ಬೈಲಹೊಂಗಲ: ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ. ಇದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಬೈಲವಾಡ ಗ್ರಾಮದಲ್ಲಿ ಶನಿವಾರ ಪುನರುಜ್ಜೀವನಗೊಳಿಸಲಾದ ಕೆರೆಯನ್ನು ಬೈಲವಾಡ ಗ್ರಾಮದ ನಾಗರಿಕರಿಗೆ ಹಸ್ತಾಂತರಗೊಳಿಸಿ ಮಾತನಾಡಿ, ನೀರು ಮುಗಿದು ಹೋಗುವ ಸಂಪನ್ಮೂಲ, ಸಕಲ ಜೀವಿಗಳಿಗೂ ನೀರು ಅಗತ್ಯ. ನೀರು ದೇವರು ಕೊಟ್ಟ ಕಾಣಿಕೆ. ಈ ಅಮೂಲ್ಯ ಜೀವದ್ರವ್ಯ ಕಾಪಾಡುವುದು ಎಲ್ಲರ ಹೊಣೆ ಎಂದರು.
ಎಲ್ಲ ಸುಖ ಇರೋದು ಹಳ್ಳಿಗಳಲ್ಲಿ ಮಾತ್ರ. ಅಲ್ಲಿನ ಗುಡ್ಡಬೆಟ್ಟಗಳು, ಕೆರೆ ಕಟ್ಟೆಗಳು, ಹಳ್ಳಿ ಜನರ ಮನಸ್ಥಿತಿಯಲ್ಲಿ ಎಲ್ಲ ಸುಖ ಅಡಗಿದೆ. ನೀರು ಕೇಳಿದರೆ ಹಾಲು ಕೊಡುವ ಸಂಸ್ಕೃತಿ ಇದ್ದರೆ ಅದು ಭಾರತದ ಹಳ್ಳಿಗಳಲ್ಲಿ ಮಾತ್ರ ಎಂದರು.
ಕೇಂದ್ರ ರೇಲ್ವೆ ಸಚಿವ ಸುರೇಶ ಅಂಗಡಿ ಮಾತನಾಡಿ, ಪ್ಯಾಸ್ ಫೌಂಡೇಶನ್ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಬರುವ ದಿನಗಳಲ್ಲಿ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು.
ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ| ವಿಶ್ವನಾಥ ಪಾಟೀಲ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಗಿರೆಪ್ಪ ಗೌಡರ, ವಿಜಯ ಮೆಟಗುಡ್ಡ, ರಮೇಶ ಮುದುಕನಗೌಡರ, ವೀರನಗೌಡ ಗಿರೆಪ್ಪಗೌಡರ, ಮಂಜು ಹುಚ್ಚನ್ನವರ, ಅನಿಲ ಮೇಕಲಮರ್ಡಿ, ಎಸ್.ವ್ಹಿ.ಪಾಟೀಲ, ಪ್ಯಾಸ್ ಪೌಂಡೇಶನ್ ಅಧ್ಯಕ್ಷ ಡಾ| ಮಹಾದೇವ ಪ್ರಭು, ಡಾ| ಪ್ರೀತಿ ದೊಡವಾಡ, ಶಂಕರ ಸಂಪಗಾಂವ, ಶಂಕರ ಮಧಲಭಾಂವಿ, ಸಂಜಯ ಜಿ. ಹಾಗೂ ಗ್ರಾಮಸ್ಥರು ಇದ್ದರು.