ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ ಶಾಸಕರು ಬೇರೆಯವರನ್ನು ನಂಬಿ ಹೋಗಬಾರದು. ಅವರು ನಿಮ್ಮ ತಲೆಯ ಮೇಲೆ ಟೋಪಿ ಹಾಕುತ್ತಾರೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್, ಸ್ಪೀಕರ್ ಅಧಿಕಾರವನ್ನು ಎತ್ತಿ ಹಿಡಿದಿರುವುದರಿಂದ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಶಾಸಕರು ಕಲಾಪಕ್ಕೆ ಹೋಗುವುದು, ಬಿಡುವುದನ್ನು ಒತ್ತಾಯ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ, ಪಕ್ಷದ ಕೈಯಲ್ಲಿ “ವಿಪ್’ ಇದೆ. ಶಾಸಕರ ಹಾಜರಾತಿಯೇ ಬೇರೆ, ಅನರ್ಹತೆಯ ಕಾನೂನು ಬೇರೆ ಎಂದರು.
ಶಾಸಕರು ಒಂದು ಬಾರಿ ಅನರ್ಹರಾದರೆ, ಮತ್ತೆ ಚುನಾವಣೆಯಲ್ಲಿ ಗೆಲ್ಲುವವರೆಗೂ ಮಂತ್ರಿ ಆಗಲು ಅವಕಾಶವಿಲ್ಲ. ಶಾಸಕರು ತಮ್ಮನ್ನು ಗೆಲ್ಲಿಸಿದ ಜನರ ಮುಖ ನೋಡಿ, ನಿಮ್ಮ ಕುಟುಂಬದವರ ಮುಖ ನೋಡಿ, ಅನರ್ಹತೆಗೆ ಒಳಗಾಗುವ ಶಿಕ್ಷೆಗೆ ಬಲಿಯಾಗಬೇಡಿ ಎಂದು ರಾಜೀನಾಮೆ ಸಲ್ಲಿಸಿರುವ ಶಾಸಕರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಸುಪ್ರೀಂಕೋರ್ಟ್ ತೀರ್ಪುನ್ನು ಸ್ವಾಗತಿಸುತ್ತೇವೆ. ನ್ಯಾಯ ಸತ್ಯದ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ಪಕ್ಷದ “ಬಿ’ ಫಾರಂ ಪಡೆದು ಬಂದವರು ನಮ್ಮ ಪರವಾಗಿ ಮತ ಹಾಕುವ ನಂಬಿಕೆ ಇದೆ. ನಾವು ವಿಶ್ವಾಸಮತ ಗೆಲ್ಲುತ್ತೇವೆ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