ವಾಡಿ: ತಿಂಗಳುಗಟ್ಟಲೆ ಅಲೆದರೂ ಮುಖಾಮುಖೀ ಭೇಟಿಗೆ ಸಿಗಲಾರದ ತಹಶೀಲ್ದಾರ್ ಕಚೇರಿ ಅಧಿಕಾರಿಗಳು, ಶನಿವಾರ ಮನೆ ಬಾಗಿಲಲ್ಲೇ ಪ್ರತ್ಯಕ್ಷವಾಗಿದ್ದನ್ನು ಕಂಡು ರೈತರು ಆಶ್ಚರ್ಯ ಚಕಿತರಾದರು.
ಪಹಣಿ, ಪಿಂಚಣಿ, ಜಾತಿ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ಕೇಳಿದಷ್ಟು ಹಣ ಕೊಟ್ಟು ಅಂಗಲಾಚಿದರೂ ಕೈಸೇರದಂತಹ ದಾಖಲೆಗಳು, ಉಚಿತವಾಗಿ ಮನೆಯಂಗಳಕ್ಕೆ ತಲುಪಿದ್ದ ಪ್ರಸಂಗ ಕಂಡು ಫಲಾನುಭವಿಗಳು ಮನದಲ್ಲೇ ಹರ್ಷ ವ್ಯಕ್ತಪಡಿಸಿದರು.
ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ಓಣಿಗಳಲ್ಲಿ ಶನಿವಾರ ತಲಾಟಿ ಹಾಗೂ ಗ್ರಾಪಂ ಅಧಿ ಕಾರಿಗಳೊಂದಿಗೆ ಪಾದಯಾತ್ರೆ ನಡೆಸಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರ ಮನೆಗಳಿಗೆ ತೆರಳಿ ಪಹಣಿ, ಅಟ್ಲಾಸ್, ಪಿಂಚಣಿ, ಜಾತಿ ಪ್ರಮಾಣಪತ್ರ, ಆದಾಯ ಪತ್ರಗಳನ್ನು ಉಚಿತವಾಗಿ ವಿತರಿಸಿ ಗಮನ ಸೆಳೆದರು.
ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ “ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಹಶೀಲ್ದಾರ್ ಕಚೇರಿಗೆ ಮತ್ತು ಹೋಬಳಿ ನಾಡಕಚೇರಿಗಳಿಗೆ ಅಲೆಯುವ ಮೂಲಕ ಕಂದಾಯ ದಾಖಲೆಗಳನ್ನು ಪಡೆಯಲು ಗ್ರಾಮೀಣ ಜನರು ಪರದಾಡುತ್ತಿದ್ದರು. 60 ವರ್ಷ ಮೇಲ್ಪಟ್ಟವರು ಪಿಂಚಣಿಗಾಗಿ, ರೈತರು ಪಹಣಿಗಾಗಿ, ಸಾರ್ವಜನಿಕರು ಜಾತಿ ಮತ್ತು ಆದಾಯ ಪತ್ರ ಸೇರಿದಂತೆ ಇನ್ನಿತರ ಭೂ ದಾಖಲೆ ಪಡೆಯಲು ಪೀಕಲಾಟ ನಡೆಸಬೇಕಿತ್ತು. ಪರಿಣಾಮ ಫಲಾನುಭವಿಗಳ ಈ ಸಂಕಷ್ಟ ತಪ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಗತ್ಯ ದಾಖಲೆಗಳ ವಿತರಣೆಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಇಂಗಳಗಿ ಗ್ರಾಪಂ ಅಧ್ಯಕ್ಷ ಸುಭಾಷಚಂದ್ರ ಯಾಮೇರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇಷ್ಮಾ ಕೋತ್ವಾಲ್, ಕಾರ್ಯದರ್ಶಿ ರುದ್ರಪ್ಪ ಅಳ್ಳೊಳ್ಳಿ, ಗ್ರಾಮ ಲೇಖಾಧಿಕಾರಿ ಶಶಿಕಲಾ ಹಿರಾಪುರ, ಗ್ರಾಪಂ ಸದಸ್ಯ ಶರಣು ರಾವೂರ, ಅಂಗನವಾಡಿ ಕಾರ್ಯಕರ್ತೆ ಶೇಕಮ್ಮಾ ಕುರಿ ಮತ್ತಿತರರು ಪಾಲ್ಗೊಂಡಿದ್ದರು.