Advertisement

ರಜೆ ನೆಪ ಬೇಡ, ಪರಿಹಾರ ಕಾರ್ಯದಲ್ಲಿ ತೊಡಗಿ

11:37 PM Oct 23, 2019 | Team Udayavani |

ಬೆಂಗಳೂರು: “ರಾಜ್ಯದಲ್ಲಿ ಮತ್ತೂಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಧಿಕಾರಿಗಳು ದೀಪಾವಳಿ ರಜೆ ನೆಪ ಹೇಳದೆ ಕೂಡಲೇ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ’ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರವಾಹದಿಂದಾಗಿ 13 ಜನರು ಮೃತ ಪಟ್ಟಿದ್ದು, ಸುಮಾರು 10,038 ಮನೆಗಳಿಗೆ ಹಾನಿಯಾಗಿದೆ.

Advertisement

ಮೃತರ ಕುಟುಂಬಗಳಿಗೆ ಹಾಗೂ ಹಾನಿಗೊಳಗಾದ ಮನೆಗಳಿಗೆ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಿ. ಪ್ರಸ್ತುತ ಪ್ರವಾಹ ಸಂತ್ರಸ್ತರ ರಕ್ಷಣಾ ಕಾರ್ಯ ಚುರುಕುಗೊಳಿಸಿ. ಹೆಚ್ಚುವರಿ ನೆರವು ಬೇಕಾದಲ್ಲಿ ಕೂಡಲೇ ಒದಗಿಸಲಾಗುವುದು. ಈಗಾಗಲೇ ಎನ್‌ಡಿಆರ್‌ಎಫ್ನ ಆರು ತಂಡಗಳು ಹಾಗೂ ರಾಯಚೂರಿನಲ್ಲಿ ಸೇನೆಯ ತಂಡವೂ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸಂತ್ರಸ್ತರಿಗಾಗಿ 28 ಕಾಳಜಿ ಕೇಂದ್ರಗಳನ್ನು ತೆರೆಯಲಾ ಗಿದ್ದು, ಈ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯ ಗಳನ್ನು, ಔಷಧಿ, ವೈದ್ಯಕೀಯ ನೆರವು ಇತ್ಯಾದಿಗಳನ್ನು ಒದಗಿಸಬೇಕು. ಕಾಳಜಿ ಕೇಂದ್ರಗಳಲ್ಲಿ ನೆರವು ಪಡೆದಿರುವ ಕುಟುಂಬಗಳಿಗೆ ತಕ್ಷಣ 10 ಸಾವಿರ ರೂ.ಪರಿಹಾರವನ್ನು ಸ್ಥಳದಲ್ಲಿಯೇ ವಿತರಿಸಬೇಕು ಎಂದು ಸೂಚಿಸಿದರು.

ಹಿಂದೆ ಬಂದಿರುವ ದೂರುಗಳನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಸರಿಪಡಿಸಿ, ವ್ಯವಸ್ಥಿತವಾಗಿ ಸೌಲಭ್ಯ ಗಳನ್ನು ಕಲ್ಪಿಸ ಬೇಕು. ಇದಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿ ಗಳನ್ನು ಪ್ರತಿ ಪರಿ ಹಾರ ಕೇಂದ್ರಕ್ಕೆ ನಿಯೋಜಿಸಬೇಕು. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 1027.54 ಕೋಟಿ ರೂ.ಲಭ್ಯವಿದ್ದು, ಪರಿಹಾರ ಕಾರ್ಯಕ್ಕೆ ಅನುದಾನದ ಕೊರತೆ ಇಲ್ಲ. ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಬಿಡು ಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳು ದೀಪಾವಳಿ ರಜೆಯ ನೆಪ ಹೇಳಿ ಕರ್ತವ್ಯದಿಂದ ವಿಮುಖರಾಗದೆ, ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ನಿರ್ದೇಶನ ನೀಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಮುಖ್ಯಮಂತ್ರಿಗಳ ಸಲಹೆಗಾರ ಎಂ.ಲಕ್ಷ್ಮೀ ನಾರಾಯಣ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್‌, ಕಂದಾಯ ಇಲಾಖೆ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅನಿಲ… ಕುಮಾರ್‌ ಉಪಸ್ಥಿತರಿದ್ದರು.

Advertisement

ಐದೇ ನಿಮಿಷದ ಮುಖ್ಯಮಂತ್ರಿ ಸಂವಾದ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಕೇವಲ ಐದು ನಿಮಿಷ ಮಾತ್ರ ಮಾಡಿ, ಪಕ್ಷದ ಸಭೆಗೆ ತೆರಳಿದ್ದು ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಆರಂಭಿಕವಾಗಿ ಮಾತನಾಡಿ, ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿ, ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೇಳಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು. ಜಿಲ್ಲಾಧಿಕಾರಿಗಳಿಗೆ ಮಧ್ಯಾಹ್ನ 12.30 ರಿಂದ 2.30ರ ವರೆಗೆ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಅವರು ತೆರಳಿದ ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ವಿಡಿಯೋ ಸಂವಾದ ನಡೆಸಿದರು.

-ಮೃತರ ಸಂಖ್ಯೆ -13
-ಹಾನಿಗೀಡಾದ ಮನೆಗಳು- 10,038
-ಭಾಗಶಃ ಮನೆ ಹಾನಿ- 9.832
-ಸಂಪೂರ್ಣ ಮನೆ ಹಾನಿ- 206
-ರಾಜ್ಯದಲ್ಲಿ ತೆರೆಯಲಾದ ಕಾಳಜಿ ಕೇಂದ್ರಗಳ ಸಂಖ್ಯೆ- 28
-ಆಶ್ರಯ ಪಡೆದವರು- 7,220
-ಜಾನುವಾರುಗಳ ಸಾವು- 150
-ಪ್ರವಾಹಪೀಡಿತ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ಹಣ- 1,027.54 ಕೋಟಿ ರೂ

ನೆರೆ ಕುರಿತು ಸಭೆಯಲ್ಲಿ ಸುದೀರ್ಘ‌ ಚರ್ಚೆಯಾಗಿದೆ. ಮಳೆ ನಿಂತ ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಹಿಂದಿನಂತೆ ಪರಿಹಾರ ವಿತರಣೆ ಕಾರ್ಯ ನಡೆಯಲಿದೆ.
-ಜಗದೀಶ ಶೆಟ್ಟರ್‌, ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next