ಬೆಳಗಾವಿ: ಬೇಡವಾದ ಮಗುವನ್ನು ಕಸದ ತೊಟ್ಟಿಯಲ್ಲಿಯೋ, ತಿಪ್ಪೆ ಗುಂಡಿಯಲ್ಲಿಯೋ ಬಿಸಾಕುವ ಕಲ್ಲು ಹೃದಯಗಳು ಇನ್ನಾದರೂ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಇಟ್ಟಿರುವ ತೊಟ್ಟಿಲಲ್ಲಿ ಹಾಕುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
ಬೇಡವಾದ ಮಗುವನ್ನು ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಬಿಡಲು ವಿಶೇಷ, ಸುಸಜ್ಜಿತ ತೊಟ್ಟಿಲಿನ ವ್ಯವಸ್ಥೆ ಮಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಇರುವ ಸಾಮಾನ್ಯ ಪ್ರತೀಕ್ಷಾಲಯದ ಪ್ಯಾಸೇಜ್ ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಆಶ್ರಮದವರು ಈ ತೊಟ್ಟಿಲು ಹಾಕಿದ್ದು, ಮಗುವನ್ನು ಇದರಲ್ಲಿ ಬಿಟ್ಟು ತೂಗಬೇಕು ಎಂದು ಅಂಗಡಿ ಸಂದೇಶ ರವಾನಿಸಿದರು.
ಬೇಡವಾದ ನಿರ್ಗತಿಕ ಮಗುವನ್ನು ತೊಟ್ಟಿಲಿಗೆ ಹಾಕಿ, ತೊಟ್ಟಿಲಿನ ಪಕ್ಕದಲ್ಲಿ ಇರುವ ಬಟನ್ ಒತ್ತಿದರೆ ಮಗು ಬಂದಿದೆ ಎಂಬ ಸಂದೇಶ ಸ್ಟೇಶನ್ ಮಾಸ್ತರ್ ಗೆ ರವಾನೆ ಆಗುತ್ತದೆ. ಈ ಒಂದು ವಿಶೇಷವಾದ ಸೌಲಭ್ಯದಿಂದಾಗಿ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ ಎಂದರು.
ಬುಧವಾರ ಬೆಳಗ್ಗೆ ಸಚಿವರಾದ ಸುರೇಶ ಅಂಗಡಿ, ಶಶಿಕಲಾ ಜೊಲ್ಲೆ,ರಾಜ್ಯಸಭಾ ಸದಸ್ಯ ಡಾ. ಪ್ರಭಾಕರಕೋರೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಅನಿಲ ಬೆನಕೆ ಅವರು ತೊಟ್ಟಿಲನ್ನು ತೂಗುವ ಮೂಲಕ ಸೇವೆಗೆ ಸಮರ್ಪಿಸಿದರು. ಪ್ರತಿಷ್ಠಾನ ಅಧ್ಯಕ್ಷೆಮನೀಷಾ ಭಾಂಡನಕರ, ರೈಲ್ವೆ ಅಧಿಕಾರಿಗಳು ಇದ್ದರು.
ಈ ಮುಂಚೆ ಬೇಡವಾದ ಮಗುವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದ ಉದಾಹರಣೆಗಳು ನಮ್ಮಕಣ್ಣುಮುಂದಿವೆ. ಇದಕ್ಕೆತಿಲಾಂಜಲಿ ಹಾಕಬೇಕೆಂಬ ಉದ್ದೇಶದಿಂದ ಸುರೇಶ ಅಂಗಡಿ ಅವರ ಪ್ರಯತ್ನದಿಂದಾಗಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಸಹಯೋಗದೊಂದಿಗೆ ತೊಟ್ಟಿಲು ಇಡಲಾಗಿದೆ. ಪ್ರತಿಷ್ಠಾನದ ಆಶ್ರಮಒರುವ ಸುಭಾಷ್ ನಗರದಲ್ಲಿಯೂ ಇಂಥ ತಾಯಿಯ ಮಡಿಲು ಎಂಬ ತೊಟ್ಟಿಲು ಇಡಲಾಗಿದೆ.