ಪತ್ರ ಓದಿದ ಭಾಮನಿ ಕಣ್ಣಲ್ಲಿ ಜಳ ಜಳ ನೀರು ಹರಿಯತೊಡಗಿತು. ಅದರಲ್ಲಿ ಮಕ್ಕಳ ಮುಂದೆ ಹೇಳಿಕೊಳ್ಳುತ್ತಿದ್ದ ಎಲ್ಲ ಥರದ ನೋವು, ಸಮಸ್ಯೆಗಳೂ ಒಮ್ಮೆಲೇ ತೊಯ್ದು ಹೋದವು. ಮನಸ್ಸು ಏನೋ ಹಗರಾದಂತೆ ಆಗಿ, ಕಣ್ಣುಗಳು ಗಂಡ ಹೋದ ರಸ್ತೆಯ ಕಡೆ ತಿರುಗಿದವು “ಈ ವಯಸ್ಸಿನಲ್ಲಿ ಕುಡಿಯುವುದು ಬೇಡ ಎಂದರೆ ಅವರು ಕೇಳುವುದೇ ಇಲ್ಲ, ಮಣ್ಣು ಮೆತ್ತಿದ ಕಾಲಿನಲ್ಲಿ ಓಡಾಡಿ ಮನೆಯೆಲ್ಲಾ ಗಲೀಜು ಮಾಡ್ತಾರೆ. ನಾನಾದರೂ ಅದನ್ನು ಎಷ್ಟು ಅಂತ ಕ್ಲೀನ್ ಮಾಡಲಿ ಹೇಳು?
ಯಾರಾದರೂ ಸಿಕ್ಕಿದರೆ ಪುರಾಣ ಮಾತಾಡುತ್ತ ನಿಂತರೆ ದಿನಕಳೆದರೂ ಗೊತ್ತಾಗದು’ ಎನ್ನುತ್ತಿದ್ದಂತೆ, ಮಗಳು- “ಅಮ್ಮಾ, ಒಂದು ಕೆಲಸ ಮಾಡು. ನೀವಿಬ್ಬರೂ ನಮ್ಮ ಜೊತೆಗೆ ಬಂದಿರಿ, ಕೆಲಸಕ್ಕೆ ಎಲ್ಲಾ ಜನರಿದ್ದಾರೆ. ಮೊಮ್ಮಕ್ಕಳ ಜೊತೆಗೆ ಆರಾಮಗಿರಬಹುದು’ ಎಂದಾಗ ಮಗಳ ಮಾತಿಗೆ ಇದೇ ಉತ್ತರ ಎಂಬಂತೆ ಭಾಮಿನಿ ಸುಮ್ಮನಾಗಿಬಿಟ್ಟಳು.
ಮಗಳು ಬಂದಾಗಲೆಲ್ಲಾ ಅಮ್ಮನದು ಇದೇ ತಕರಾರು. ಮಗ ಬಂದಾಗಲೂ ಅಷ್ಟೇ, “ನಿನ್ನ ಅಪ್ಪ ಹಾಗೆ ಮಾಡಿದರು. ಹೀಗೆ ನಡೆದುಕೊಂಡರು’ ಎಂದು ಆರೋಪಗಳ ಸುರಿ ಮಳೆಗೆರೆಗಯುತ್ತಾಳೆ. ಆಗ ಮಗ ಮಾತ್ರ, ತನಗೂ ಅಮ್ಮನ ಮಾತಿಗೂ ಯಾವ ಸಂಬಂಧವೂ ಇಲ್ಲ ಅನ್ನೋ ರೀತಿ ಮೊಬೈಲೊಳಗೆ ಹೊಕ್ಕು ಟಕಟಕ ಅಂತ ಅದೇನೊ ಟೈಪು ಮಾಡುತ್ತಾ ಕೂರುತ್ತಾನೆ. ಭಾಮಿನಿ ಸೋತು ಸುಮ್ಮನಾಗುತ್ತಾಳೆ. ತಲೆಯ ಮೇಲಿನ ಎಲ್ಲಾ ಜವಾಬ್ದಾರಿ ಕಳೆದು ನೆತ್ತಿಯ ಮೇಲೆ ಪೂರ್ಣ ಚಂದ್ರ ಮೂಡಿ, ನಾಲ್ಕಾರು ಕೂದಲಿದ್ದ ಗುರುಮೂರ್ತಿಗೆ, ಹೆಂಡತಿಯ ಎಲ್ಲ ಆರೋಪಗಳೂ ಪ್ರೀತಿ ತುಂಬಿದ ಮಾತುಗಳಂತೆಯೇ ವ್ಯಕ್ತವಾಗುತ್ತಿದ್ದವು. ಆದರೆ, ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಮಕ್ಕಳಲ್ಲಿ ಕಾಣುತ್ತಿರಲಿಲ್ಲ. ತನ್ನ ಒಡಲೊಳಗೆ ಎಲ್ಲವನ್ನು ಅದುಮಿಕೊಂಡು, ಮಿತಿ ಮೀರಿದಾಗ ಹೀಗೆ ಮಗ, ಮಗಳ ಮುಂದೆ ಹರವುತ್ತಿದ್ದಳು ಭಾಮಿನಿ. ಆ ಕಡೆಯಿಂದ ಸ್ಪಂದನೆ ಬರದೇ ಇದ್ದಾಗ ಅದೇಕೋ ಇಂದಿನ ದಿನಮಾನದ ಜನಾಂಗಕ್ಕೆ ಇಂಥದೊಂದು ಅಪ್ಪ, ಅಮ್ಮನ ಮಾತನ್ನು ಆಲಿಸುವ ವ್ಯವಧಾನ ಇಲ್ಲ ಅನಿಸುತ್ತದೆ. ಇರುವ ವ್ಯವಧಾನವನ್ನು ಉದ್ಯೋಗವೋ, ಮೊಬೈಲ್‌ಫೋನೋ ಕಿತ್ತುಕೊಂಡಿರಬೇಕು ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು.
ಹರೆಯದಿ ಮೊದಲ ಪ್ರೇಮವ ನಿವೇದಿಸುವಾಗ ಜರಿ ಲಂಗದ ಉದ್ದ ಜಡೆಯ ಭಾಮಿನಿ ಮಾತನಾಡಿ¨ªೆ ಕಡಿಮೆ. ಮೌನದ ಮಾತುಗಳಲ್ಲೇ ಅದೆಷ್ಟೋ ಭಾವವ ರಾಗವಾಗಿ ಹಾಡಿದ್ದಳು. ಮದುವೆ ಆಗಿ, ದೂರದ ಊರಿಗೆ ಗುರುಮೂರ್ತಿಗೆ ಬ್ಯಾಂಕ್ ಕೆಲಸ ಸಿಕ್ಕಿ ವರ್ಗವಾದಾಗ ದುಃಖ ಪಟ್ಟಿದ್ದಳು; ತವರ ನೆನೆದು. ಮೊದಲ ಮಗು ಹೆಣ್ಣಾದಾಗ ದುಃಖೀಸಿದ್ದಳು. ಮುಂದೆ ಯಾರು ನಮ್ಮ ನೋಡಿಕೊಳ್ಳುವವರೆಂದು. ಇನ್ನೆರಡು ವರ್ಷಗಳಲ್ಲಿ ಮಗ ಜನಿಸಿದಾಗ ಸಂಭ್ರಮಪಟ್ಟಳು. ಮಗಳು ನಾನು ಅಪ್ಪನದು, ಅಮ್ಮನದಲ್ಲ ಎಂದಾಗ ಮಗನ ಮುದ್ದಿಸಿದಳು. ಒಂದು ಚಾಕೊಲೇಟ್ ಮಗಳಿಗೆ ಕೊಟ್ಟರೆ ಎರಡು ಮಗನಿಗೆ. ಈಗ ಗುರುಮೂರ್ತಿ ಸ್ವಲ್ಪ ಮೌನಿಯಾದರೆ ಭಾಮಿನಿ ಪಟಪಟ ಅನ್ನೋ ಹರಳು.
