Advertisement
ಹಿಂದೆಲ್ಲಾ ಒಂದು ಕಾರು, ಒಂದು ಮನೆ ಅಥವಾ ಟಿ.ವಿ ಕೊಳ್ಳುವುದೆಂದರೆ ಅದು ಜೀವಮಾನ ಸಾಧನೆಯಂತೆ ಬಿಂಬಿತವಾಗುತ್ತಿತ್ತು. ಅದರ ಹಿಂದೆ ಸಾಲ ಮತ್ತು ದಶಕಗಳ ಕಾಲ ಹಣಕಾಸು ನಿರ್ವಹಣೆ ಮಾಡಬೇಕಿರುತ್ತಿತ್ತು. ಆದರೆ ಇಂದು ಹಾಗಿಲ್ಲ. ತಮಗೆ ಬೇಕಾದುದನ್ನು ಕೊಳ್ಳುವ ಸ್ವಾತಂತ್ರ್ಯ ಜನರಿಗಿದೆ. ಬ್ಯಾಂಕ್ ಲೋನ್, ಕ್ರೆಡಿಟ್ ಕಾರ್ಡುಗಳಂಥ ಸವಲತ್ತುಗಳಿಂದ ಒಂದೇ ದಿನದಲ್ಲಿ ಸಾಲ ಪಡೆದು ಏನು ಬೇಕಾದರೂ ಖರೀದಿಸಬಹುದು ಎಂಬ ನಂಬಿಕೆಯಂತೂ ಜನರಲ್ಲಿ ಮೂಡಿದೆ.
ನೂರು ಸಾರಿ ಯೋಚಿಸಿ: ಸಾಲ, ಯಾವತ್ತಿಗೂ ಶೂಲ ಎಂಬ ಹಿರಿಯರ ಮಾತು ನೆನಪಿರಲಿ. ಕಂತಿನಲ್ಲಿ ಯಾವುದೇ ವಸ್ತು ಅಥವಾ ಆಸ್ತಿ ಖರೀದಿ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ನಿಜವಾಗಿಯೂ ಅದರ ಅಗತ್ಯವಿದ್ದರೆ ಮಾತ್ರ ಖರೀದಿಸಿ. ಸಾಲ ಮತ್ತು ಇಎಂಐಗಳು ಯಾವತ್ತೂ ಅಸೆಟ್ ಎಂದು ಪರಿಗಣಿತವಾಗುವುದಿಲ್ಲ. ಏಕೆಂದರೆ, ಅವುಗಳಿಂದ ಯಾವುದೇ ಮೊತ್ತ ಉತ್ಪನ್ನವಾಗದ ಕಾರಣ. ಈ ವಿಷಯದಲ್ಲಿ, ಶಿಕ್ಷಣ ಸಾಲಕ್ಕೆ ಮಾತ್ರ ವಿನಾಯಿತಿ ನೀಡಬಹುದಾಗಿದೆ. ಏಕೆಂದರೆ, ಅದು ಬದುಕಿಗೆ ಅಸೆಟ್ ದೊರಕಿಸಿಕೊಡುವ ಮಾರ್ಗವಾಗಿರುವುದರಿಂದ ಈ ವಿನಾಯಿತಿ. ಆದರೆ, ತುರ್ತಿದ್ದರೆ ಮಾತ್ರ ಇವು ಆಪತ್ಬಾಂಧವ ಎನ್ನುವುದರಲ್ಲೂ ಸತ್ಯಾಂಶವಿದೆ.
