Advertisement

ಆತಂಕ ಬೇಡ; ಇರಲಿ ಎಚ್ಚರ

11:30 PM Dec 22, 2020 | mahesh |

ಈ ವರ್ಷವಿಡೀ ವಿಶ್ವಾದ್ಯಂತ ಜನರನ್ನು ಕಂಗೆಡುವಂತೆ ಮಾಡಿದ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ದಿಸೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ಬಹುತೇಕ ದಡ ಸೇರುತ್ತಿರುವಂತೆಯೇ ಬ್ರಿಟನ್‌ನಲ್ಲಿ ಸೋಂಕು ಹೊಸ ರೂಪದಲ್ಲಿ ಕಾಣಿಸಿಕೊಂಡಿರುವುದು ಮತ್ತೂಮ್ಮೆ ಆತಂಕದೆಡೆಗೆ ದೂಡಿದೆ. ಲಸಿಕೆ ಸಂಶೋಧಿಸುವಲ್ಲಿ ಹಲವು ದೇಶಗಳು ಯಶಸ್ವಿಯಾಗಿ ಜನರಿಗೆ ತಲುಪಿಸಲು ಕಾರ್ಯೋನ್ಮುಖವಾಗಿವೆ. ಇಂಥ ಸಂದರ್ಭದಲ್ಲಿಯೇ ಈ ಬೆಳವಣಿಗೆ ವಿಶ್ವ ಸಮುದಾಯದಲ್ಲಿ ಗೊಂದಲ ಸೃಷ್ಟಿಸಿದೆ.

Advertisement

ಕಳೆದೆರಡು ತಿಂಗಳುಗಳಿಂದ ಸೋಂಕಿನ ಹರಡುವಿಕೆ ಪ್ರಮಾಣ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಿಯಂತ್ರಣಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದೆಲ್ಲೆಡೆ ಜನಜೀವನ, ವಾಣಿಜ್ಯ, ವ್ಯವಹಾರ ಸಹಿತ ಎಲ್ಲವೂ ನಿಧಾನವಾಗಿ ಸಹಜತೆಯತ್ತ ಮರಳಲಾ ರಂಭಿಸಿದ್ದವು. ದೇಶದ ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿ ದೆಯಾದರೂ ಇದನ್ನು ನಿಯಂತ್ರಿಸಲು ಆಯಾ ರಾಜ್ಯ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ. ಆದರೆ ಇದೀಗ ಏಕಾಏಕಿಯಾಗಿ ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ ಹೊಸರೂಪದಲ್ಲಿ ಜನರ ಮೇಲೆ ದಾಳಿ ಮಾಡಿರುವುದು ಎಲ್ಲ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿ ದಂತೆ ವಿಶ್ವದ ಬಹುತೇಕ ದೇಶಗಳು ಬ್ರಿಟನ್‌ನ ವಿಮಾನಗಳಿಗೆ ನಿರ್ಬಂಧ ಹೇರಿವೆ.

ಈ ರೂಪಾಂತರಿತ ಕೊರೊನಾ ವೈರಸ್‌ನ ಬಗ್ಗೆ ಆತಂಕ ಪಡುವ ಅಗತ್ಯವೇನಿಲ್ಲ. ಪ್ರತಿಯೊಂದೂ ವೈರಸ್‌ ರೂಪಾಂತರ ಗೊಳ್ಳುವುದು ಸಹಜ. ಇದೇನು ಮರಣಾಂತಿ ಕವಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಎಲ್ಲ ದೇಶಗಳ ಸರಕಾರಗಳು ಮತ್ತು ಆರೋಗ್ಯ ಇಲಾಖೆ ಜನತೆಗೆ ಅಭಯ ನೀಡಿವೆ. ಹಾಗೆಂದು ಕೊರೊನಾದೊಂದಿಗೆ ಹುಡುಗಾಟಿಕೆ ಬೇಡ. ಜನರು ಎಚ್ಚರಿಕೆಯಿಂದಿರಬೇಕು. ಮಾಸ್ಕ್ ಧಾರಣೆ, ನೈರ್ಮಲ್ಯ-ಸಾಮಾಜಿಕ ಅಂತರ ಪಾಲನೆ. ಈ ಮೊದಲಾದ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು ಎಂದು ಇದೇ ವೇಳೆ ಜನತೆಯಲ್ಲಿ ವಿನಂತಿಸಿವೆ.

