Advertisement

2,000 ನೋಟು ಬಗ್ಗೆ ಆತಂಕಬೇಡ: ಸೆ.30ರವರೆಗೆ ಸಮಯ ಇದೆ- RBI ಗವರ್ನರ್‌ ಅಭಯ

08:32 PM May 22, 2023 | Team Udayavani |

ನವದೆಹಲಿ: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆಯಿಂದ ನಾಗರಿಕರು ಆತಂಕಪಡಬೇಕಾದ ಅಗತ್ಯವಿಲ್ಲ. ತ್ವರಿತವಾಗಿ ಜನರು ಬ್ಯಾಂಕ್‌ ಶಾಖೆಗಳಿಗೆ ಧಾವಿಸುವ ಅಗತ್ಯವೂ ಇಲ್ಲ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತದಾಸ್‌ ಹೇಳಿದ್ದಾರೆ. ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು, ವಿನಿಮಯ ಮತ್ತು ಠೇವಣಿ ಇರಿಸಲು ಇನ್ನೂ 4 ತಿಂಗಳು ಕಾಲಾವಕಾಶವಿದೆ ಎಂದು ಪ್ರತಿಪಾದಿಸಿದ್ದಾರೆ.

Advertisement

ಮಂಗಳವಾರದಿಂದ ಶುರುವಾಗುವ ವಿನಿಮಯ ಮತ್ತು ಠೇವಣಿ ಪ್ರಕ್ರಿಯೆ ಸೆ.30ರವರೆಗೆ ಇರಲಿದೆ. ಈ ಅವಧಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯಿಂದ ಬ್ಯಾಂಕ್‌ಗಳಿಗೆ ಬಂದು ಸೇರಲಿದೆ ಎಂಬ ವಿಶ್ವಾಸವನ್ನೂ ದಾಸ್‌ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐ ನಿರ್ಧಾರದಿಂದ ಅರ್ಥ ವ್ಯವಸ್ಥೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗಲಾರದು. ಏಕೆಂದರೆ, ಒಟ್ಟಾರೆ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳ ಪೈಕಿ ಈ ನೋಟುಗಳ ಪ್ರಮಾಣ ಶೇ.10.8ರಷ್ಟು ಮಾತ್ರ ಎಂದೂ ಅವರು ತಿಳಿಸಿದ್ದಾರೆ.

ಚಿದು ಟೀಕೆ:
ಹೊಸ ನಿರ್ಧಾರದ ಬಗ್ಗೆ ಕಟು ಟೀಕೆ ಮಾಡಿರುವ ವಿತ್ತ ಖಾತೆ ಮಾಜಿ ಸಚಿವ ಪಿ.ಚಿದಂಬರಂ “2 ಸಾವಿರ ರೂ. ನೋಟುಗಳನ್ನು ಪರಿಚಯಿಸುವ ಮೂಲಕ ಸರ್ಕಾರವು ಕಪ್ಪುಹಣವನ್ನು ಸುಲಭವಾಗಿ ಮತ್ತು ಹೇರಳವಾಗಿ ಸಂಗ್ರಹಿಸಿಡಲು ನೆರವಾಯಿತು. ಈಗ ಅವರ ಆ ಕಪ್ಪುಹಣವನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಸರ್ಕಾರವೇ ಕಪ್ಪುಕುಳಗಳಿಗೆ ಕೆಂಪು ಹಾಸು ಹಾಸಿದೆ. ಇದೊಂದು ಮೂರ್ಖತನದ ನಿರ್ಧಾರ’ ಎಂದಿದ್ದಾರೆ.

ಪೆಟ್ರೋಲ್‌ ಪಂಪ್‌ಗ್ಳಿಗೆ ಹರಿದುಬಂದ ನೋಟುಗಳು!
ಮಧ್ಯಪ್ರದೇಶದ ಇಂದೋರ್‌ನ ಪೆಟ್ರೋಲ್‌ಪಂಪ್‌ಗ್ಳಿಗೆ ಈಗ 2 ಸಾವಿರ ರೂ. ಮುಖಬೆಲೆಯ ನೋಟುಗಳೇ ಹರಿದುಬರಲಾರಂಭಿಸಿವೆ. ನೋಟು ವಾಪಸ್‌ ಘೋಷಣೆ ಬಳಿಕ 100ರೂ. ಪೆಟ್ರೋಲ್‌ ಹಾಕಲು ಬಂದವರು ಕೂಡ 2,000ರೂ. ನೋಟನ್ನೇ ನೀಡುತ್ತಿದ್ದಾರೆ. ಪಿಂಕ್‌ ನೋಟುಗಳ ಮೂಲಕ ಪೆಟ್ರೋಲ್‌ ಖರೀದಿಸುತ್ತಿರುವವರ ಪ್ರಮಾಣ ಹಿಂದಿಗಿಂತ 5 ಪಟ್ಟು ಅಧಿಕವಾಗಿದೆ ಎಂದು ಇಂದೋರ್‌ ಪೆಟ್ರೋಲ್‌ ಪಂಪ್‌ ಡೀಲರ್‌ಗಳ ಸಂಘ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next