ಮಗಳು ಮದುವೆಯಾಗಿ ಗಂಡನ ಮನೆಗೆ ಹೋದಾಗ ಎಲ್ಲರಿಗಿಂತ ಹೆಚ್ಚು ನೋವುಂಡವಳೂ ಅವಳು. ಪ್ರೀತಿಯ ಮಗ ಜೊತೆಗಿರುತ್ತಾನೆ ಎಂದು ಆಸೆ ಪಟ್ಟವಳಿಗೆ ಆಘಾತವಾಗಿದ್ದು ಮಗ ಬೆಂಗಳೂರಿನ ಖಾಸಗಿ ಕಂಪನಿ ಸೇರಿದಾಗ. ಸೊಸೆ ಬಂದ ಮೇಲಂತೂ ಏನೋ ಪರಕೀಯ ಭಾವ. ಇಷ್ಟು ದಿನ ಕೈತುಂಬಾ ಕೆಲಸವಿತ್ತು. ಎಲ್ಲಾ ಜವಾಬ್ದಾರಿ ಮುಗಿಸಿ ನಿವೃತ್ತಿ ಜೀವನ ನಡೆಸುತ್ತಿದ್ದ ಗುರುಮೂರ್ತಿ, ಅದೊಂದು ದಿನ ಪುಟ್ಟ ಪತ್ರವ ಬರೆದಿಟ್ಟು ಹೊರಟಿದ್ದ. ಮನೆಯೆಲ್ಲ ಹುಡುಕಾಡಿ ಗಾಬರಿಗೊಂಡ ಭಾಮಿನಿ, ಗಂಡನ ಮೊಬೈಲಿಗೆ ಫೋನಾಯಿಸಿದಳು. ರೂಮಿನಲ್ಲಿ ರಿಂಗಾಗುತ್ತಿದ್ದ ಮೊಬೈಲಿನಡಿ ಇದ್ದ ಪತ್ರವೊಂದು ಭಾಮಿನಿಯಕಣ್ಣಿಗೆ ಬಿತ್ತು. ಇದೇನು ಈ ವಯಸ್ಸಿನಲ್ಲಿ ಮರೆವೋ , ಹುಚ್ಚೊ ಎಂದು ಗೊಣಗುತ್ತಲೇ ಕೈಗೆತ್ತಿಕೊಂಡು ಕನ್ನಡಕ ಸರಿಪಡಿಸಿಕೊಂಡು ಓದತೊಡಗಿದಳು ಪ್ರೀತಿಯಭಾನು, ನಾ ಕೆಂಪು ಗುಲಾಬಿ ಹಿಡಿದು ಬಂದಾಗಿನ ಸುನಾಚಿದ ಕಂಗಳ ಕೆಳಗೆ ಈಗ ಬಂದ ಕಪ್ಪು ವೃತ್ತ ನೋಡಿ ನಾನು ಭಾವುಕನಾದೆ. ಕಾರಣ, ಕೆಲಸದ ನಿಮಿತ್ತ ನಾ ಬ್ಯುಸಿ ಇದ್ದಾಗ ಅದೆಷ್ಟು ಬಾರಿ ನನ್ನ ಬಗ್ಗೆ ಯೋಚಿಸುತ್ತಿದ್ದೆಯೊ? ನಿನಗಾಗಿ ನಾನು ಸಮಯಕೊಡಲಿಲ್ಲ.
