ್ರದ ಬೇರಿಂಗ್ ಅನ್ನು ದುರಸ್ತಿಗೊಳಿಸಲಾಗಿದೆ. ಭಾನುವಾರದಿಂದ ಹೊಸ ಯಂತ್ರದ ಮೂಲಕ ರಕ್ಷಣಾ ಕಾರ್ಯ ಶುರು ಮಾಡುವ ಸಾಧ್ಯತೆ ಇದೆ.