Advertisement

ಆತುರದ ತೀರ್ಮಾನ ಬೇಡ: ಸುಳ್ಯದ ಮುಖಂಡರ ಜತೆ ಸಭೆ ನಡೆಸಿದ ಕೋಟ ಶ್ರೀನಿವಾಸ ಪೂಜಾರಿ

09:43 AM Aug 21, 2019 | keerthan |

ಬೆಂಗಳೂರು/ ಸುಳ್ಯ : ಶಾಸಕ ಎಸ್.ಅಂಗಾರ ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿ ಪದವಿ ತಪ್ಪಿದ ಹಿನ್ನಲೆಯಲ್ಲಿ ರಾಜೀನಾಮೆಗೆ ಮುಂದಾದ ಸುಳ್ಯದ ಮುಖಂಡರೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸಮಾಲೋಚನೆ ನಡೆಸಿದ್ದಾರೆ.

Advertisement

ಸುಳ್ಯ ಶಾಸಕ ಎಸ್. ಅಂಗಾರ‌ ಅವರ ಉಪಸ್ಥಿತಿಯಲ್ಲಿ ಮುಖಂಡರ ಸಭೆ ನಡೆಯಿತು.

ಸಭೆಯಲ್ಲಿ ಬಿಜೆಪಿ ಮುಖಂಡ ಎ.ವಿ.ತೀರ್ಥರಾಮ ಅಭಿಪ್ರಾಯ ಮಂಡಿಸಿ ನಿನ್ನೆ ರಾತ್ರಿಯವರೆಗೂ ಮಂತ್ರಿಸ್ಥಾನ ಖಚಿತವಾದರೂ ಇಂದು ಬೆಳಿಗ್ಗೆ ತಪ್ಪುವ ಮೂಲಕ ಸುಳ್ಯ ಕ್ಷೇತ್ರಕ್ಕೆ ಅನ್ಯಾಯ ಮಾಡಲಾಗಿದೆ. ಇದನ್ನು ಪ್ರತಿಭಟಿಸಿ ನಾವು ನಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಹೇಳಿದರು. ಉಳಿದ ಮುಖಂಡರು ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು ಯಾವುದೇ ಆತುರದ ನಿರ್ಧಾರ ಕೈಗೊಳ್ಳಬೇಡಿ, ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ಅಲ್ಲಿಯವರೆಗೆ ಕಾದು ನೋಡೋಣ ಎಂದು ಹೇಳಿದರು.

ಗುರುವಾರ ಜಿಲ್ಲಾಮಟ್ಟದಲ್ಲಿ ಶಾಸಕರು ಹಾಗೂ ಸಂಸದರ ಸಭೆ ಕರೆದು ನಮ್ಮ ತೀರ್ಮಾನ ಹೇಳುವುದಾಗಿ ಸಂಜೀವ ಮಠಂದೂರು ಹೇಳಿದರು.

Advertisement

ಅಂಗಾರರಿಗೆ ಮಂತ್ರಿಸ್ಥಾನವೇ ಸಿಗಬೇಕು ಎಂಬುದು ನಮ್ಮ ಒತ್ತಾಯ. ಅದುವರೆಗೆ ನಾವು ನಮ್ಮ ಹುದ್ದೆಗಳಲ್ಲಿ ತಟಸ್ಥರಾಗಿ ಉಳಿಯುತ್ತೇವೆ. ರಾಜ್ಯದ ನಾಯಕರು ಬಂದು ನಮಗೆ ಬುದ್ದಿವಾದ ಹೇಳುವ ಅಗತ್ಯವಿಲ್ಲ ಎಂಬ ಮಾತುಗಳನ್ನು ಸಭೆಯಲ್ಲಿದ್ದ ಮುಖಂಡರು ಹೇಳಿದರೆನ್ನಲಾಗಿದೆ.

ಬಿಜೆಪಿ ನಾಯಕರಾದ ವೆಂಕಟ್ ವಳಲಂಬೆ, ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಚನಿಯ ಕಲ್ತಡ್ಕ, ಸುರೇಶ್ ಕಣೆಮರಡ್ಕ, ಸಂತೋಷ್ ಜಾಕೆ, ರಾಧಾಕೃಷ್ಣ ಬೊಳ್ಳೂರು, ಕೃಷ್ಣ ಶೆಟ್ಟಿ ಕಡಬ, ದಿನೇಶ್ ಮೆದು,  ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜೆಡಿಎಸ್ ಖಂಡನೆ: ಅಂಗಾರ ಅವರಿಗೆ ಮಂತ್ರಿ ಸ್ಥಾನ ತಪ್ಪಿದ ನಿರ್ಧಾರವನ್ನು ಸುಳ್ಯ ಜೆಡಿಎಸ್ ಖಂಡಿಸಿದೆ. ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಬಿ ಸದಾಶಿವ ಅವರು, ಇದು ಸುಳ್ಯಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕುಂಬ್ರ ದಯಾಕರ ಆಳ್ವ , ಮತ್ತು ರಾಕೇಶ್ ಕುಂಟಿಕಾನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next