ಇಂದಿಗೆ ಒಂದು ವರ್ಷವಾಯ್ತಲ್ಲ ?ನೀನು ನನಗೆ ಸಂದೇಶ ಹಾಕಲು ಶುರುಮಾಡಿ ?
ನಿನ್ನೊಡನೆ ನನ್ನ ಭಾವನೆಗಳನ್ನೆಲ್ಲ ಹಂಚಿಕೊಳ್ಳುವ ಅಸೆ. ಆದರೆ…ನಾನೇ ಮುಂದುವರೆಯಲು ಸಂಕೋಚ, ಹಿಂಜರಿಕೆ. ಅಂತೂ ಯಾವುದೋ ನೆಪ, ನಿನ್ನ ಸಂದೇಶ ಬಂದಾಗ ಸ್ವರ್ಗಕ್ಕೆ ಮೂರೇ ಗೇಣು!
ಈ ಒಂದು ವರ್ಷದಲ್ಲಿ ನಮ್ಮಿಬ್ಬರ ಮಧ್ಯೆ ಹರಿದಾಡಿದ ಸಂದೇಶಗಳ ಲೆಕ್ಕವಿಟ್ಟವರಾರು? ನೀನು ಕಳುಹಿಸಿದ ಒಂದೊಂದು ಸಂದೇಶವನ್ನೂ ಜತನದಿಂದ ಕಾಪಿಟ್ಟಿದ್ದೇನೆ. ಇವುಗಳಲ್ಲಿ ಏನೆಲ್ಲಾ ಇತ್ತು?ಏನೇನೆಲ್ಲಾ ಇರಲಿಲ್ಲ. ಮುನಿಸು,ಸರಸ,ವಿರಸ,ವಿರಹ…ಅದೆಷ್ಟು ಭಾವಗಳು !
ಅದೆಷ್ಟು ನಿದ್ದೆಗಳನ್ನು ನಮ್ಮಿಂದ ಕಸಿದಿತ್ತು, ತೂಕಡಿಕೆಯಲ್ಲೂ ಕವಿತೆ ಬರೆಸಿತ್ತು. ಅದೆಷ್ಟು ಸವಿಗನಸುಗಳ ಕಾಣಿಸಿತ್ತು ! ಆ ನೆನಪುಗಳು ನೀಡುವ ಹಿತವೇ ಬೇರೆ . ಸಿಟ್ಟು ಮಾಡಿಕೊಂದಾಗಲೆಲ್ಲ ಮೊಬೈಲ್ ಮೌನವಾಗುತಿತ್ತು… ಮನಸ್ಸು ಅಳುತ್ತಿತ್ತು. ಮತ್ತೆ , “ಸಾರಿ’, “ಕ್ಷಮಿಸು’ ಅಂತ ರಮಿಸುವಾಗ ಮತ್ತದೇ ಹಿಗ್ಗಿನ ಕುಲುಮೆ.
“ಇನ್ನೊಮ್ಮೆ ಹೀಗೆ ಕಾಡಿಸೋಲ್ಲ’ ಅಂತ ಹೇಳುತ್ತಲೇ ಯಾಕೋ ಸಪ್ಪಗಾಗುತಿದ್ದೆ. ನಿನ್ನಲ್ಲಿ ಮೊದಲ ಹುರುಪು ಕಾಣುವವರೆಗೆ ನನಗೂ ಬೇಸರ,ಆದರೆ, ಕಾಯದೆ ವಿಧಿಯಿಲ್ಲ.
“ನಿನ್ನ ಸಹನೆಗೆ ಥ್ಯಾಂಕ್ಸ್, ನನ್ನನ್ನು ಎಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯ’ ಅಂತ ಮತ್ತೆ ನಲಿದು ಉಲಿವಾಗ ಅದುವರೆಗೂ ಅನುಭವಿಸಿದ ನೋವು ಒಮ್ಮೆಲೇ ಕರಗುತ್ತಿತ್ತು. ಜೀವನೋತ್ಸಾಹ ತುಂಬುವ ಸಣ್ಣ ಸಣ್ಣ ಸಂಗತಿಗಳನ್ನೂ ಮನಸಾರೆ ಸವಿಯಬೇಕು ಅನ್ನುವ ನಿನ್ನ ವಾದ ನನಗೆ ಸದಾ ಸಮ್ಮತ.
ಇಂತಿ,
ಎಂದೆಂದಿಗೂ ಕೇವಲ ನಿನ್ನವನೇ ಆಗಬಯಸುವ
ನಿನ್ನ ಸಖ
ಸಂದೇಶ ಓದುತ್ತಲೇ, ಅವಳ ಮೊಗದಲ್ಲಿ, ಲಜ್ಜೆ ಮುಗುಳ್ನಕ್ಕಿತ್ತು.
-ರಾಜಿ,ಬೆಂಗಳೂರು