Advertisement

ಹೆದರಬೇಡಿ, ಬೆಳಗಾವಿಯಲ್ಲಿ ಕೊರೊನಾ ವೈರಸ್‌ ಇಲ್ಲ

01:14 PM Mar 04, 2020 | Suhan S |

ಬೆಳಗಾವಿ: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಚೀನಾ, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳಿಂದ ಎರಡು ತಿಂಗಳ ಅವಧಿಯಲ್ಲಿ ಬಂದಿರುವ ಬೆಳಗಾವಿಯ 9 ಜನರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಯಾರೊಬ್ಬರಿಗೂ ಕೊರೊನಾ ಸೋಂಕಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

Advertisement

ಕೊರೊನಾ ವೈರಸ್‌ ಭೀತಿ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿರುವ ಕುರಿತು ಮಂಗಳವಾರ “ಉದಯವಾಣಿ’ ಜತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಶಶಿಕಾಂತ ಮುನ್ನಾಳ, ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಕಲಿಯುತ್ತಿದ್ದ ವಿದ್ಯಾರ್ಥಿಗಳು ನಗರಕ್ಕೆ ವಾಪಸಾಗಿದ್ದಾರೆ. ಇವರಿಗೆ ದೆಹಲಿ, ಮುಂಬೈ, ಹೈದ್ರಾಬಾದ್‌ನಲ್ಲಿ ಎಲ್ಲ ರೀತಿಯ ತಪಾಸಣೆ ನಡೆಸಲಾಗಿದ್ದು, ನೆಗೆಟಿವ್‌ ಎಂದು ವರದಿ ಬಂದಿದೆ. ಹೀಗಿದ್ದರೂ ಬೆಳಗಾವಿಗೆ ಬಂದ ಇವರೆಲ್ಲರನ್ನೂ ಮತ್ತೂಮ್ಮೆ ತಪಾಸಣೆ ನಡೆಸಿ ವೈದ್ಯಕೀಯ ನಿಗಾ ಇಡಲಾಗಿದೆ. ಗೃಹ ಬಂಧನದಲ್ಲಿ ಇಟ್ಟಿಲ್ಲ. ಅವರ ಪಾಡಿಗೆ ಅವರೆಲ್ಲರೂ ಇದ್ದಾರೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ಸ್ಪಷ್ಟನೆ: ಬೆಳಗಾವಿ ಜಿಲ್ಲೆಯಲ್ಲಿ 9 ಕೊರೋನಾ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ ಎಂದು ಕೆಲ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸಲಾಗುತ್ತಿದ್ದು, ಈ ಸುದ್ದಿ ಸತ್ಯಕ್ಕೆ ದೂರವಾಗಿವೆ. ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊರೊನಾ ಪತ್ತೆಯಾಗಿರುವ ಚೀನಾ ಹಾಗೂ ಇತರ ದೇಶಗಳಿಂದ ಈವರೆಗೆ ಬೆಳಗಾವಿ ಜಿಲ್ಲೆಗೆ ಒಟ್ಟು 9 ಮಂದಿ ಮರಳಿ ಬಂದಿದ್ದು, ವೈದ್ಯಕೀಯ ತಪಾಸಣೆ ಮಾಡಿದಾಗ ಇವರಲ್ಲಿ ಕೊರೊನಾ ರೋಗ ಲಕ್ಷಣಗಳು ವರದಿಯಾಗಿಲ್ಲ. ಇವರಲ್ಲಿ ಇಬ್ಬರನ್ನು ಈಗಾಗಲೇ 28 ದಿನಗಳವರೆಗೆ ವೈದ್ಯಕೀಯ ನಿಗಾ ಇಡಲಾಗಿದ್ದು, ಉಳಿದ 7 ಜನರನ್ನು ಮುಂದಿನ 28 ದಿನಗಳವರೆಗೆ ನಿಗಾದಲ್ಲಿರಿಸಲಾಗುವುದು ಎಂದು ಹೇಳಿದ್ದಾರೆ. ಯಾರನ್ನೂ ಗೃಹ ಬಂಧನದಲ್ಲಿ ಇರಿಸಲಾಗಿಲ್ಲ. ಇವರಿಗೆ ತಮ್ಮ ಮನೆಯಲ್ಲಿಯೇ ವೈಯಕ್ತಿಕ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಅವರ ಬಗ್ಗೆ ತೀವ್ರ ನಿಗಾ ಇಟ್ಟಿರುತ್ತಾರೆ. ನಿತ್ಯ ಅವರ ಆರೋಗ್ಯ ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಪೀಡಿತ ರಾಷ್ಟ್ರ ಗಳಿಂದ ಬರಬಹುದಾದ ಪ್ರವಾಸಿಗರು ಹಾಗೂ ಬೆಳಗಾವಿ ಜಿಲ್ಲೆಯ ನಿವಾಸಿಗಳ ವಿವರ ರಾಜ್ಯ ಕಣ್ಗಾವಲು ಘಟಕದಿಂದ ಪ್ರತಿನಿತ್ಯ ಈ-ಮೇಲ್‌ ಮೂಲಕ ಜಿಲ್ಲಾ ಸಮೀಕ್ಷಾ ಘಟಕಕ್ಕೆ ಬರುತ್ತಿದ್ದು, ಈ ಎಲ್ಲ ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ತುರ್ತಾಗಿ ಸಂಪರ್ಕಿಸಿ ಕೂಡಲೇ ಅವಶ್ಯಕ ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಜಿಲ್ಲೆಗೆ ಬಂದ ಪ್ರವಾಸಿಗರ ವಿವರಗಳ ಬಗ್ಗೆ ರಾಜ್ಯ ಕಣ್ಗಾವಲು ಘಟಕಕ್ಕೆ ಕಳುಹಿಸಿಕೊಡಲಾಗುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಜ.28ರಂದು ಈ ಕುರಿತು ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಸಂಶಯಾಸ್ಪದ ಪ್ರಕರಣಗಳು ಕಂಡು ಬಂದರೆ ಅವರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ, ಬೆಳಗಾವಿಯಲ್ಲಿ ಪ್ರತ್ಯೇಕ ಐಸೊಲೇಶನ್‌ ವಾರ್ಡ್‌ ವ್ಯವಸ್ಥೆ ಮಾಡಲಾಗಿದೆ.

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಕುಟುಂಬ ಕಲ್ಯಾಣ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಶಾಸಕ ಅಭಯ ಗರಂ :  ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕೈಗೊಳ್ಳದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿರುದ್ಧ ಶಾಸಕ ಅಭಯ ಪಾಟೀಲ ಗರಂ ಆಗಿದ್ದಾರೆ. ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಪೂರ್ವಭಾವಿಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ವಿದೇಶದಿಂದ ಬಂದವರ ಮೇಲೆ ನಿಗಾ ಇಡಬೇಕಾದ ಕರ್ತವ್ಯ ಆರೋಗ್ಯ ಇಲಾಖೆಯದ್ದು. ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡ ರಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next