ಗೊಂಡಾ(ಉತ್ತರಪ್ರದೇಶ): ಲೂಟಿ ಪ್ರಕರಣದಲ್ಲಿ ಬೇಕಾಗಿದ್ದ ವ್ಯಕ್ತಿಯೊಬ್ಬ ಕೊರಳಿಗೆ ನನ್ನ ಮೇಲೆ ಗುಂಡು ಹಾರಿಸಬೇಡಿ ಎಂದು ಬರೆದಿದ್ದ ಭಿತ್ತಿಪತ್ರ ನೇತು ಹಾಕಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ. ಅಂಕಿತ್ ವರ್ಮಾ ಎಂದು ಗುರುತಿಸಲಾದ ವ್ಯಕ್ತಿ ಕಳೆದ ಆರು ತಿಂಗಳಿನಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಅಪರಾಧಿಗಳಲ್ಲಿ ಪೊಲೀಸರ ಭಯದಿಂದಾಗಿ ಅವರು ಶರಣಾಗುತ್ತಿದ್ದಾರೆ” ಎಂದು ಸರ್ಕಲ್ ಆಫೀಸರ್ ನವೀನ ಶುಕ್ಲಾ ಹೇಳಿದ್ದಾರೆ.
ಮಂಗಳವಾರ, ವರ್ಮಾ ತನ್ನ ಕುತ್ತಿಗೆಗೆ ಫಲಕವನ್ನು ನೇತುಹಾಕಿಕೊಂಡು ಛಾಪಿಯಾ ಪೊಲೀಸ್ ಠಾಣೆಯನ್ನು ತಲುಪಿದ್ದು “ನಾನು ಶರಣಾಗಲು ಬಂದಿದ್ದೇನೆ, ನನ್ನನ್ನು ಶೂಟ್ ಮಾಡಬೇಡಿ” ಎಂದು ಬರೆದಿದ್ದು ಗಮನಸೆಳೆಯಿತು.
ಮಹುಲಿ ಖೋರಿ ಗ್ರಾಮದ ಅಮರ್ಜಿತ್ ಚೌಹಾಣ್ ಎಂಬವರು ಫೆ. 20 ರಂದು ಕಾಲೇಜಿನಿಂದ ಮೋಟಾರ್ ಸೈಕಲ್‌ನಲ್ಲಿ ಹಿಂತಿರುಗುತ್ತಿದ್ದಾಗ ಪಿಪ್ರಾಹಿ ಸೇತುವೆಯ ಬಳಿ ಇಬ್ಬರು ತಡೆದು ಗನ್‌ಪಾಯಿಂಟ್‌ನಲ್ಲಿ ದ್ವಿಚಕ್ರ ವಾಹನ, ಮೊಬೈಲ್ ಫೋನ್ ಮತ್ತು ವ್ಯಾಲೆಟ್ ಅನ್ನು ದೋಚಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.
ಕಳೆದ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಮರಳಿದ ಹದಿನೈದು ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 50 ಕ್ಕೂ ಹೆಚ್ಚು ವಾಂಟೆಡ್ ಕ್ರಿಮಿನಲ್‌ಗಳು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಈ ಹಿಂದೆಯೂ, ಉತ್ತರ ಪ್ರದೇಶದ ವಿವಿಧ ಭಾಗಗಳಿಂದ ವಾಂಟೆಡ್ ಕ್ರಿಮಿನಲ್‌ಗಳು ಕಾನೂನಿನ ಮುಂದೆ ಶರಣಾಗಲು ಪೊಲೀಸ್ ಠಾಣೆಗಳಿಗೆ ಕಾಲಿಡುತ್ತಿರುವ ವರದಿಗಳು, ಕಠಿಣ ಪೊಲೀಸ್ ಕ್ರಮ ಮತ್ತು ಬುಲ್ಡೋಜರ್‌ಗಳ ಸಹಾಯದಿಂದ ತಮ್ಮ ಆಸ್ತಿಗಳನ್ನು ಕೆಡಹುವ ಕ್ರಮದ ಕುರಿತು ಹೆದರುತ್ತಿದ್ದ ಪ್ರಕರಣಗಳು ವರದಿಯಾಗಿವೆ.