Advertisement

ಬಕ್ರೀದ್ ಹಬ್ಬಕ್ಕೆ‌ ಗೋವುಗಳ ಬಲಿ ಬೇಡ: ಸಚಿವ ಪ್ರಭು ಚವ್ಹಾಣ್

04:34 PM Jul 06, 2022 | Team Udayavani |

ಬೆಂಗಳೂರು: ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ನೀಡುವ ಬದಲಾಗಿ ಅವುಗಳನ್ನು ನಾವೆಲ್ಲೆರೂ ಸಂರಕ್ಷಣೆ ಮಾಡೋಣ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ರಾಜ್ಯದಿಂದ ಹೊರಗಡೆ ಅಥವಾ ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಯಾವುದೇ ಮಾರ್ಗದಿಂದ ಅಕ್ರಮ ಗೋವುಗಳು ಮತ್ತು ಗೋಮಾಂಸ ಸಾಗಿಸುವುದರ ಮೇಲೆ ಪಶುಸಂಗೋಪನೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು, ಗೋಹತ್ಯೆ ತಡೆಗಟ್ಟುವಲ್ಲಿ ಸಕ್ರೀಯರಾಗಿರುವಂತೆ ಅಧಿಕಾರಿಗಳಿಗೆ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಲಿ ಕೊಡುವ ಸಂಪ್ರದಾಯವಿದ್ದು, ಇದಕ್ಕಾಗಿ ಜಾನುವಾರುಗಳಾದ ಗೋವು, ಹಸು, ಎತ್ತು,‌ ಕರು, ಒಂಟೆಗಳ ಸಹ ಬಳಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಗೋಹತ್ಯೆ ನಿಷೇಧ ಅನುಷ್ಠಾನ ಆಗಿರುವುದರಿಂದ ಗೋವುಗಳ ಹತ್ಯೆ ಯಾವುದೇ ಕಾರಣಕ್ಕೂ ನಡೆಯದಂತೆ ಜಾಗೃತೆ ವಹಿಸಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಗಡಿ ಭಾಗಗಳಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ, ಗೋಹತ್ಯೆ ನಿಷೇಧ ಕಾಯ್ದೆಯ ಉಲ್ಲಂಘನೆ ಆಗದಂತೆ ಜಾಗೃತೆ ವಹಿಸಬೇಕು. ಗೋಹತ್ಯೆ ಮಾಡುವುದು ಕಂಡು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿ, ತಪಿತಸ್ಥರ ವಿರುದ್ಧ ಕಠಿಣ ಕೈಗೊಳ್ಳಲಾಗುವುದು. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರಡಿ ಗೋಹತ್ಯೆಗಾಗಿ ಜಾನುವಾರು ಮಾರಾಟ ಮಾಡುವುದು ಮತ್ತು ಕೊಂಡುಕೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾವಾರು ಜವಾಬ್ದಾರಿ ನೀಡಲಾಗಿದ್ದು, ಅವರಿಗೆ ಸಂಬಂಧಪಟ್ಟ ಪ್ರದೇಶದಲ್ಲಿ ಗೋಹತ್ಯೆ ನಡೆಯುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಬೆಂಗಳೂರು ನಗರ‌ ಜಿಲ್ಲಾ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋಹತ್ಯೆ ತಡೆಗಟ್ಟಲು ಬಿಬಿಎಂಪಿ ವಲಯ ಹಾಗೂ ನಗರ ಜಿಲ್ಲೆಯ ತಾಲ್ಲೂಕುಗಳಲ್ಲಿ ಟಾಸ್ಕ್ ಪೋರ್ಸ್ ನೇಮಕ ಮಾಡಲಾಗಿದ್ದು, ಜಾನುವಾರುಗಳ(ಹಸು, ಎತ್ತು,‌ ಹೋರಿ, ಕರು, ಒಂಟೆಗಳು ಮತ್ತು ಹದಿಮೂರು ವರ್ಷದ ಎಮ್ಮೆ-ಕೋಣ ಒಳಗೊಂಡಂತೆ) ವಧೆ ಮಾಡುವುದು ಕಂಡು ಬಂದರೆ ಕೂಡಲೇ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next