Related Articles
Advertisement
ಕಡಿಮೆ ಅವಧಿಯ ಪ್ಲ್ರಾನ್ ಆರಿಸಿ: ನಿಮ್ಮ ಹಣಕಾಸು ಸ್ಥಿತಿಗತಿ ಚೆನ್ನಾಗಿದ್ದರೆ ಬಹಳ ಬೇಗನೆ ಮುಗಿದುಹೋಗುವ ಇಎಂಐ ಪ್ಲ್ರಾನುಗಳನ್ನು ಆರಿಸಿಕೊಳ್ಳಿ. ಅಂದರೆ, ಆಗ ತಿಂಗಳ ಕಂತಿನ ರೂಪದಲ್ಲಿ ಹೆಚ್ಚು ಹಣ ಕಟ್ಟಬೇಕಾಗುತ್ತದೆ. ಅದಕ್ಕಿಂತ ಮಿಗಿಲಾಗಿ, ಕೆಲ ಬ್ಯಾಂಕುಗಳು ಮುಂದಿನ ತಿಂಗಳುಗಳ ಇಎಂಐ ಕಂತುಗಳನ್ನು ಮುಂಚಿತವಾಗಿ ಕಟ್ಟುವ ಸವಲತ್ತನ್ನೂ ನೀಡುತ್ತವೆ. ಉದ್ಯೋಗದಲ್ಲಿ ಸಂಬಳ ಹೆಚ್ಚಳ ಮಾಡಿದರೆ, ಉಡುಗೊರೆಯಾಗಿ ಹಣ ಬಂದರೆ ಇಲ್ಲವೇ ಆರ್‌ಡಿ/ ಎಫ್ಡಿ ಮೆಚೂರ್ ಆಗಿ ಅದರ ಹಣ ಕೈ ಸೇರಿದರೆ, ಆ ಮೊತ್ತವನ್ನು ಇಎಂಐ ಕಂತುಗಳಿಗೆ ಸೇರಿಸಿ ಕಂತು ಸಾಲ ಬಹಳ ಬೇಗ ಮುಗಿಯುವಂತೆ ಮಾಡಬಹುದು. ಆಗ ಹೆಚ್ಚುವರಿಯಾಗಿ ಬೀಳಬಹುದಾಗಿದ್ದ ಬಡ್ಡಿ ತಪ್ಪಿದಂತಾಗುತ್ತದೆ.
ಕ್ರೆಡಿಟ್ ಸ್ಕೋರ್ ನಿರ್ವಹಣೆ: ಗ್ರಾಹಕನ ಹಣಕಾಸು ವ್ಯವಹಾರ ನಿರ್ವಹಣೆ ಕುರಿತಾದ ಮಾಹಿತಿಯನ್ನು ಪ್ರತಿ ತಿಂಗಳು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು CIBIL (ಕ್ರೆಡಿಟ್ ಇನ್‌ಫಾರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್)ಗೆ ನೀಡುತ್ತದೆ. ಅದು ಮಾಹಿತಿಯೆಲ್ಲವನ್ನೂ ಪರಿಶೀಲಿಸಿ ಮಾನದಂಡಗಳಿಗೆ ಅನುಗುಣವಾಗಿ ಅಂಕಗಳನ್ನು ದಯಪಾಲಿಸುತ್ತದೆ. ಅದನ್ನು ಕ್ರೆಡಿಟ್ ಸ್ಕೋರ್ ಎಂದು ಕರೆಯಲಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಇಎಂಐ ಕಂತುಗಳ ಮೇಲೆ, ಸಾಲದ ಮೇಲೆ ಒಳ್ಳೆಯ ಆಫರ್ ದೊರೆಯುವುದು.
ಹೋಲಿಕೆ ಮಾಡಿ ನೋಡಿ: ಇಂಟರ್ನೆಟ್ ಇರುವುದರಿಂದ ಎಲ್ಲಾ ಬ್ಯಾಂಕುಗಳ ಇಎಂಐ ಸವಲತ್ತುಗಳನ್ನು ಹೋಲಿಕೆ ಮಾಡಿ ತಮಗೆ ಸೂಕ್ತವೆನಿಸುವುದನ್ನು ಆರಿಸಿಕೊಳ್ಳಬಹುದು. ಪ್ರತಿಯೊಬ್ಬರ ಹಣಕಾಸು ಸ್ಥಿತಿಗತಿಗಳು ಬೇರೆ ಬೇರೆಯಾಗಿರುವುದರಿಂದ ಎಲ್ಲರಿಗೂ ಸೂಕ್ತವಾಗುವ ಒಂದು ಇಎಂಐ ಕಂತು ವ್ಯವಸ್ಥೆ ಎಂಬುದು ಇರುವುದಿಲ್ಲ. ಹೀಗಾಗಿ ಎಲ್ಲವನ್ನೂ ಅಳೆದು ತೂಗಿ ತಮಗೆ ಸೂಕ್ತವೆನಿಸಿದ್ದನ್ನು ಆರಿಸಿಕೊಂಡರೆ ಉತ್ತಮ.
ಕಂತು ಕಟ್ಟಲು ಮರೆಯದಿರಿ: ತಿಂಗಳ ಕಂತನ್ನು ಕಟ್ಟದೆ ಉಳಿಸಿಕೊಂಡರೆ ದಂಡದ ರೂಪದಲ್ಲಿ, ಹೆಚ್ಚುವರಿ ಹಣ ಕಟ್ಟಬೇಕಾಗಿ ಬರುವುದು. ಅಷ್ಟೇ ಅಲ್ಲ, ಕ್ರೆಡಿಟ್ ಸ್ಕೋರ್ ಮೇಲೂ ಇದು ದುಷ್ಪರಿಣಾಮ ಬೀರುವುದು.
* ಹವನ