ವಾಡಿ: ಗ್ರಾಮೀಣ ಭಾಗದ ಬಡ ಕುಟುಂಬಗಳ ಬದುಕಿನ ಆಸರೆಯಾಗಿರುವ ನರೇಗಾ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯದ ಪಿಡಿಒಗಳಿಗೆ ಆದೇಶ ನೀಡಿದರು.
ಬುಧವಾರ ಕಮರವಾಡಿ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಮೂಡಿಬಂದ ರಾಜ್ಯದ ಪಿಡಿಒಗಳ ಏಕಕಾಲದ ಆನ್ ಲೈನ್ ವಿಡಿಯೋ ಸಂವಾದ ಉದ್ದೇಶಿಸಿ ಅವರು ಮಾತನಾಡಿದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ಮಾಸ್ಕ್ ಧರಿಸಿಕೊಂಡು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟ ಮುಂದುವರಿಸಬೇಕಿದೆ. ಅಲ್ಲದೇ ನರೇಗಾ ಯೋಜನೆಯ ಉದ್ಯೋಗ ಖಾತ್ರಿ ಕೆಲಸ ಹಳ್ಳಿ ಜನರ ಬದುಕಿಗೆ ಆಶ್ರಯವಾಗಿದೆ.
ಕೊರೊನಾ ನೆಪದಲ್ಲಿ ಇದು ಸ್ಥಗಿತಗೊಂಡರೆ ಬಡ ಜನರ ಬದುಕು ದುಸ್ತರಗೊಳ್ಳುತ್ತದೆ. ಪರಿಣಾಮ ಗ್ರಾಪಂ ವ್ಯಾಪ್ತಿಯಲ್ಲಿ 40 ಜನರ ಎರಡು ತಂಡ ರಚಿಸಿ, ಬೆಳಗ್ಗೆ ಹಾಗೂ ಮಧ್ಯಾಹ್ನ ಅವಧಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡಿ ಎಂದು ಸೂಚಿಸಿದರು. 15ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗೆ ಮತ್ತು ನೈರ್ಮಲ್ಯ ವ್ಯವಸ್ಥೆ ಕಾಪಾಡಲು ವಿಶೇಷ ಆದ್ಯತೆ ನೀಡಬೇಕು.
ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿ ಕಾರಿಗಳು ಹಣವನ್ನು ಸಮರ್ಥವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಗ್ರಾಪಂ ಆಡಳಿತಕ್ಕೆ ಹಣಕಾಸಿನ ತೊಂದರೆ ಇದ್ದರೆ ಕ್ರಿಯಾ ಯೋಜನೆ ರೂಪಿಸಿ ಜಿಪಂ ಕಾರ್ಯನಿರ್ವಾಹಕ ಅಧಿ ಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆದರೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು. ಶೇ. 50 ಹಣವನ್ನು ಕುಡಿಯುವ ನೀರಿಗಾಗಿ ಮತ್ತು ಸ್ವತ್ಛತೆಗಾಗಿ ಖರ್ಚು ಮಾಡಬೇಕು. ಅನಗತ್ಯವಾಗಿ ಅನುದಾನ ದುರ್ಬಳಕೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ಸಚಿವರೊಂದಿಗೆ ಸಂವಾದ ನಡೆಸಿದ ಕಮರವಾಡಿ ಪಿಡಿಒ ಶೇಖಪ್ಪ ಶಂಕು, ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿ ದ್ದೇವೆ.
ಸೋಂಕಿತರ ಸುರಕ್ಷತೆ ಜತೆಗೆ ಗ್ರಾಮೀಣ ಜನರ ಕೂಲಿಗಾಗಿ ಉದ್ಯೋಗ ಖಾತ್ರಿಯಡಿ ಕೆಲಸ ಆರಂಭಿಸಿದ್ದೇವೆ ಎಂದರು. ಗ್ರಾಪಂ ಅಭಿವೃದ್ಧಿ ಅ ಧಿಕಾರಿಗಳಾದ ಭಾರತಿ ಮಣ್ಣೂರೆ, ರಮೇಶ ಬೆಳ್ಳಿಹಾಳ, ಕಮರವಾಡಿ ಗ್ರಾಪಂ ಅಧ್ಯಕ್ಷೆ ಸರೋಜಿನಿ ದೇಶಮುಖ, ಉಪಾಧ್ಯಕ್ಷ ಢಾಕೂ ರಾಠೊಡ, ಕಾರ್ಯದರ್ಶಿ ಬಸವರಾಜ ಗಂಜಿ, ಹಳಕರ್ಟಿ ಗ್ರಾಪಂ ಅಧ್ಯಕ್ಷ ಸೋಮು ಚವ್ಹಾಣ ಹಾಗೂ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.