ನೀನೋ, ನಿನ್ನ ಮಕ್ಕಳ ಜೊತೆ ಖುಷಿಯಿಂದ ಇರುವೆಯೆಂದು ಭಾವಿಸಿ ಹೊರ ಜಗತ್ತಿನಲ್ಲಿ ಸಮಯ ಕಳೆದು ಬಿಟ್ಟೆ. ಹೊರಗಡೆ ಜೊತೆಯಾಗಿ ಸುತ್ತಲಿಲ್ಲ, ನಿನ್ನ ಪಾಲಿಗೆ ಮನೆಯೇ ಪುಟ್ಟ ಪ್ರಪಂಚ. ಮಕ್ಕಳ ಪಾಲನೆಯಲ್ಲೇ ಸಮಯ ಕಳೆದೆ. ಮಕ್ಕಳೆಲ್ಲ ರೆಕ್ಕೆಬಲಿತು ಹಾರಿ, ದೂರದಲ್ಲಿ ಗೂಡು ಕಟ್ಟಿದ ಮೇಲೆ ಹಳೆಯ ಗೂಡಿನಲ್ಲಿ ಉಳಿದದ್ದು ಮತ್ತದೇ ನಾನು ಮತ್ತು ನೀನು. ನಿನ್ನ ಖಾಲಿ ಮನದಿ ನನ್ನ ಮೇಲಿನ ಸಿಟ್ಟು , ತಕರಾರುಗಳು. ಇಂತಹ ಎಲ್ಲಾ ವಿಷಾದ, ವಿವಾದಗಳಿಗೂ ಪೂರ್ಣ ವಿರಾಮವನಿತ್ತು ಬದುಕಿ ಬಿಡೋಣ. ಇದ್ದಷ್ಟು ದಿನ ಇನ್ನಿಲ್ಲದ ಪ್ರೀತಿ ಜೊತೆಗೆ. ಸಾಗಿ ಬಂದ ಹಾದಿಯಲ್ಲಿ ಅದೆಷ್ಟೋ ಕಹಿನೆನಪು ಮರೆತು ಸವಿ ನೆನಪುಗಳ ಸೇರಿಸಿ ಸಂಭ್ರಮ ಪಟ್ಟುಬಿಡೋಣ.ಈ ವಯಸ್ಸಿನಲ್ಲಿ ಅದೆಷ್ಟು ದಿನ ಬದುಕುತ್ತೇವೋ ಗೊತ್ತಿಲ್ಲ. ವಯೋಸಹಜ ಖಾಯಿಲೆಗಳು ಅದ್ಯಾವಾಗ ಬರುವುದೋ ತಿಳಿದಿಲ್ಲ. ನನ್ನ ಬಗ್ಗೆ ನಿನ್ನಲ್ಲಿ ಬರೀ ಸಿಟ್ಟು ಮಾತ್ರ ಇದ್ದಲ್ಲಿ ಒಂದಿಷು rದಿನ ಮಗ-ಮಗಳಮನೆಗೆ ಹೋಗಿ ಉಳಿದು ಬಿಡು. ಹುಸಿಗೋಪವಾದಲ್ಲಿ ಬಗೆಹರಿಸಬಹುದು. ನನ್ನನ್ನು ನಾನಿರುವ ಇರುವ ಹಾಗೇ ಸ್ವೀಕರಿಸಿಬಿಡು, ನಿನ್ನೆಲ್ಲ ಕಂಪ್ಲೇಂಟ್‌ಗಳನ್ನು ಪರಿಹರಿಸುವ ಪ್ರಯತ್ನಮಾಡಲು ನಾನು ರೆಡಿ. ಬದುಕ ಹಾದಿಯಲಿ ಮತ್ತೂಮ್ಮೆ ಕೆಂಪು ಗುಲಾಬಿಯ ಹಿಡಿದು ಅದೇ ಕೊನೆಯ ತಿರುವಿನ ಪಾರ್ಕಿನಲ್ಲಿ ನೀ ಬರುವ ತನಕ ಕಾಯುತ್ತೇನೆ.
ಪತ್ರ ಓದಿದ ಭಾಮನಿ ಕಣ್ಣಲ್ಲಿ ಜಳ ಜಳ ನೀರು ಹರಿಯತೊಡಗಿತು. ಅದರಲ್ಲಿ, ಮಕ್ಕಳ ಮುಂದೆ ಹೇಳಿಕೊಳ್ಳುತ್ತಿದ್ದ ಎಲ್ಲ ಥರದ ನೋವು, ಸಮಸ್ಯೆಗಳು ಒಮ್ಮೆಲೆ ತೊಯ್ದು ಹೋದವು. ಮನಸ್ಸು ಹಗುರಾದಂತೆ ಆಗಿ, ಕಣ್ಣುಗಳು ಗಂಡನು ಹೋದ ರಸ್ತೆಯ ಕಡೆ ತಿರುಗಿದವು.
ಗುರುಮೂರ್ತಿ ಅಂಜನಾಗಾಂವ್ಕರ್