Advertisement

Forest: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ ತೊಂದರೆ ಕೊಡಲ್ಲ : ಖಂಡ್ರೆ

11:41 PM Dec 06, 2023 | Team Udayavani |

ಬೆಳಗಾವಿ: ರಾಜ್ಯದ ಮಲೆನಾಡು ಮತ್ತು ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಅರಣ್ಯವಾಸಿಗಳಿಗೆ ಸರಕಾರ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

Advertisement

ಬುಧವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಅವರು ನಿಯಮ 330ರಡಿ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಖಂಡ್ರೆ, ರಾಜ್ಯದಲ್ಲಿ ಒಟ್ಟು ಎರಡು ಲಕ್ಷ ಎಕರೆ ಅರಣ್ಯ ಭೂಮಿ ಅತಿಕ್ರಮಣವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿಯೇ 2 ಸಾವಿರ ಭೂಮಿ ಭೂಗಳ್ಳರ ಪಾಲಾಗಿದೆ. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಕಳೆದ ವರ್ಷ 51 ಜನರು ಈ ವರ್ಷ 43 ಜನರು ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟಿದ್ದಾರೆ. ಪರಿಸರವನ್ನು ಉಳಿಸಿಕೊಳ್ಳುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ಅದಕ್ಕಾಗಿ ಅರಣ್ಯ ಭೂಮಿ ಸಂರಕ್ಷಣೆ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದರು.

ಆದರೆ ಯಾವುದೇ ಕಾರಣಕ್ಕೂ ಬಹಳ ವರ್ಷಗಳಿಂದ ಅದರಲ್ಲೂ 1978ರ ಪೂರ್ವದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ, ಕೃಷಿ ಮಾಡಿಕೊಂಡಿರುವ ಜನರನ್ನು ಸರಕಾರ ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಬಡವರು, ಬುಡಕಟ್ಟು ಜನಾಂಗದವರು ಮತ್ತು ಅರಣ್ಯವಾಸಿಗಳಿಗೆ ಸರ್ಕಾರ ರಕ್ಷಣೆ ಕೊಡುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಜಂಟಿ ಸಮೀಕ್ಷೆ ಆಗ್ರಹ: ರಾಜ್ಯದ ಮಲೆನಾಡು-ಕರಾವಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಮೇಲಿಂದ ಮೇಲೆ ಸಂಘರ್ಷಕ್ಕೆ ಕಾರಣವಾಗುತ್ತಿರುವ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಗಡಿಗಳನ್ನು ಜಂಟಿ ಸಮೀಕ್ಷೆ ಮಾಡಲಾಗುವುದು ಎಂದು ಖಂಡ್ರೆ ಹೇಳಿದರು.

ಕಳಂಜ ಪ್ರಕರಣ ಯಥಾಸ್ಥಿತಿ: ಖಂಡ್ರೆ
ಅರಣ್ಯ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಭೂ ಸಮೀಕ್ಷೆ ಸಂಬಂಧ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟು ಸುದ್ದಿಯಾಗಿದ್ದ ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದಲ್ಲಿ ಅ. 6ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬುಧವಾರ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಅವರು ನಿಯಮ 330ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಖಂಡ್ರೆ, ಅರಣ್ಯ ಇಲಾಖೆ ಭೂಮಿ ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಅಲ್ಲಿ ಮನೆ ಕಟ್ಟುವ ಕುಟುಂಬದ ಕ್ರಮವನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಡೆಯಲು ಹೋದಾಗ ಶಾಸಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ಈ ಘರ್ಷಣೆ ನಡೆದಿದೆ. ಇದು ದುರದೃಷ್ಟಕರ ಎಂದು ವಿಷಾದಿಸಿದರು.

Advertisement

ವಿಷಯದ ಪರವಾಗಿ ಮಾತನಾಡಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಅಧಿಕಾರಿಗಳು ಈ ರೀತಿ ನಡೆಸಿಕೊಂಡರೆ ಕೆಲಸ ಮಾಡುವುದು ಹೇಗೆ ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಭಾರತಿ ಶೆಟ್ಟಿ, ಕಳಂಜ ಪ್ರಕರಣದಲ್ಲಿ ದರ್ಪ ತೋರಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next