Advertisement

ನೆಪ ಹೇಳ್ದೆ ಇದ್ದಕ್ಕಿದ್ದಂತೆ ಬಾ…

07:33 PM Sep 30, 2019 | mahesh |

ನಿನ್ನ ನಿರೀಕ್ಷೆಯಲ್ಲಿ ಕಾಲ ಕಳೆಯಲು ಕಷ್ಟ ಆಗುತ್ತೆ. ಈಗ ಬರ್ತಾನೆ, ಆಗ ಬರ್ತಾನೆ ಎಂದು ಕನಸು ಕಾಣುತ್ತಾ ಕೂರುವುದು “ಸಿಲ್ಲಿ’ ಅನಿಸುತ್ತೆ. ಆದರೆ, ಹೀಗೆ ಕಾಯುವುದರಲ್ಲೂ ಒಂದು ಖುಷಿಯಿದೆ, ಪ್ರೀತಿಯಿದೆ…

Advertisement

ನನ್ನ ಹೃದಯವೆಂಬ ಪುಟ್ಟ ಗ್ರಹಕ್ಕೆ ಉಪಗ್ರಹವೊಂದ ಉಡಾಯಿಸಿ, ದೂರ ದೂರ ಹೋಗಿರುವೆ ನೀನು. ಅದು ನಿನಗೆ ಸಂಕೇತಗಳನ್ನು ಕಳುಹಿಸುತಿಹುದೋ, ಇಲ್ಲವೋ ನಾನರಿಯೇ?!

ಸಿಗದೇ ಇರುವುದಕ್ಕಾಗಿಯೇ ತಾನೇ ಈ ನಿನ್ನ ಮೌನ? ಆ ಮೌನ ರಾಗದ ಝೇಂಕಾರವು ಪ್ರತಿ ರಾತ್ರಿ ನನ್ನ ನಿದ್ರೆ ಮಾಡದಂತೆ ಮಾಡಿಬಿಟ್ಟಿದ್ದೆಯಲ್ಲ.

ನಿನ್ನ ನೆನಪಿಗೆ ಹಚ್ಚೆಯನ್ನಾದರೂ ಹಾಕಿಕೊಂಡು ಕೂರೋಣ ಎಂದರೆ ನಿನ್ನ ಹೆಸರೇನೆಂದೇ ತಿಳಿದಿಲ್ಲ ಎನಗೆ. ನಿನ್ನ ಕಾವ್ಯನಾಮವೋ, ಪ್ರೇಮನಾಮವೋ, ಅಂಕಿತನಾಮವೋ ಏನೆನ್ನಲಿ ಅದೊಂದೇ ನನಗೆ ತಿಳಿದುಹುದು. ಆ ಕಾವ್ಯನಾಮದ ಹಚ್ಚೆ ಹಾಕಪ್ಪಾ ಎಂದು ಕುಳಿತರೆ ಹಚ್ಚೆ ಹಾಕುವವನು ನಗುವುದಿಲ್ಲವೆ?

ಹೃದಯದ ಅರಮನೆಗೆ ಬೀಗ ಹಾಕಿ, ಕೀಲಿಕೈ ತೆಗೆದುಕೊಂಡು ಹೋಗಿರುವ ನಿನ್ನನು ಎಲ್ಲಿ ಹುಡುಕಲಿ ಹೇಳು ಗೆಳೆಯ? ಒಮ್ಮೆ ಸಿಕ್ಕಿ ಬಿಡು, ನೀನೊಮ್ಮೆ ಸಿಕ್ಕಿಬಿಟ್ಟರೆ, ನನ್ನ ಹೃದಯದಲ್ಲಿ ಭದ್ರವಾಗಿ ಹಿಡಿದಿಟ್ಟು, ಕೀಲಿ ಹಾಕಿ ಕೀಲಿಕೈಯನ್ನು ದೂರ ಬಿಸಾಡಿ ಬಿಡುವೆ, ಯಾರಿಗೂ ಸಿಗದಂತೆ.

Advertisement

ನಿನ್ನ ಹೆಸರು,ವಿಳಾಸವನ್ನು ನಾನರಿಯದಿದ್ದರೆ ಏನಾಯ್ತು? ನನ್ನ ಪತ್ರಗಳಿಂದ ನಿನಗದು ತಿಳಿದಿದೆಯಲ್ಲ, ಒಮ್ಮೆ ಯಾರಿಗೂ ಹೇಳದಂತೆ ಅನಿರೀಕ್ಷಿತವಾಗಿ ನೀನು ಬಂದೇ ಬರುತ್ತೀಯ ಎಂಬ ನಿರೀಕ್ಷೆ ಇದೆ. ನಿನಗಾಗಿ ನಿರೀಕ್ಷೆ ಮಾಡುತ್ತಾ ಕೂರುವುದು ಒಮ್ಮೊಮ್ಮೆ ಅಸಹನೀಯ ಅನಿಸುತ್ತದೆ. ಆದರೆ ಕಾಯುವುದು ಕಷ್ಟವೇನೂ ಅಲ್ಲ. ಹಿಂದೆ ರಾಮನ ಬರುವಿಕೆಗಾಗಿ ಕಾದ ಶಬರಿ, ಅಹಲ್ಯೆಯರಿಗೆ ಕಾದು ಕಾದು ಸುಸ್ತಾದರೂ ಅವನು ಬಂದಾಗ ಖುಷಿಯಾಗಲಿಲ್ಲವೇನು?ಜಯ ವಿಜಯರು ಮೂರು ಜನುಮಗಳನ್ನು ಕಾದು ವಿಷ್ಣುವಿನ ಬಳಿ ಸೇರಲಿಲ್ಲವೇನು? ಹಾಗೇ, ಒಂದು ದಿನ ನೀನು ಬರುವೆ. ಇಂದಲ್ಲ ದಿದ್ದರೆ ನಾಳೆ,ನಾಳೆ ಯಲ್ಲದಿದ್ದರೆ ನಾಡಿದ್ದು, ವಾರ,ತಿಂಗಳು,ಋತು,ಆಯನಗಳ ಗಡಿ ರೇಖೆ ದಾಟಿ ನೀನು ಬಂದೇ ಬರುವೆ ಎಂಬ ಭರವಸೆ ಇದೆ.

ಭರವಸೆಯ ಹುಸಿ ಮಾಡದೆ ಎಂದಾದರೂ ಒಂದು ದಿನ ಬಾ.

ಉಲೂಚಿ

Advertisement

Udayavani is now on Telegram. Click here to join our channel and stay updated with the latest news.

Next