ಕೊರೊನಾದ ತೀವ್ರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಿತ ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಹಂತಹಂತವಾಗಿ ತೆರೆಯುವ ಪ್ರಕ್ರಿಯೆ ಆರಂಭಗೊಂಡಿತ್ತು. ರಾಜ್ಯದಲ್ಲಿ ಜನವರಿಯಿಂದ ಶಾಲೆಗಳನ್ನು ತೆರೆಯಲು ಸರಕಾರ ನಿರ್ಧರಿಸಿತ್ತು. ಅಲ್ಲದೆ ವಾರದೊಳಗಾಗಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ದಿನಾಂಕ ವನ್ನು ಪ್ರಕಟಿಸುವ ಇರಾದೆಯಲ್ಲಿದ್ದ ಸರಕಾರ ಮತ್ತೆ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯದಲ್ಲಿನ ವಿವಿಧ ವಿ.ವಿ.ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಈಗಾಗಲೇ ರಾಜ್ಯಕ್ಕೆ ವಾಪಸಾಗಿದ್ದು ಪರೀಕ್ಷೆ ಬರೆಯಲು ಸನ್ನದ್ಧರಾಗುತ್ತಿದ್ದಾರೆ. ಯುಕೆಯಲ್ಲಿ ವೈರಸ್‌ ಹೊಸರೂಪದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳ ಜತೆ ಪರೀಕ್ಷೆ ಬರೆಯಲು ಅವರು ಹಿಂದೇಟು ಹಾಕುವ ಸಾಧ್ಯತೆಗಳು ಇಲ್ಲದಿಲ್ಲ. ಈ ಮಧ್ಯೆ ಕೇಂದ್ರ ಸರಕಾರ ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆಸಲು ಉದ್ದೇಶಿಸಿದ್ದ ಸಿಬಿಎಸ್‌ಇ ಪರೀಕ್ಷೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದೆ. ಈ ಎಲ್ಲ ವಿದ್ಯಮಾನಗಳು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಶೈಕ್ಷಣಿಕ ವ್ಯವಸ್ಥೆಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ.

ಕೊರೊನಾ ವೈರಸ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ಸಹಜವಾಗಿ ಜನರಿಗೆ ಮಾತ್ರವಲ್ಲದೆ ಆರೋಗ್ಯ ಕ್ಷೇತ್ರಕ್ಕೂ ಸವಾಲಾಗಿ ಪರಿಣಮಿಸಿದೆ. ಇದೀಗ ಸಂಶೋಧಿಸಲಾಗಿರುವ ಕೊರೊನಾ ಲಸಿಕೆಗಳು ರೂಪಾಂತರಿತ ವೈರಸ್‌ಗೆ ಕಡಿವಾಣ ಹಾಕಬಲ್ಲುದೇ ಎಂಬುದನ್ನು ಕಾದುನೋಡಬೇಕಿದೆ. ಜನತೆಯಂತೂ ಆತಂಕಕ್ಕೀ ಡಾಗದೆ ಆರೋಗ್ಯ ಇಲಾಖೆ ಸೂಚಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ಮೂಲಕ ಸೋಂಕಿನಿಂದ ಅಂತರ ಕಾಯ್ದುಕೊಳ್ಳಬೇಕಿದೆ. ಸಮುದಾಯ ಸಹಭಾಗಿತ್ವ ದಿಂದಲಷ್ಟೇ ಇಂಥ ಸಾಂಕ್ರಾಮಿಕಗಳಿಂದ ಪಾರಾಗಲು ಸಾಧ್ಯ ಎಂಬುದನ್ನು ಜನರು ಮೊದಲು ಅರ್ಥೈಸಿಕೊಳ್ಳಬೇಕು. ಸರಕಾರ ಕೂಡ ಹೇಳಿಕೆಗಳಿಗೆ ಸೀಮಿತವಾಗದೆ ಮುಂದಾಲೋಚನೆಯಿಂದ ಹೆಜ್ಜೆ ಇಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next