Advertisement

ಕೊರೊನಾ ಆತಂಕಬೇಡ; ಎಚ್ಚರವಹಿಸಿ, ಇಲಾಖೆಯೊಂದಿಗೆ ಸಹಕರಿಸಿ: ಸಿ.ಎಂ

09:24 AM Mar 11, 2020 | sudhir |

ಬೆಂಗಳೂರು: ಕೊರೊನಾ ಸೋಂಕಿನ ಕುರಿತು ನಾಗರಿಕರು ಆತಂಕ ಪಡಬೇಕಾಗಿಲ್ಲ. ಆರೋಗ್ಯ ಇಲಾಖೆ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸುವ ಮೂಲಕ ಈ ಸೋಂಕನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

Advertisement

ಕೊರೊನಾ ಸೋಂಕು ಸಂಬಂಧಿಸಿದಂತೆ ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸಚಿವರು, ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕಳೆದ ಎರಡು ದಿನಗಳಲ್ಲಿ ಕರ್ನಾಟಕದಲ್ಲಿ ನಾಲ್ಕು ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ರಾಜ್ಯ ಇತರೆಡೆ ಈ ಸೋಂಕು ಹರಡದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ನಾಗರಿಕರು ಆತಂಕಕ್ಕೆ ಒಳಗಾಗದೆ, ಮುನ್ನೆಚ್ಚರಿಕಾ ಕ್ರಮ ಪಾಲಿಸುವ ಜತೆಗೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್‌ ವಾರ್ಡ್‌ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಸರ್ಜಿಕಲ್‌ ಮಾಸ್ಕ್, ಔಷಧಿ ಕೊರತೆ ಇಲ್ಲ.

ಮಾಸ್ಕ್ಗೆ ಹೆಚ್ಚು ಹಣ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡ್ರಗ್‌ ಕಂಟ್ರೋಲರ್‌ಗೆ ಸೂಚಿಸಿದೆ. ಕೊರೊನಾ ಸೋಂಕು ಕುರಿತು ಯಾವ ಮಾಹಿತಿಯನ್ನೂ ಮುಚ್ಚಿಡದೆ ಪ್ರತಿ ದಿನ ಮಾಧ್ಯಮಗಳ ಮೂಲಕ ಸಾರ್ವಜನಿಕೊಂದಿಗೆ ಹಂಚಿಕೊಳ್ಳುತ್ತೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next