Advertisement

ಹೊಸ ರೂಪಾಂತರಿ ಬಗ್ಗೆ ಆತಂಕಬೇಡ

06:31 PM Dec 23, 2022 | Team Udayavani |

ಚೀನದಲ್ಲಿ ಕೊರೊನಾದ ಹೊಸ ರೂಪಾಂತಾರಿ ಬಿಎಫ್.7 ಅನಾಹುತವನ್ನು ಎಬ್ಬಿಸುತ್ತಿದೆ. ಹಾಗೆಂದ ಮಾತ್ರಕ್ಕೆ ನಮ್ಮ ದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ವ್ಯವಸ್ಥೆ ನಿರ್ಮಾಣವಾಗದು. ದೇಶವಾಸಿಗಳಲ್ಲಿ ಹೆಚ್ಚಿನವರಿಗೆ ಎರಡು ಬಾರಿ ಲಸಿಕೆ ಹಾಕಲಾಗಿದೆ. ಅದಕ್ಕೆ ಪೂರಕವಾಗಿ ಬೂಸ್ಟರ್‌ ಡೋಸ್‌ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ವೈರಾಣು, ಆರೋಗ್ಯ ಕ್ಷೇತ್ರದ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಅದರತ್ತ ಒಂದು ನೋಟ ಇಲ್ಲಿದೆ.

ಚೀನ ಮತ್ತು ನಮ್ಮ ದೇಶದ ಪರಿಸ್ಥಿತಿ ಹೇಗೆ ಭಿನ್ನ?
– ಈಗಾಗಲೇ ನಮ್ಮ ದೇಶದಲ್ಲಿ ಹೆಚ್ಚಿನವರಿಗೆ ವೈರಸ್‌ ಮತ್ತೊಮ್ಮೆ ಬಂದು ಹೋಗಿರುವ ಸಾಧ್ಯತೆಗಳು ಹೆಚ್ಚಾಗಿದೆ. ಮತ್ತೂಂದು ಅಂಶವನ್ನು ಗಮನಿಸುವುದಿದ್ದರೆ, ನಮ್ಮ ದೇಶದ ಜನರ ಪೈಕಿ ಹೆಚ್ಚಿನವರಿಗೆ ನಿಗದಿಪಡಿಸಿದ 2 ಡೋಸ್‌ ಲಸಿಕೆಗಳನ್ನು ಹಾಕಲಾಗಿದೆ. ಈ ಪ್ರಮಾಣ ಚೀನದಲ್ಲಿ ಆಗಿಲ್ಲ ಎನ್ನುವುದು ಗಮನಾರ್ಹ. ಶೇ.95 ಮಂದಿಗೆ ಲಸಿಕೆ ಹಾಕಲಾಗಿದ್ದರೆ, ಶೇ.30 ಮಂದಿಗೆ ಬೂಸ್ಟರ್‌ ಡೋಸ್‌ ಅನ್ನು ನೀಡಲಾಗಿದೆ. ಒಂದು ವೇಳೆ ಬೂಸ್ಟರ್‌ ಡೋಸ್‌ ಪಡೆದುಕೊಳ್ಳದೇ ಇದ್ದರೆ ಅಂಥವರು ಅದನ್ನು ಪಡೆದುಕೊಳ್ಳುವುದು ಉತ್ತಮ.

Advertisement

ಹೆಚ್ಚಿನ ಪ್ರಮಾಣದಲ್ಲಿ ಜನರು ಲಸಿಕೆ ಹಾಕಿಸಿಕೊಂಡಿರುವುದರಿಂದ ಹೊಸ ಮಾದರಿಯ ರೂಪಾಂತರಿ ಕಾಣಿಸಿಕೊಂಡರೂ, ದೇಹದಲ್ಲಿ ಅದನ್ನು ಎದುರಿಸುವ ಶಕ್ತಿ ವೃದ್ಧಿಯಾಗಿ ಇರುತ್ತದೆ.

