ಬದಿಯಡ್ಕ: ಹಸಿರು ಕೇರಳ ಯೋಜನೆಯ ಅಂಗವಾಗಿ ಬದಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಪೆರಡಾಲ ಹೊಳೆಯಲ್ಲಿ ಶುಚೀಕರಣ ಯಜ್ಞವನ್ನು ಹಮ್ಮಿಕೊಳ್ಳಲಾಯಿತು.
ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶುಚೀಕರಣ ಯಜ್ಞಕ್ಕೆ ಚಾಲನೆಯನ್ನು ನೀಡಿದರು.
ಪೆರಡಾಲ ಹೊಳೆಯು ಊರಿನ ಪ್ರಧಾನ ಜೀವನದಿಯಾಗಿದೆ. ಅತಿಯಾದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ಜಿಲ್ಲೆಯ ಅಂತರ್ಜಲ ಮಟ್ಟವನ್ನೇ ಕುಸಿಯುವಂತೆ ಮಾಡಿದೆ. ಮಾಲಿನ್ಯಗಳನ್ನು ಜಲಸಂಪನ್ಮೂಲಗಳಿಗೆ ಎಸೆಯುವು ದನ್ನು ನಿಲ್ಲಿಸಬೇಕು ಎಂದು ಹೇಳಿದರು. ಮುಂದಿನ ತಲೆಮಾರಿಗೆ ನೀರು ಲಭಿಸಬೇಕಾದರೆ ನಾವು ಎಚ್ಚೆತ್ತುಕೊಳ್ಳಲೇ ಬೇಕು ಎಂದು ಸಂದೇಶವು ಜನರಿಗೆ ತಲುಪಬೇಕಾಗಿದೆ ಎಂದ ಅವರು ಜಲಸಂರಕ್ಷಣೆಯ ನಿಟ್ಟಿನಲ್ಲಿ ಇಲ್ಲಿನ ಮಡಿಪ್ಪು ಕಟ್ಟವು ಪ್ರಧಾನವಾಗಿದೆ.
ಇಲ್ಲಿನ ಕಿರುಅಣೆಕಟ್ಟಿನಿಂದ ಊರಿನ ಸುಮಾರು 8 ಕಿಲೋಮೀಟರ್ ತನಕದ ಪ್ರದೇಶಗಳ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿನ ಕಿರು ಅಣೆಕಟ್ಟಿನ ದುರಸ್ತಿಗೆ ಮುಂದಿನ ಯೋಜನೆಯಲ್ಲಿ 2ರಿಂದ 3 ಲಕ್ಷದಷ್ಟು ಹಣವನ್ನು ಮೀಸಲಿಡಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೆ„ಬುನ್ನೀಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ಯಾಮಪ್ರಸಾದ ಮಾನ್ಯ, ಶಬಾನ, ಸದಸ್ಯರುಗಳಾದ ಶಂಕರ ಡಿ., ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಶಾಂತಾ ಬಾರಡ್ಕ, ಜಯಂತಿ, ಪ್ರಸನ್ನ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕುಂಜಾರು ಮುಹಮ್ಮದ್ ಹಾಜಿ, ನರೇಂದ್ರ ಬದಿಯಡ್ಕ, ಮಾಜಿ ಗ್ರಾಪಂ. ಅಧ್ಯಕ್ಷೆ ಸುಧಾ ಜಯರಾಂ, ಎನ್.ಆರ್.ಜಿ. ಸದಸ್ಯರು, ಹಸಿರು ಕರ್ಮಸೇನೆಯ ಸದಸ್ಯರು ಪಾಲ್ಗೊಂಡಿದ್ದರು. ಪೆರಿಯ ಕೇಂದ್ರೀಯ ವಿದ್ಯಾಲಯದ 50ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶುಚೀಕರಣಕ್ಕೆ ಸಹಕರಿಸಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಪ್ರದೀಪ್ ಸ್ವಾಗತಿಸಿದರು.