ಬಹಳ ಹಿಂದೆಯೇ ಬೂಸ್ಟರ್‌ ಡೋಸ್‌ ತೆಗೆದುಕೊಂಡವರು ಆತಂಕಪಡಬೇಕೇ?
– ಈ ಮೊದಲೇ ಲಸಿಕೆ ಹಾಕಿಸಿಕೊಂಡಿರುವದರಿಂದಾಗಿ ಅದು ನಮ್ಮ ದೇಹಕ್ಕೆ ಸಹಕಾರಿಯಾಗಿಯೇ ಇರಲಿದೆ. ನಮ್ಮ ದೇಶದಲ್ಲಿ ಒಮಿಕ್ರಾನ್‌ ರೂಪಾಂತರಿ ಈಗಾಗಲೇ ಕಾಣಿಸಿಕೊಂಡಿದೆ. ಜತೆಗೆ ಅವುಗಳ ಹೊಸ ರೂಪಾಂತರಿಗಳಿಗೂ ನಮ್ಮ ಜನರು ತೆರೆದುಕೊಂಡಿದ್ದರು. ಆ ಸಂದರ್ಭದಲ್ಲಿ ಕೂಡ ನಮ್ಮ ದೇಹದಲ್ಲಿ ಇರುವ ಪ್ರತಿಕಾಯಗಳು ಅವುಗಳ ವಿರುದ್ಧ ಪ್ರತಿರೋಧ ಒಡ್ಡುತ್ತವೆ. ದೇಹದಲ್ಲಿ ಇರುವ ಬಿ ಮತ್ತು ಟಿ ಕೋಶಗಳು ಪ್ರತಿಕಾಯಗಳನ್ನು (ಆ್ಯಂಟಿಬಾಡಿ) ಉತ್ಪತ್ತಿ ಮಾಡುತ್ತವೆ. ಈ ಮೂಲಕ ಹೊಸತಾಗಿ ಉಂಟಾಗಲಿರುವ ರೂಪಾಂತರಿಗಳ ವಿರುದ್ಧ ಹೋರಾಟ ನಡೆಸುತ್ತವೆ. ಹೀಗಾಗಿ, ಮುಂದೆ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿರುವ ಸಮಸೆಯನ್ನು ಅವು ತಾಳಿಕೊಳ್ಳಲಿವೆ. ಹೀಗಾಗಿ, ಆತಂಕ ಬೇಡ.

ಇತರ ಆರೋಗ್ಯ ಸಮಸ್ಯೆ ಇರುವವರಿಗೆ ಸಂಭಾವ್ಯ ಅಲೆ ಅಪಾಯ ತಂದೀತೇ?
– ಹಿಂದಿನ ಸಂದರ್ಭಗಳಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗಿತ್ತೋ ಅದೇ ಮಾದರಿಯನ್ನು ಈ ಸಂದರ್ಭದಲ್ಲಿಯೂ ಅನುಸರಿಸಬೇಕು. ಇತರ ಆರೋಗ್ಯ ಸಮಸ್ಯೆಗಳು ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬೇಕು. ಇದರಿಂದಾಗಿ ಅವರ ದೇಹದಲ್ಲಿ ಪ್ರತಿಕಾಯಗಳು ವೃದ್ಧಿಯಾಗಲು ಸಹಕಾರಿಯಾಗುತ್ತವೆ. ಇದರ ಜತೆಗೆ ಕೊರೊನಾ ದೂರ ಇರಿಸುವ ನಿಟ್ಟಿನಲ್ಲಿ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಈ ಹಿಂದೆ ಅನುಸರಿಸುತ್ತಿದ್ದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಿದರೆ ಒಳ್ಳೆಯದು. ಮನೆಯಲ್ಲಿ ಇರುವ ಇರುವ ಕೊಠಡಿಗೆ ಸರಿಯಾದ ರೀತಿಯಲ್ಲಿ ಗಾಳಿ-ಬೆಳಕು ಬರುವಂತೆ ನೋಡಿಕೊಳ್ಳಬೇಕು.

ಸದ್ಯ ಚಳಿಗಾಲವೂ ಆಗಿರುವುದರಿಂದ ಈ ಅವಧಿಯಲ್ಲಿ ಬರುವ ಶೀತ, ಕೆಮ್ಮು, ನೆಗಡಿಯಿಂದ ರಕ್ಷಿಸಿಕೊಳ್ಳಬೇಕು. ಒಂದು ವೇಳೆ, ಇಂಥ ಸಮಸ್ಯೆ ಕಾಡಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

Advertisement

ನಮ್ಮ ದೇಶದವರಿಗೆ ಲಸಿಕೆಯ 4ನೇ ಡೋಸ್‌ ಬೇಕಾದೀತೇ?
– ಈ ಬಗ್ಗೆ ಕೇಂದ್ರ ಸರ್ಕಾರ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಅದರ ಪರಿಣಾಮದ ಬಗ್ಗೆ ಇನ್ನೂ ಪರಿಶೀಲನೆ ಮತ್ತು ಅಧ್ಯಯನದ ಹಂತದಲ್ಲಿಯೇ ಇದೆ. ಅದರ ಬದಲಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುವತ್ತ ಹೆಚ್ಚಿನ ಗಮನಹರಿಸಬೇಕು. ಇದರ ಜತೆಗೆ ಬೂಸ್ಟರ್‌ ಡೋಸ್‌ ಪಡೆಯದೇ ಇರುವವರಿಗೆ ಆದನ್ನು ನೀಡಲು ಕ್ರಮ ಕೈಗೊಳ್ಳಬೇಕು.

ಲಸಿಕೆ ನೀಡಿಕೆಯಲ್ಲಿ ನಮ್ಮ ದೇಶಕ್ಕೂ ಚೀನಕ್ಕೂ ಇರುವ ಅಂತರ ಏನು?
– ಜ.10ರಂದು ನಮ್ಮ ದೇಶದಲ್ಲಿ ಬೂಸ್ಟರ್‌ ಡೋಸ್‌ ಲಸಿಕೆಯನ್ನು ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರಿಗೆ ನೀಡಲು ತೀರ್ಮಾನಿಸಿ, ಅದನ್ನು ಅನುಷ್ಠಾನಗೊಳಿಸಲಾಗಿದೆ. ಏ.10ರಂದು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್‌ ಡೋಸ್‌ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್‌ ಪ್ರಕಾರ ದೇಶದ ಶೇ.30 ಮಂದಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ.

ಚೀನದಲ್ಲಿ ಶೇ.60 ಮಂದಿ ಬೂಸ್ಟರ್‌ ಡೋಸ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಆದರೆ, 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚುವರಿ ಡೋಸ್‌ ನೀಡಲಾಗಿಲ್ಲ. ಆ ದೇಶದ ಜನಸಂಖ್ಯೆಯ ಪೈಕಿ 90 ಲಕ್ಷ ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೂರನೇ ಡೋಸ್‌ ನೀಡಲಾಗಿಲ್ಲ.

ಚೀನ ಮತ್ತು ನಮ್ಮ ದೇಶದ ಲಸಿಕೆಗಳ ನಡುವೆ ವ್ಯತ್ಯಾಸವೇನು?
– ಚೀನದಲ್ಲಿ ಕೊರೊನಾವಾಕ್‌ ಮತ್ತು ಸಿನೋಫಾರ್ಮ್ ಎಂಬ ಎರಡು ಲಸಿಕೆಗಳನ್ನು ನೀಡಲಾಗಿತ್ತು. ಅವುಗಳನ್ನು ಹಳೆಯ ತಂತ್ರಜ್ಞಾನ ಆಧರಿಸಿ ಸಿದ್ಧಪಡಿಸಲಾಗಿದ್ದರಿಂದ ನಿರೀಕ್ಷಿತ ಫ‌ಲಿತಾಂಶ ಬಂದಿಲ್ಲ ಎಂದು ಈಗ ವ್ಯಕ್ತವಾಗಿರುವ ಅಭಿಪ್ರಾಯ. ಆದರೆ, ನಮ್ಮ ದೇಶದಲ್ಲಿ ಆರ್ಕ್‌ಫ‌ರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಜತೆಗೂಡಿ ಸಂಶೋಧನೆ ನಡೆಸಿದ ಕೊವಿಶೀಲ್ಡ್‌, ಭಾರತ್‌ ಬಯೋಟೆಕ್‌ನ ಕೊವಾಕ್ಸಿನ್‌ ಆಧುನಿಕ ರೀತಿಯಲ್ಲಿ ಸಿದ್ಧಪಡಿಸಿದ್ದರಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಕಂಡಿದೆ. ಚೀನದ ಕೊರೊನಾವಾಕ್‌ ಮತ್ತು ದೇಶದ ಕೊವಿಶೀಲ್ಡ್‌ ಅನ್ನು ಹೋಲಿಕೆ ಮಾಡಿದರೆ ಕೊವಿಶೀಲ್ಡ್‌ ಹೆಚ್ಚಿನ ಪ್ರಮಾಣದ ರಕ್ಷಣೆಯನ್ನು ಸೋಂಕಿನಿಂದ ನೀಡುತ್ತದೆ ಎಂಬ ಅಂಶ ದೃಢಪಟ್ಟಿದೆ.

ಎಕ್ಸ್‌ಬಿಬಿ ರೂಪಾಂತರಿ ಬಗ್ಗೆ ಮಾಹಿತಿಯೇನು?
ಒಮಿಕ್ರಾನ್‌ನ ಎರಡು ರೂಪಾಂತರಿಗಳಾದ ಬಿಎ.2.10.1 ಮತ್ತು ಬಿಎ.2.75 ರ ಸಮ್ಮಿಳನ. ಕೆಲವೊಂದು ಅಧ್ಯಯನಗಳ ಪ್ರಕಾರ ಅವುಗಳು ಪ್ರತಿಕಾಯ ಶಕ್ತಿಯನ್ನೂ ಮೀರಿ ಹರಡುತ್ತವೆ. ಅಂದರೆ ಅದು ತೀವ್ರ ರೀತಿಯಲ್ಲಿ ಸಮಸ್ಯೆ ತಂದೊಡ್ಡುತ್ತದೆ ಎಂದು ಆತಂಕಪಡಬೇಕಾಗಿಲ್ಲ.

ಎಕ್ಸ್‌ಬಿಬಿ ರೂಪಾಂತರಿ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆಯೇ?
– ಇಂಥ ವಾದವೇ ಸುಳ್ಳು. ಒಮಿಕ್ರಾನ್‌ ರೂಪಾಂತರಿ ಮೂಗಿನ ಹೊಳ್ಳೆಗಳು, ಬಾಯಿ, ಗಂಟಲುಗಳಿಗೆ ತೊಂದರೆ ನೀಡುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next